ರಾಷ್ಟ್ರೀಯ

ಸೌದಿ ರಾಯಭಾರಿ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ: ವಿವಾದ ಬಗೆಹರಿಸಲು ದೋವಲ್ ಕಣಕ್ಕೆ

Pinterest LinkedIn Tumblr

2222ajit-dowalಹೊಸದಿಲ್ಲಿ, ಸೆ.14: ಒಂದು ವಾರದ ಹಿಂದೆ ಬೆಳಕಿಗೆ ಬಂದ ಸೌದಿ ರಾಯಭಾರಿಯ ವಿರುದ್ಧದ ಅತ್ಯಾಚಾರ ಆರೋಪವು ಹೊಸದಿಲ್ಲಿ ಹಾಗೂ ರಿಯಾದ್‌ಗಳ ನಡುವಣ ಸಂಬಂಧದಲ್ಲಿ ಬಿರುಕು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸಂಬಂಧದ ಹಿತಾಸಕ್ತಿಯಿಂದ ಅದಕ್ಕೊಂದು ಪರಿಹಾರವನ್ನು ಹುಡುಕುವ ಅಗತ್ಯವನ್ನು ಸರಕಾರ ಮನಗಂಡ ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ರನ್ನು ರಂಗಕ್ಕಿಳಿಸಲು ನಿರ್ಧರಿಸಿದೆ.
ಉಭಯ ಪಕ್ಷಗಳೂ ಈ ವಾರಾಂತ್ಯದೊಳಗೆ ಆರೋಪಿ ರಾಯಭಾರಿಯ ಭವಿಷ್ಯದ ಕುರಿತು ತಿಳುವಳಿಕೆಯೊಂದಕ್ಕೆ ಬರುವ ನಿರೀಕ್ಷೆಯಿದೆ. ಗುರ್ಗಾಂವ್ ಪೊಲೀಸರು ಆರಂಭದ ಹಂತದಲ್ಲಿ ಪ್ರಕರಣವನ್ನು ಕುಲಗೆಡಿಸಿರುವರೆಂಬ ಆರೋಪದ ಹಿನ್ನೆಲೆಯಲ್ಲಿ, ವಿದೇಶಾಂಗ ಸಚಿವಾಲಯದ ಸಲಹೆಯನ್ನಾಧರಿಸಿ ಅದನ್ನು ದಿಲ್ಲಿ ಪೊಲೀಸ್‌ಗೆ ವರ್ಗಾಯಿಸುವ ಸಂಭವವಿದೆ. ಅದು ಸುಲಭವಾಗದಂತೆ ಸಚಿವಾಲಯ ನಿರ್ಣಯವೊಂದನ್ನು ಕೈಗೊಳ್ಳಬಹುದು.

ಸರಕಾರಕ್ಕೆ ನೀಡಿರುವ ವಿವರಣೆಯಲ್ಲಿ ಸೌದಿ ಅರೇಬಿಯವು, ಗುರ್ಗಾಂವ್ ಪೊಲೀಸರು ರಾಯಭಾರಿಯ ಖಾಸಗಿತನವನ್ನು ಉಲ್ಲಂಘಿಸಿದ್ದಾರೆ ಹಾಗೂ ಅನುಮತಿಯಿಲ್ಲದೆ ಅವರ ಮನೆಯನ್ನು ಪ್ರವೇಶಿಸಿದ್ದಾರೆಂದು ಆರೋಪಿಸಿದೆ. ಸಂತ್ರಸ್ತೆಯರನ್ನು ರಕ್ಷಿಸಲು ದಾಳಿ ಮಾಡುವ ಮೊದಲು ಪೊಲೀಸರು ವಿದೇಶಾಂಗ ಸಚಿವಾಲಯದ ಅನುಮತಿಯನ್ನು ಪಡೆದಿಲ್ಲವೆಂಬುದನ್ನು ಸರಕಾರ ಒಪ್ಪಿದೆ. ಸಚಿವಾಲಯವು ಗುರ್ಗಾಂವ್ ಪೊಲೀಸರನ್ನು ಸಂಪರ್ಕಿಸಿದ ಬಳಿಕ ದಾಳಿಯನ್ನು ತಡೆಯಲಾಗಿತ್ತು. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೆಯನ್ನು ತಡೆಯುವುದಕ್ಕೂ ಸರಕಾರ ಪ್ರಯತ್ನಿಸಿತ್ತು. ಆದರೆ, ಅಪರಾಧದ ಬರ್ಬರತೆಯ ಕಾರಣದಿಂದಾಗಿ ಈ ಪ್ರಯತ್ನ ಫಲ ನೀಡಲಿಲ್ಲ.
ಮಹಿಳೆಯರನ್ನು ಮನೆಯೊಳಗೆ ಬಂಧಿಸ ಲಾಗಿತ್ತೆಂಬುದನ್ನು ನಿರಾಕರಿಸಿರುವ ಸೌದಿ, ಅವರಿಗೆ ಒಬ್ಬಂಟಿಗರಾಗಿ ಅಥವಾ ಕುಟುಂಬದೊಂದಿಗೆ ಮುಕ್ತವಾಗಿ ತಿರುಗಾಡುವ ಸ್ವಾತಂತ್ರವಿತ್ತೆಂದು ಒತ್ತಿ ಹೇಳಿದೆ. ಅದಲ್ಲದೆ, ರಾಯಭಾರಿ ಆ ಮನೆಯಲ್ಲಿ ಕೇವಲ 2 ತಿಂಗಳಿಂದಷ್ಟೇ ಇದ್ದಾನೆಂದು ಅದು ಹೇಳಿದ್ದು ಅತ್ಯಾಚಾರ ನಡೆಸಿರುವುದನ್ನು ತಳ್ಳಿ ಹಾಕಿದೆ.
ಆದರೆ, ಪೊಲೀಸರು ಹಾಗೂ ವೈದ್ಯಕೀಯ ವಿವರಗಳು ಬೇರೆಯೇ ಕತೆಯನ್ನು ಹೇಳುತ್ತಿವೆ. ಅಲ್ಲದೆ, ಸಂತ್ರಸ್ತೆಯರೇ ತಮಗಾಗಿದ್ದ ಬೀಭತ್ಸ ಅನುಭವವನ್ನು ಬಹಿರಂಗಪಡಿಸಿರುವುದರಿಂದ ಸೌದಿಯ ವಿವರಣೆಗೆ ಯಾವುದೇ ಬೆಂಬಲ ದೊರೆಯಲಾರದು.
ಆರೋಪಿಯು ರಾಜತಾಂತ್ರಿಕ ರಕ್ಷಣೆ ಹೊಂದಿದ್ದಾನೆಂದರೆ, ಭಾರತದ ಕಾನೂನಿನನ್ವಯ ಆತನ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ. ಆತ ತನ್ನ ದೇಶಕ್ಕೆ ಹಿಂದಿರುಗಬೇಕೆಂಬುದಾಗಿದೆ. ಅದರೆ, ಆತನನ್ನು ಯಾವ ಕಾರಣ ನೀಡಿ ಹಿಂದೆ ಕಳುಹಿಸುವುದೆಂಬುದು ಈಗಿನ ಪ್ರಶ್ನೆಯಾಗಿದೆ.
ಸೌದಿಯ ದೊರೆ ಅಬ್ದುಲ್ಲಾ, 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ ಬಳಿಕ ಉಭಯ ದೇಶಗಳ ನಡುವಣ ಸಂಬಂಧವು ಕಳೆದ ದಶಕದಲ್ಲಿ ಸಂಪೂರ್ಣ ಬದಲಾಗಿತ್ತು. ಸೌದಿ ಅರೇಬಿಯವು ಈಗ, ಭಾರತದ ಪ್ರಧಾನ ಶಕ್ತಿ ಮೂಲಗಳಲ್ಲಿ ಒಂದಾಗಿದೆ. ಎರಡೂ ದೇಶಗಳು ಭಯೋತ್ಪಾದನೆ ನಿಯಂತ್ರಣದಲ್ಲಿ ಪರಸ್ಪರ ಸಹಕಾರ ನೀಡುತ್ತಿವೆ.
ಈ ಪ್ರಕರಣದಲ್ಲಿ ದೇವಯಾನಿ ಖೋಬ್ರಗದೆ ಪ್ರಕರಣದ ನೆರಳಿದೆ. ನ್ಯೂಯಾರ್ಕ್ ಪೊಲೀಸರು ದೇವಯಾನಿಯನ್ನು ಬಂಧಿಸಿ, ಅವರ ಬಟ್ಟೆ ಬಿಚ್ಚಿಸಿ ತಪಾಸಣೆ ಮಾಡಿದ್ದರು. ಆದರೆ, ಅದಕ್ಕೆ ಅಮೆರಿಕದ ರಾಜ್ಯಾಂಗ ಇಲಾಖೆಯ ತುರ್ತು ಅನುಮತಿಯಿತ್ತು. ಇಲ್ಲಿ, ಗುರ್ಗಾಂವ್ ಪೊಲೀಸರ ಏಕಪಕ್ಷೀಯ ಕಾರ್ಯಾಚರಣೆ ಆಧಾರದಲ್ಲಿ ಸೌದಿ ತನ್ನ ವಾದವನ್ನು ಮಂಡಿಸುತ್ತಿದೆ. ಆದರೆ, ಅದಕ್ಕೆ ವಿದೇಶಾಂಗ ಸಚಿವಾಲಯ ಆದೇಶ ನೀಡದ ಕಾರಣ ಸರಕಾರದ ನಿಲುವು ಸ್ಪಷ್ಟವಿದೆ.

Write A Comment