ಬೆಂಗಳೂರು, ಸೆ.14-ಕಾವೇರಿ ನ್ಯಾಯಾಧೀಕರಣ ನಿಗದಿಪಡಿಸಿದ ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ತಮಿಳುನಾಡಿನ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ಹಿನ್ನೆಲೆಯಲ್ಲಿ ಕಾವೇರಿ ನ್ಯಾಯಾಧೀಕರಣ ನಿಗದಿಪಡಿಸಿರುವ ವಾರ್ಷಿಕ 192 ಟಿಎಂಸಿ ನೀರನ್ನು ಈ ಬಾರಿ ಬರ ಹಾಗೂ ಜಲಾಶಯಗಳಲ್ಲಿ ನೀರಿಲ್ಲದ ಕಾರಣ ತಮಿಳುನಾಡಿಗೆ ಬಿಡಲು ಆಗುತ್ತಿಲ್ಲ. ಕಳೆದ ಬಾರಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರೇ ಬಿಡಲಾಗಿತ್ತು. ಇಂದಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ವಿವರಿಸಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕರ್ನಾಟಕದ ಕಾವೇರಿ ನದಿ ನೀರು ಹಂಚಿಕೆಗೆ ಕಾವೇರಿ ನಿರ್ವಹಣಾ ಪ್ರಾಧಿಕಾರ ರಚಿಸುವಂತೆ ಕೋರಿ ಪತ್ರ ಬರೆದಿದ್ದರಲ್ಲದೆ, ಇದರ ಒಂದು ಪ್ರತಿಯನ್ನು ರಾಜ್ಯಸರ್ಕಾರಕ್ಕೂ ಕಳುಹಿಸಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ ರಾಜ್ಯದ ಪ್ರಸ್ತುತ ನೀರಿನ ಪರಿಸ್ಥಿತಿಯ ಮಾಹಿತಿ ಒಳಗೊಂಡ ಪತ್ರವನ್ನು ರವಾನಿಸಿದ್ದಾರೆ. ಸೆ.4ರವರೆಗೆ 68 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಉಳಿದ ನೀರು ಹರಿಸಲು ತೊಂದರೆ ಎದುರಾಗಿದೆ. ರಾಜ್ಯದಲ್ಲಿನ ಜಲಾಶಯಗಳಲ್ಲಿ ಇರುವ ನೀರು ರಾಜ್ಯದ ಜನರು ಕುಡಿಯಲು ಮಾತ್ರ ಬಳಸಲಾಗುತ್ತಿದ್ದು, ಕೃಷಿಗೂ ನೀರಿಲ್ಲದ ಸ್ಥಿತಿ ಇದೆ. ಕಳೆದ 40 ವರ್ಷಗಳಲ್ಲಿ ಇಂತಹ ಭೀಕರ ಬರಗಾಲ ಎದುರಾಗಿತ್ತು. ನೀರು ಹರಿಸಲು ಸಾಧ್ಯವಿಲ್ಲ ಎಂದು ಪತ್ರ ಬರೆಯಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.