ನವದೆಹಲಿ: ದೆಹಲಿಯ ಮಾಜಿ ಕಾನೂನು ಸಚಿವ, ಎಎಪಿ ಶಾಸಕ ಸೋಮನಾಥ್ ಭಾರತಿ ವಿರುದ್ಧ ಇಲ್ಲಿನ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಭಾರತಿ ಕೌಟುಂಬಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದಾರೆ.
ತನಿಖೆಗೆ ಸೋಮನಾಥ್ ಅವರು ಸಹಕರಿಸುತ್ತಿಲ್ಲ ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದರಿಂದ ಅವರ ವಿರುದ್ಧ ಮೆಟ್ರೊಪಾಲಿಟನ್ ಮೆಜೆಸ್ಟ್ರೇಟ್ ಮಾನಿಕಾ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಇದಕ್ಕೂ ಮುಂಚೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜಯ್ ಗಾರ್ಗ್ ಅವರು ಮಾಲವೀಯ ನಗರ ಕ್ಷೇತ್ರದ ಶಾಸಕ ಸೋಮನಾಥ್ ಬಾರತಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದರು.
ಕಳೆದ ವಾರ ದೆಹಲಿಯ ದ್ವಾರಕಾ ನಗರ ಪೋಲಿಸ್ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯ, ಕೊಲೆಗಾಗಿ ಯತ್ನ ಇತ್ಯಾದಿ ಆರೋಪಗಳಿಗಾಗಿ ಸೋಮನಾಥ್ ವಿರುದ್ಧ ಭಾರತೀಯ ಕಾನೂನು ಸಂಹಿತೆಯ ವಿವಿಧ ಕಾಲಮಿನಡಿ ಎಫ್ ಐ ಆರ್ ದಾಖಲಿಸಲಾಗಿತ್ತು.
ಭಾರತಿ ಅವರ ಪತ್ನಿ ಲಿಪಿಕ ಮಿತ್ರ ಅವರು ಜೂನ್ ೧೦ ರಂದು ನೀಡಿದ ದೂರಿನ ಮೇರೆ ಅಫ್ ಐ ಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ೨೦೧೦ ರಲ್ಲಿ ಮದುವೆಯಾದಾಗಿನಿಂದಲೂ ಸೋಮನಾಥ್ ಅವರು ತಮ್ಮನ್ನು ನಿಂದಿಸುತ್ತಾ ಬಂದಿದ್ದು, ಕಿರುಕುಳ ನೀಡಿದ್ದು ಕೊಲೆ ಮಾಡಲು ಕೂಡ ಪ್ರಯತ್ನಿಸಿದ್ದರು ಎಂದು ಅವರು ದೂರಿದ್ದರು.