ಮಂಗಳೂರು: ಹಾಸ್ಟೇಲ್‌ನ ಸ್ನಾನದ ಗೃಹದಲ್ಲಿ (ಬಾತ್ ರೂಂ) ಬಾನುವಾರ ಬೆಳಗ್ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ರಕ್ಷಿತಾ (18) ಸಾವಿನ ಕುರಿತು ಇದೀಗ ಹಲವಾರು ರೀತಿಯ ಅನುಮಾನಗಳು ಹುಟ್ಟಿಕೊಂಡಿವೆ.
ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು, ಅಲ್ಲಿಯೇ ಹಾಸ್ಟೆಲ್‌ನಲ್ಲಿದ್ದ ಬೆಂಗಳೂರು ಜಯನಗರದ ನಿವಾಸಿ ಆನಂದ ಎಂಬುವರ ಪುತ್ರಿ ರಕ್ಷಿತಾ ವಾರ್ಡನ್ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿರುವುದಾಗಿ ತಿಳಿದು ಬಂದಿದ್ದು, ಈ ಬಗ್ಗೆ ಆಕೆ ತಾನು ಬರೆದಿರುವ ಡೆತ್ ನೋಟಿನಲ್ಲಿ ವಿವರಿಸಿದ್ದಾಳೆ ಎಂಬ ಮಾಹಿತಿಗಳು ಹೊರಬಿದ್ದಿದೆ ಎನ್ನಲಾಗಿದೆ.
ಆದರೆ ಹಾಸ್ಟೆಲ್‌ನ ಹಲವಾರು ವಿದ್ಯಾರ್ಥಿನಿಯರು ತಮ್ಮ ವಸ್ತುಗಳು ಕಾಣೆಯಾಗಿರುವ ಬಗ್ಗೆ ತನಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿನಿಯರನ್ನು ತಪಾಸಣೆಗೊಳಪಡಿಸಿದಾಗ ರಕ್ಷಿತಾ ಬಳಿ ಹಲವು ಮೊಬೈಲ್‌ಗಳು ಮತ್ತು ವಿದ್ಯಾರ್ಥಿನಿಯರ ಬಟ್ಟೆಗಳು, ಅಲಂಕಾರಿಕ ವಸ್ತುಗಳು ಪತ್ತೆಯಾಗಿತ್ತು ಎಂದು ವಾರ್ಡನ್ ತಿಳಿಸಿದ್ದಾರೆ. ತನ್ನ ತಪ್ಪಿನ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ ರಕ್ಷಿತಾ ಬಳಿಕ ತಾನು ಕದಿದ್ದ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಿದ್ದಳು. ಇದರಿಂದ ಮುಜುಗರಕ್ಕೊಳಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ವಾರ್ಡನ್ ಶಂಕೆ ವ್ಯಕ್ತಪಡಿಸಿದ್ದಾರೆ.
ಮೂಡಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ತನಿಖೆಯಿಂದಷ್ಟೇ ಪ್ರಕರಣದ ನಿಜಾಂಶ ಬಯಲಿಗೆ ಬರಬೇಕಿದೆ.