ಕೋಲ್ಕತಾ,ಸೆ.28: ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗುಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಪೂರ್ವ ವಲಯದ ಅಭ್ಯರ್ಥಿಯನ್ನಾಗಿ ಶಶಾಂಕ್ ಮನೋಹರ್ ಹೆಸರನ್ನು ಸೂಚಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾರ್ಚ್ನಲ್ಲಿ ನಡೆದ ಬಿಸಿಸಿಐಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪವಾರ್ ಗುಂಪಿಗೆ ಪೂರ್ವ ವಲಯದಿಂದ ಸೂಕ್ತ ಬೆಂಬಲ ದೊರೆತಿರಲಿಲ್ಲ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ವೇಳೆ ಸಿಎಬಿ, ಎನ್ಸಿಸಿ , ತ್ರಿಪುರಾ ಹಾಗೂ ಜಾರ್ಖಂಡ್ ಎಂಬಿತ್ಯಾದಿ ಹಲವು ಆಯ್ಕೆಗಳನ್ನು ಆಯ್ದುಕೊಳ್ಳುವ ಅವಕಾಶವು ಶಶಾಂಕ್ ಮನೋಹರ್ಗಿತ್ತು. ಈ ಸಂಬಂಧ ಗಂಗುಲಿಯು ಮನೋಹರ್ರ ಪ್ರಥಮ ಆಯ್ಕೆಯಾಗಿತ್ತು ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.
2004ರಲ್ಲಿ ಆಸ್ಟ್ರೇಲಿಯದ ವಿರುದ್ಧ ನಾಗ್ಪುರದಲ್ಲಿ ನಡೆದಿದ್ದ ಟೆಸ್ಟ್ ಕ್ರಿಕೆಟ್ ಪಂದ್ಯಾಟದ ಪಿಚ್ ವಿಷಯದಲ್ಲಿ ಗಂಗುಲಿ ಹಾಗೂ ಮನೋಹರ್ ಮಧ್ಯೆ ಕೊಂಚ ಮನಸ್ತಾಪ ಏರ್ಪಟ್ಟಿದ್ದರೂ ಉತ್ತಮ ಸಂಬಂಧವನ್ನೇ ಇಬ್ಬರು ಕಾಯ್ದುಕೊಂಡು ಬಂದಿದ್ದರು. ಇದೀಗ 11 ವರ್ಷಗಳ ಬಳಿಕ ಶಶಾಂಕ್ ಹಾಗೂ ಗಂಗುಲಿಯ ಸಂಬಂಧ ಹೊಸ ತಿರುವನ್ನೇ ಪಡೆದುಕೊಂಡಿದೆ. ಜಗಮೋಹನ್ ದಾಲ್ಮಿಯಾರ ನಿಧನದ ನಂತರ ಬೆಂಗಾಳ್ ಕ್ರಿಕೆಟ್ ಅಸೋಶಿಯೇಶನ್ ಚುಕ್ಕಾಣಿಯನ್ನು ಗಂಗುಲಿ ಪಡೆದುಕೊಂಡರೆ, ಶಶಾಂಕ್ ಮುಂದಿನ ಬಿಸಿಸಿಐ ಅಧ್ಯಕ್ಷರಾಗುವತ್ತ ದಾಪುಗಾಲಿಟ್ಟಿದ್ದಾರೆ.
ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಗುಲಿಯನ್ನು ಸಿಎಬಿ ಅಧ್ಯಕ್ಷರಾಗಿ ಶಿಫಾರಸು ಮಾಡಿದ ಬಳಿಕ ಅವರನ್ನು ಶಶಾಂಕ್ ಪ್ರಥಮರಾಗಿ ಅಭಿನಂದಿಸಿದ್ದರು. ವಿಶೇಷ ಸಾಮಾನ್ಯ ಸಭೆಯ ಸಂಬಂಧ ಕಾರ್ಯದರ್ಶಿ ಅನುರಾಗ್ ಠಾಕೂರ್ರ ಸಮನ್ಸ್ಗಾಗಿ ಬಿಸಿಸಿಐ ಘಟಕಗಳು ಕಾತರದಿಂದ ಕಾಯುತ್ತಿವೆ. ಚುನಾವಣೆಯ ಮೂಲಕ ಅಥವಾ ಅವಿರೋಧವಾಗಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಈ ಸಭೆಯಲ್ಲಿ ನಡೆಯಲಿದೆ.