ಕರ್ನಾಟಕ

ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

siiiಮೈಸೂರು: ‘ಬಿಜೆಪಿಯವರ ಆಟಾಟೋಪ ಅಡಗಿಸಲು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ, ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ನಂಜನಗೂಡು ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ‘ಪೋಡಿಮುಕ್ತ ಗ್ರಾಮ ಅಭಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂದಿನ ಚುನಾವಣೆಗೆ ನಿಲ್ಲಬಾರದು ಎಂದು ನಿರ್ಧರಿಸಿದ್ದೆ. ಆದರೆ, ಬಿಜೆಪಿಯನ್ನು ಬಗ್ಗು ಬಡಿಯಲು ನಿಲ್ಲಲೇಬೇಕಾಗಿದೆ. ಅವರು ತಿಪ್ಪರಲಾಗ ಹಾಕಿದರೂ ಗೆಲುವು ನಮ್ಮದೇ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಹಂತದಲ್ಲಿ ‘ನಾನು ಚುನಾವಣೆಗೆ ನಿಲ್ಲಬೇಕಾ?’ ಎಂದು ಜನರನ್ನು ಉದ್ದೇಶಿಸಿ ಅವರು ಕೇಳಿದರು. ಅದಕ್ಕೆ ಜನರು ‘ನಿಲ್ಲಬೇಕು’ ಎಂದು ಒಕ್ಕೊರಲಿನಿಂದ ಕೂಗಿದರು. ಮಾತ್ರವಲ್ಲ, ಸಭಿಕರೊಬ್ಬರು ಎದ್ದು ನಿಂತು, ‘ಚುನಾವಣಾ ಠೇವಣಿಯನ್ನು ನಾವೇ ಕಟ್ಟುತ್ತೇವೆ’ ಎಂದು ಹೇಳಿದಾಗ ಸಭೆ ಚಪ್ಪಾಳೆ ತಟ್ಟಿತು.

‘ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳಾಗಿವೆ. ಇನ್ನೂ 2 ವರ್ಷ 8 ತಿಂಗಳು ನಾನೇ ಅಧಿಕಾರದಲ್ಲಿರುತ್ತೇನೆ. ಮುಂದಿನ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯಿಂದ ಏನೂ ಮಾಡಲಾಗದು’ ಎಂದು ಕುಟುಕಿದರು.

ಬಿಬಿಎಂಪಿ ಮೇಯರ್ ಸ್ಥಾನ ಕೈತಪ್ಪಿದ್ದಕ್ಕೆ ಹತಾಶೆ: ಬಿಜೆಪಿ ನಾಯಕರು ಬಿಬಿಎಂಪಿಯಲ್ಲಿ ಹೆಚ್ಚು ಸ್ಥಾನ ಪಡೆದಿದ್ದೇವೆ ಎಂದು ಬೀಗುತ್ತಿದ್ದರು. ಮಾಧ್ಯಮದವರೂ  ‘ಸಾಮ್ರಾಟ ಅಶೋಕ’ ಎಂದೆಲ್ಲಾ ಬಿಂಬಿಸಿದ್ದರಿಂದ ಅಶೋಕಗಂತೂ ತಲೆಯೇ ನಿಲ್ಲುತ್ತಿರಲಿಲ್ಲ. ಆದರೆ, ಮೇಯರ್ ಚುನಾವಣೆಯಲ್ಲಿ ಮುಗ್ಗರಿಸಿಬಿಟ್ಟರು. ಇದರಿಂದಾಗಿ ಬಿಜೆಪಿಗೆ ಹತಾಶೆಯಾಗಿದೆ. ಭ್ರಮನಿರಸನಗೊಂಡು ನೀರಿನಿಂದ ಹೊರಬಂದ ಮೀನುಗಳಂತೆ ವಿಲವಿಲನೇ ಒದ್ದಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಗೇಲಿ ಮಾಡಿದರು.

ಈಶ್ವರಪ್ಪ ಜವಾಬ್ದಾರಿಯಿಂದ ಮಾತನಾಡಲಿ: ಸಚಿವ ಮಹದೇವಪ್ಪ ಅವರ ಮಕ್ಕಳಿಗೆ ಲಕ್ವಾ ಹೊಡೆಯಲಿ ಎಂದು ಕೊಳ್ಳೇಗಾಲದಲ್ಲಿ ಈಶ್ವರಪ್ಪ ಅವರು ಬಾಯಿಗೆ ಬಂದಂತೆ ಮಾತನ್ನಾಡಿದ್ದಾರೆ. ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕರಾದ ಈಶ್ವರಪ್ಪ ತೂಕವಾಗಿ ಮಾತನಾಡಬೇಕೇ ಹೊರತು, ಈ ರೀತಿ ಚಿಲ್ಲರೆಯಾಗಿ ಮಾತನಾಡಬಾರದು. ಅವರ ಮನೆಯಲ್ಲಿ ಹಣ ಎಣಿಸುವ ಯಂತ್ರವೇ ಸಿಕ್ಕಿತು. ಸಿಕ್ಕಿದ್ದು ನಿಜ ಎಂದು ವಿಧಾನಸಭೆಯಲ್ಲಿ ನಾಚಿಕೆ ಇಲ್ಲದೇ ಪುಣ್ಯಾತ್ಮ ಒಪ್ಪಿಕೊಂಡ. ಕೇಳಿದರೆ ವ್ಯಾಪಾರ ಮಾಡುತ್ತಿದ್ದೆ ಹಣ ಎಣಿಸಲು ಬೇಕಾಗಿತ್ತು ಎಂದು ಹೇಳಿದರು. ಅದು ಯಾವ ವ್ಯಾಪಾರ ಮಾಡುತ್ತಿದ್ದರೋ ಏನೋ ಅವರೇ ಹೇಳಬೇಕು ಎಂದು ಏಕವಚನದಲ್ಲಿ ಜರಿದರು.

ಜೈಲಿಗೆ ಹೋಗಿ ಬಂದ ಗಿರಾಕಿಯಿಂದ ಪಾಠ ಕಲಿಯಬೇಕಿಲ್ಲ: ‘ಜೈಲಿಗೆ ಹೋಗಿ ಬಂದ ಗಿರಾಕಿಯಿಂದ ಪಾಠ ಕಲಿಯಬೇಕಿಲ್ಲ’ ಎಂದು ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಕುಟುಕಿದರು.

ತಡವರಿಸಿದ ಸಿ.ಎಂ.!
ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಾಗ ಸಭಿಕರು ಮಧ್ಯೆ ಮಧ್ಯೆ ವಿದ್ಯುತ್ ಕೊಡಿ, ಅಕ್ಕಿ ಕೊಡಿ ಎಂದು ಕೂಗುತ್ತಿದ್ದರು. ಸಮೀಪದಲ್ಲಿದ್ದ ಪೊಲೀಸ್ ಸಿಬ್ಬಂದಿ ಜನರ ಬಳಿಗೆ ಹೋಗಿ ಅವರ ಬೇಡಿಕೆಯನ್ನು ಸಿ.ಎಂ.ಗೆ ತಲುಪಿಸಿದರು. ಸದ್ಯಕ್ಕೆ ಪ್ರತಿ ಪಡಿತರ ಚೀಟಿದಾರರಿಗೆ ಕೊಡುತ್ತಿರುವ ಅಕ್ಕಿಯ ಪ್ರಮಾಣ ಕುರಿತು ಹೇಳುವಾಗ ಸಿದ್ದರಾಮಯ್ಯ ತಡವರಿಸಿದರು.

Write A Comment