ಬೆಂಗಳೂರು, ಸೆ.7: ರೆಸಿಡೆನ್ಸಿ ರಸ್ತೆಯಲ್ಲಿನ ಟೈಮ್ಸ್ ಬಾರ್ನ ಮಾಲೀಕನ ಮೇಲೆ ಗುಂಡು ಹಾರಿಸಿದ್ದ ನಾಲ್ವರು ಅಂತರರಾಜ್ಯ ಸುಪಾರಿ ಹಂತಕರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿಯ ಅನ್ವರ್ಹಸನ್ (32), ಮೂಡಬಿದಿರೆಯ ಇಮ್ರಾನ್ ಅಲಿಯಾಸ್ ಮೊಹಮ್ಮದ್ ಇಮ್ರಾನ್ (33), ಸುರೇಶ್ (28) ಮತ್ತು ಆಂಧ್ರಪ್ರದೇಶದ ಸುಹೈಲ್ಖಾನ್ (26) ಬಂಧಿತ ಸುಪಾರಿ ಹಂತಕರು.
ಪ್ರಕರಣದಲ್ಲಿ ಭಾಗಿಯಾಗಿರುವ ರಾಕೇಶ್ ಅಲಿಯಾಸ್ ಅಲ್ತಾಫ್ ಮತ್ತು ಅಸ್ಗರ್ ಅಲಿ ಅಲಿಯಾಸ್ ಮುನ್ನಾ ಎಂಬುವರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇವರಿಬ್ಬರು ಮೂಲತಃ ಮಂಗಳೂರು ನಗರದವರಾಗಿದ್ದು ದುಬೈನಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಕೇಶ್ ಮತ್ತು ಗುಂಡೇಟು ತಿಂದ ಟೈಮ್ಸ್ ಬಾರ್ನ ಮಾಲೀಕ ಅಕ್ತರ್ ಶಮ್ಮಿ ಅಲಿಯಾಸ್ ಚೇತನ್ ಈ ಹಿಂದೆ ವ್ಯಾಪಾರದಲ್ಲಿ ಪಾಲುದಾರರಾಗಿ ಪರಿಚಯವಾಗಿದ್ದು, ನಂತರ ವ್ಯಾಪಾರದಲ್ಲಿನ ವೈಮನಸ್ಸಿನಿಂದ ದೂರಾಗಿದ್ದಾರೆ. ಅಕ್ತರ್ ಶಮ್ಮಿ ಟೈಮ್ಸ್ ಬಾರ್ನ ಪಾಲುದಾರನಾಗಿ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದಾರೆಂದು ತಿಳಿದುಕೊಂಡ ರಾಕೇಶ್ ಅಲಿಯಾಸ್ ಅಲ್ತಾಫ್ ದುಬೈನಲ್ಲಿದ್ದುಕೊಂಡೇ ತಿಂಗಳಿಗೆ 15 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಹಣ ನೀಡಲು ಅಕ್ತರ್ ನಿರಾಕರಿಸಿದ್ದರಿಂದ ಮತ್ತೊಬ್ಬ ದುಬೈ ವಾಸಿ ಅಸ್ಗರ್ ಅಲಿ ಅಲಿಯಾಸ್ ಮುನ್ನಾ ಎಂಬಾತನ ಮೂಲಕ ಬೆಳ್ತಂಗಡಿಯ ವಾಸಿ ಅನ್ವರ್ ಹಸನ್ನನ್ನು ಸಂಪರ್ಕಿಸಿ ಚೇತನ್ನ ಕೊಲೆ ಮಾಡಿಸಲು ತಿಳಿಸಿದ್ದಾನೆ. ಅನ್ವರ್ ರಾಕೇಶ್ಗೆ ಇಮ್ರಾನ್ನ ಪರಿಚಯ ಮಾಡಿಕೊಟ್ಟಿದ್ದಾನೆ. ರಾಕೇಶ್ನು ಅನ್ವರ್ ಹಸನ್ ಮೂಲಕ ಇಮ್ರಾನ್ನಿಗೆ 15 ಲಕ್ಷ ರೂ. ಸುಪಾರಿಗೆ ಒಪ್ಪಿಸಿ 1.50 ಲಕ್ಷ ರೂ. ಮುಂಗಡ ನೀಡಿ ಕೊಲೆಗೆ ಸಂಚು ರೂಪಿಸಿದ್ದಾರೆ.
ಇಮ್ರಾನ್ ತನ್ನ ಸಹಚರರಾದ ಸುಹೇಲ್ ಮತ್ತು ರಾಜು ಎಂಬುವರನ್ನು ಬೆಂಗಳೂರಿಗೆ ಕರೆಸಿ ಬಾರ್ನ ಕೆಲಸಗಾರ ಸುರೇಶ್ ಎಂಬಾತನನ್ನು ಸಂಪರ್ಕಿಸಿ ಚೇತನ್ರ ಚಲನವಲನಗಳ ಬಗ್ಗೆ ಮಾಹಿತಿ ಡೆದುಕೊಂಡಿದ್ದಾನೆ. ಆ.16 ರಂದು ರಾತ್ರಿ ಇಮ್ರಾನ್, ಸುಹೈಲ್ ಮತ್ತು ರಾಜು ಬಾರ್ ಬಳಿಗೆ ಬಂದಿದ್ದು, ಅಕ್ತರ್ಶಮ್ಮಿ ಅಲಿಯಾಸ್ ಚೇತನ್ ಅವರು ಹೊರಗೆ ಹೋಗುತ್ತಿದ್ದಾಗ ಹಿಂದಿನಿಂದ ಹೋಗಿ 2 ಸುತ್ತು ಗುಂಡು ಹಾರಿಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಪಾರಿ ಹಂತಕರು ಕೃತ್ಯ ಎಸಗಲು ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕದ್ದು ಕೃತ್ಯ ನಂತರ ಮೆಜೆಸ್ಟಿಕ್ನ ಶ್ರೀ ಸಾಯಿ ಯಾತ್ರಿ ನಿವಾಸ್ ಪಕ್ಷ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶೂಟೌಟ್ನಲ್ಲಿ ಅಕ್ತರ್ ಶಮ್ಮಿ ಅವರ ಬೆನ್ನಿಗೆ ಗುಂಡು ತಗುಲಿ ಗಾಯಗೊಂಡಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಪಿ ಸಂದೀಪ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಶೋಭಾರಾಣಿ, ಅಶೋಕನಗರ ಠಾಣೆ ಇನ್ಸ್ಪೆಕ್ಟರ್ ವಿಜಯ ಹಡಗಲಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುಪಾರಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.