ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) 464 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗಾಗಿ ನಡೆಸುತ್ತಿರುವ ಮುಖ್ಯಪರೀಕ್ಷೆಯ ಮೂರನೇ ದಿನವಾದ ಭಾನುವಾರದ ಪರೀಕ್ಷೆಗಳು ಸುಸೂತ್ರವಾಗಿ ನಡೆದವು.
ಶನಿವಾರ ಕೆಲವು ಪ್ರಶ್ನೆಪತ್ರಿಕೆಗಳು ಬಹಿರಂಗಗೊಂಡಿದ್ದರಿಂದ, ಪರೀಕ್ಷೆ ಮುಂದೂಡಲಾಗುತ್ತದೆಯೇ ಇಲ್ಲವೇ ಎಂಬ ಬಗ್ಗೆ ಉಂಟಾಗಿದ್ದ ಗೊಂದಲದ ನಡುವೆಯೇ ಅಭ್ಯರ್ಥಿಗಳು ಭಾನುವಾರ ಸಾಮಾನ್ಯ ಅಧ್ಯಯನ ವಿಷಯದ ಎರಡು ಪರೀಕ್ಷೆಗಳನ್ನು ಬರೆದರು. ಶನಿವಾರ ಬಹಿರಂಗಗೊಂಡಿದ್ದ ಪ್ರಶ್ನೆಪತ್ರಿಕೆಗಳಲ್ಲಿದ್ದ ಯಾವ ಪ್ರಶ್ನೆಗಳೂ ಭಾನುವಾರದ ಪ್ರಶ್ನೆಪತ್ರಿಕೆಗಳಲ್ಲಿ ಇರಲಿಲ್ಲ ಎಂದು ಅಭ್ಯರ್ಥಿಗಳು ಖಚಿತಪಡಿಸಿದ್ದಾರೆ.
ಹಾಗಿದ್ದರೂ, ಅಭ್ಯರ್ಥಿಗಳಲ್ಲಿನ ದುಗುಡ ಕಡಿಮೆಯಾಗಿಲ್ಲ. ಶನಿವಾರ ಬಹಿರಂಗಗೊಂಡಿರುವ ಹೆಚ್ಚಿನ ಪ್ರಶ್ನೆಗಳು ಸೋಮವಾರ ನಡೆಯಲಿರುವ ಐಚ್ಛಿಕ ವಿಷಯದ (ನೀತಿಶಾಸ್ತ್ರ) ಪರೀಕ್ಷೆಯದ್ದು ಎಂಬುದು ಅಭ್ಯರ್ಥಿಗಳ ಸಂಶಯ. ಹಾಗಾಗಿ, ಸೋಮವಾರ ಏನಾಗುವುದೋ? ಎಂಬ ಆತಂಕ ಅವರನ್ನು ಕಾಡುತ್ತಿದೆ.
ಗೊಂದಲ: ಮುಖ್ಯಪರೀಕ್ಷೆ ಮುಂದೂಡಿಕೆ ವಿಚಾರದಲ್ಲಿ ಅಭ್ಯರ್ಥಿಗಳು ಭಾನುವಾರ ಬೆಳಿಗ್ಗೆ ಗೊಂದಲದಲ್ಲಿ ಮುಳುಗಿದ್ದರು. ಪರೀಕ್ಷೆ ಮುಂದೂಡಲಾಗುವುದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ನೀಡಿದ್ದ ಹೇಳಿಕೆ ಮತ್ತು ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಹೇಳಿದ್ದು ಅಭ್ಯರ್ಥಿಗಳ ಗೊಂದಲಕ್ಕೆ ಕಾರಣವಾಗಿತ್ತು.
ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿ ಕೆಲವು ಅಭ್ಯರ್ಥಿಗಳು ಬೆಂಗಳೂರಿನ ಗೃಹ ವಿಜ್ಞಾನ ಸಂಸ್ಥೆಯಲ್ಲಿ ಭಾನುವಾರ ಪರೀಕ್ಷೆ ಆರಂಭಕ್ಕೂ ಮುನ್ನ ಪ್ರತಿಭಟನೆ ನಡೆಸಿದರು.
*
ಪರೀಕ್ಷೆ ತೊಂದರೆ ಇಲ್ಲದೆ ನಡೆದಿದೆ. ಬೇರೆ ಪ್ರಶ್ನೆ ಕೇಳಲಾಗಿದೆ. ಬಹಿರಂಗಗೊಂಡ ಪ್ರಶ್ನೆಪತ್ರಿಕೆಗಳಲ್ಲಿದ್ದ ಪ್ರಶ್ನೆಗಳು ಪುನರಾವರ್ತನೆಯಾಗುವುದಿಲ್ಲ.
– ಮನೋಜ್ ಕುಮಾರ್ ಮೀನಾ