ಉಡುಪಿ: ಮೊಬೈಲ್ ವಿಚಾರದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಮಲ್ಪೆ ಸಬ್ ಇನ್ಸ್ಪೆಕ್ಟರ್ ಹಾಗೂ ಐವರು ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಸರ್ವ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಎಂ.ಕಾಂ ವಿದ್ಯಾರ್ಥಿಗಳಾದ ಆವೇಜ್ ಹಾಗೂ ಸಂಪತ್ ಎಂಬವರ ಮೇಲೆ ಮೊಬೈಲ್ ಕಳ್ಳತನ ವಿಚಾರದಲ್ಲಿ ನಿನ್ನೆ ಮಲ್ಪೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿದ್ದರು, ಅಲ್ಲದೇ ಈ ವಿಷಯ ಹೊರಗೆ ಹೇಳಿದರೆ ದನ ಕಳ್ಳತನದ ಪ್ರಕರಣದಲ್ಲಿ ಕೇಸು ದಾಖಲಿಸುವ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ವಿದ್ಯಾರ್ಥಿಗಳು ದೂರಿದ್ದರು. ಇದಕ್ಕೆ ಸಂಬಂಧಿಸಿದಂತೆ ಉಡುಪಿಯ ಸರ್ವ ಕಾಲೇಜು ವಿದ್ಯಾರ್ಥಿಗಳು ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ಅಣ್ಣಾಮಲೈ ಅವರ ಕಛೇರಿ ಎದುರು ಪ್ರತಿಭಟನೆ ನಡೆಸಿ ಮಲ್ಪೆ ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭ ವಿದ್ಯಾರ್ಥಿಗಳು ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಅಣ್ಣಾಮಲೈ, ನಿನ್ನೆ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸುತ್ತೇನೆ. ಈ ಪ್ರಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಈ ವಿಚಾರಕ್ಕಾಗಿ ವಿದ್ಯಾರ್ಥಿಗಳು ತರಗತಿಗೆ ಬಹಿಷ್ಕರಿಸಿ ಪ್ರತಿಭಟಿಸುವುದು ಸರಿಯಲ್ಲೆಂದರು. ಅಲ್ಲದೇ ವಿದ್ಯಾರ್ಥಿಗ ಭವಿಷ್ಯದ ದ್ರಷ್ಟಿಯಿಂದ ಅವರ ಮೇಲೆ ಯಾವುದೇ ಕಳ್ಳತನ ಕೇಸು ದಾಖಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿದಂತೆ ಮಲ್ಪೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಅವರು ವಿದ್ಯಾರ್ಥಿಗಳಿಗೆ ಕರೆ ಮಾಡಿದ್ದ ಸಂದರ್ಭ ಅವರು ಪೊಲೀಸರ ಬಳಿ ದುರ್ವರ್ತನೆ ತೋರಿದ್ದಾರೆ, ಅಲ್ಲದೇ ನಿಂಧಿಸಿ ಮಾತನಾಡಿದ್ದಾರೆ, ವಿದ್ಯಾರ್ಥಿಗಳಿಗೆ ಇದು ಕ್ಷೋಭೆಯಲ್ಲ, ಇಂತಹ ವರ್ತನೆಯನ್ನು ಸರಿಪಡಿಸಿಕೊಳಬೇಕೆಂದು ಎಸ್ಪಿ ಈ ಸಂದರ್ಭ ವಿದ್ಯಾರ್ಥಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.