ಬೆಂಗಳೂರು: ಕೆಂಡಸಂಪಿಗೆ ಸಿನೆಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ವೇಳೆಯಲ್ಲಿ ಸೂರಿ ಸಿನೆಮಾ ಹಿಂದಿನ ಕೆಂಡದ ಕಥೆಗಳನ್ನು ಬಿಚ್ಚಿಟ್ಟಿದ್ದಾರೆ. ಈ ಸಿನೆಮಾವನ್ನು ಸಂಪೂರ್ಣಗೊಳಿಸಲು ತಮ್ಮ ಕಾರು ಮಾರಿದ ಕಥೆಯನ್ನು ಸೂರಿ ತೋಡಿಕೊಂಡಿದ್ದಾರೆ.
“ಹೌದು, ನಾನು ನನ್ನ ಕಾರು ಮಾರಬೇಕಾಯಿತು. ಆ ಕಾರನ್ನು ಹಚ್ಚಿಕೊಂಡಿದ್ದೆ, ಆದರೆ ಕೆಂಡಸಂಪಿಗೆ ನಿರ್ಮಾಣದ ವೇಳೆ ಅದನ್ನು ಕೊಟ್ಟುಬಿಡಬೇಕಾಯಿತು” ಎನ್ನುತ್ತಾರೆ ಸೂರಿ.
“ಎಲ್ಲದ್ದಕ್ಕೂ ಹಣ ಬೇಕು. ‘ಕಡ್ಡಿಪುಡಿ’ ಬಿಡುಗಡೆಯಾದ ಮೇಲೆ ನಾನು ಹಣಕಾಸಿನ ತೊಂದರೆ ಅನುಭವಿಸಿದೆ. ನಂತರ ‘ದೊಡ್ಮನೆ ಹುಡುಗ’ ಒಪ್ಪಿಕೊಂಡೆ ಮತ್ತು ನನ್ನೆಲ್ಲಾ ಹಣವನ್ನು ಸಿನೆಮಾದಲ್ಲಿ ಹೂಡಿದೆ” ಎನ್ನುತ್ತಾರೆ ನಿರ್ದೇಶಕ.
ಈ ಎಲ್ಲ ಕಷ್ಟಕೋಟಲೆಗಳ ನಡುವೆಯೂ ಬಿಡುಗಡೆಯಾಗಿರುವ ಸಿನೆಮಾ ವಿವಿಧ ಮಲ್ಟಿಪ್ಲೆಕ್ಸ್ ತೆರೆಗಳಲ್ಲಿ ೪೦ ಕಡೆ ಪ್ರದರ್ಶನ ಕಾಣುತ್ತಿದೆ. ಅನುಭವಿಸಿದ ತೊಂದರೆಗಳಿಂದಲೇ ಇಂದು ಸಿಹಿ ಯಶಸ್ಸು ಕಂಡಿರುವುದು ಎನ್ನುವ ಸೂರಿ ” ನನಗೆ ಮತ್ತೆ ಆತ್ಮವಿಶ್ವಾಸ ಬಂದಿದೆ. ಒಂದು ತೆರೆಯ ಸಿನೆಮಾ ಮಂದಿರಗಳಲ್ಲಿ ಚಿತ್ರಪ್ರದರ್ಶನವನ್ನು ಬೇಕಂತಲೇ ನಿಯಂತ್ರಿಸಿದ್ದೆವು. ಈ ವಾರ ನಮ್ಮ ಸಿನೆಮಾ ಯಶಸ್ಸಿನ ತುತ್ತತುದಿಗೆ ಏರುತ್ತದೆಂಬ ಭರವಸೆ ಇದೆ. ಕಳೆದ ಒಂದು ವಾರದಲ್ಲೇ, ಬಾಡಿಗೆ ಮತ್ತು ಪ್ರಚಾರ ಕಳೆದು ಒಂದು ಕೋಟಿ ಗಳಿಸಿದ್ದೇವೆ. ಇದು ಯಾವುದೇ ನಿರ್ದೇಶಕನಿಗೆ ಒಂದು ಸಾಧನೆ. ನಾವು ೨ ಕೋಟಿ ವ್ಯಯಿಸಿದ್ದು, ಅದನ್ನು ಗಳಿಸುವ ಭರವಸೆ ಇದೆ” ಎನ್ನುತ್ತಾರೆ ಸೂರಿ.
ಕನ್ನಡ ಚಿತ್ರರಂಗದ ವಿವಿಧ ನಟರು ಕೂಡ ಪ್ರಶಂಸೆ ವ್ಯಕ್ತಪಡಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸುವ ಸೂರಿ “ಹಲವಾರು ತಾರೆಯರು ಕರೆ ಮಾಡಿದ್ದರು. ಅದರಲ್ಲೂ ನಟರಾದ ಪುನೀತ್ ಮತ್ತು ಸೂರಿ ಅವರ ಕರೆಗಳು ಖುಷಿ ನೀಡಿದವು. ಬೇರೆ ಭಾಷೆಯ ಸಿನೆಮಾಗಳು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಈ ಸಮಯದಲ್ಲಿ ಈ ಪ್ರೋತ್ಸಾಹ ಅತಿ ಮುಖ್ಯ. ಅನ್ಯ ಭಾಷೆಯ ಸಿನೆಮಾಗಳು ಒರಿಜಿನಲ್ ಆಗಿದ್ದರೂ ಅಥವಾ ರಿಮೇಕ್ ಆಗಿದ್ದರೂ ಅವನ್ನು ಹೈಪ್ ಮಾಡುತ್ತೇವೆ” ಎನ್ನುತ್ತಾರೆ ಸೂರಿ.
ಕೆಂಡಸಂಪಿಗೆಯ ಮುಂದಿನ ಭಾಗ “ಕಾಗೆ ಬಂಗಾರ” ಇನ್ನು ಹೆಚ್ಚು ವಿಳಂಬವಾಗುವುದಿಲ್ಲ, ಸರಿಯಾದ ಸಮಯಕ್ಕೆ ಬಿಡುಗಡೆಯಾಗುತ್ತದೆ ಎನ್ನುವ ಸೂರಿ “ಕೆಂಡಸಂಪಿಗೆಗೆ ಹಾಡುಗಳು ಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದೆವು. ಆದರೆ ನಂತರ ನಾಲ್ಕು ಹಾಡುಗಳನ್ನು ನಿರ್ಮಿಸಿದೆವು. ಕಾಗೆ ಬಂಗಾರದ ಬಗ್ಗೆ ನಮಗೆ ಸ್ಪಷ್ಟತೆ ಇದ್ದು, ಸ್ವಲ್ಪ ಚಿತ್ರೀಕರಣ ಆಗಲೇ ಪೂರ್ಣಗೊಂಡಿದೆ. ಪುನೀತ್ ಅವರ ‘ದೊಡ್ಮನೆ ಹುಡುಗ’ ಪೂರ್ಣಗೊಂಡ ನಂತರ ಕಾಗೆ ಬಂಗಾರ ಚಿತ್ರೀಕರಣ ನಡೆಸಲಿದ್ದೇನೆ” ಎಂದು ತಿಳಿಸುತ್ತಾರೆ ಸೂರಿ.