ಕನ್ನಡ ವಾರ್ತೆಗಳು

ನಂದಿಗುಡ್ಡ ಸ್ಮಶಾನದಲ್ಲಿ ಮುಸ್ಲಿಂರಿಗೂ ಪಾಲು ವಿವಾದ : ಆಕ್ಷೇಪಣೆ ಸಲ್ಲಿಸಲು ಅವಕಾಶ (ಪ್ರಕಟಣೆ)

Pinterest LinkedIn Tumblr

vhp_nandigudde_pro10

File Pics

ಮಂಗಳೂರು : ಮಂಗಳೂರು ತಾಲೂಕು ಅತ್ತಾವರ ಗ್ರಾಮದ ಸ.ನಂ. 251/1 ರಲ್ಲಿ 0.26 ಎಕ್ರೆ ವಿಸ್ತೀರ್ಣದ ಜಮೀನನ್ನು ಮುಸ್ಲಿಂ ಜನಾಂಗದವರಿಗೆ ಸ್ಮಶಾನಕ್ಕಾಗಿ ಕಾದಿರಿಸುವ ಬಗ್ಗೆ ಕೋರಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಇವರು ತಹಶೀಲ್ದಾರರು ಮಂಗಳೂರು ಇವರಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಅದರಂತೆ ತಹಶೀಲ್ದಾರರು ಪ್ರಸ್ತಾವನೆ ತಯಾರಿಸಿದ್ದು, ಈ ಬಗ್ಗೆ ವಿಶ್ವ ಹಿಂದು ಪರಿಶತ್, ಕಟೀಲ್ ದಿನೇಶ್ ಪೈ ಹಾಗೂ ಅತ್ತಾವರ ಗ್ರಾಮದ ಗ್ರಾಮಸ್ಥರು ಆಕ್ಷೇಪಣೆ ಸಲ್ಲಿಸಿದ್ದು, ತಹಶೀಲ್ದಾರರು ಈ ಬಗ್ಗೆ ವಿಚಾರಣೆ ನಡೆಸದೇ ಕಡತವನ್ನು ಸಲ್ಲಿಸಿದ್ದು ಈ ಆಕ್ಷೇಪಣೆಗಳ ಬಗ್ಗೆ ಸಹಾಯಕ ಆಯುಕ್ತರ ಕಛೇರಿಯಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಅತ್ತಾವರ ಗ್ರಾಮದ ಸ.ನಂ. 250 ಹಾಗೂ ಸ.ನಂ. 251 ರ ಜಮೀನು ಮೂಲ ಅಡಂಗಲ್ ನಂತೆ ಪೊರಂಬೋಕು ಸ್ಮಶಾನ ಜಮೀನು ಎಂದಾಗಿರುತ್ತದೆ. ಸದ್ರಿ ಜಮೀನು ಸಾರ್ವಜನಿಕ ಸ್ಮಶಾನ ಉದ್ದೇಶಕ್ಕಾಗಿ ಈ ಹಿಂದೆಯೇ ಕಾದಿರಿಸಲಾಗಿತ್ತು ಮತ್ತು ಸದ್ರಿ ಜಮೀನನ್ನು ಹಿಂದೂ, ಬ್ರಹ್ಮ ಸಮಾಜ, ಸಿರಿಯನ್ ಕ್ರಿಶ್ಚಿಯನ್ ಮತ್ತು ಜುಮೇದಾ ಕ್ರಿಶ್ಚಿಯನ್ ಜನಾಂಗದವರು ಸ್ಮಶಾನಕ್ಕಾಗಿ ಉಪಯೋಗಿಸುತ್ತಿದ್ದಾರೆ.

ಆದರೆ ಸರಕಾರದ ಸುತ್ತೋಲೆಯಂತೆ ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನಕ್ಕಾಗಿ ಸೂಕ್ತವಾದ ಜಮೀನು ಕಾದಿರಿಸಿ, ಗ್ರಾಮದಲ್ಲಿನ ಎಲ್ಲಾ ಜನಾಂಗದವರು ಉಪಯೋಗಿಸಲು ಅವಕಾಶ ಕಲ್ಪಿಸಲು ಸೂಚನೆ ನೀಡಲಾಗಿದೆ.

ಪ್ರಕೃತ ಜಮೀನನ್ನು ಮುಸ್ಲಿಂ ಜನಾಂಗದವರಿಗೆ ಸ್ಮಶಾನಕ್ಕಾಗಿ ಕಾದಿರಿಸಲು ಸಲ್ಲಿಸಲಾದ ಪ್ರಸ್ತಾವನೆ ಬಗ್ಗೆ ವಿಶ್ವ ಹಿಂದು ಪರಿಶದ್, ಕಟೀಲ್ ದಿನೇಶ್ ಪೈ ಹಾಗೂ ಅತ್ತಾವರ ಗ್ರಾಮದ ಗ್ರಾಮಸ್ಥರು ಆಕ್ಷೇಪಣೆ ಸಲ್ಲಿಸಿರುತ್ತಾರೆ. ಪ್ರಸ್ತಾವಿತ ಜಮೀನು ಸಾರ್ವಜನಿಕ ಸ್ಮಶಾನ ಆಗಿರುವುದರಿಂದ ಈ ಜಮೀನನ್ನು ಮುಸ್ಲಿಂ ಜನಾಂಗದವರಿಗೆ ಸ್ಮಶಾನಕ್ಕಾಗಿ ಕಾದಿರಿಸುವ ಬಗ್ಗೆ ಆಕ್ಷೇಪಣಾದಾರರಿಗೆ ಹಾಗೂ ಅರ್ಜಿದಾರರಿಗೆ ನೋಟಿಸ್ ನೀಡಿಲಾಗಿದ್ದು ಸಹಾಯಕ ಆಯುಕ್ತರ ಕಛೇರಿಯಲ್ಲಿ ವಿಚಾರಣಾ ಹಂತದಲ್ಲಿದೆ.

ಅರ್ಜಿದಾರರು ಹಾಗೂ ಆಕ್ಷೇಪಣಾದಾರರುಗಳಿಗೆ ತಮ್ಮ ತಮ್ಮ ಅಹವಾಲುಗಳನ್ನು ಸಲ್ಲಿಸಲು ಸಮಯಾವಕಾಶ ನೀಡಲಾಗಿದೆ. ಅರ್ಜಿದಾರರ ಕೋರಿಕೆಯು ಪ್ರಕೃತ ವಿಚಾರಣಾ ಹಂತದಲ್ಲಿದ್ದು ಜಮೀನು ಕಾದಿರಿಸುವ ಬಗ್ಗೆ ಅಂತಿಮ ಆದೇಶ ಹೊರಡಿಸಲಾಗಿರುವುದಿಲ್ಲ.

ಈ ವಿಚಾರದಲ್ಲಿ ಅರ್ಜಿದಾರರು ಮತ್ತು ಆಕ್ಷೇಪಣಾದಾರರ ಅಹವಾಲುಗಳನ್ನು ಆಲಿಸಿ ಕಾನೂನಿನ ಅಂಶಗಳನ್ನು ಪರಿಶೀಲಿಸಿ ಉಭಯ ಜನಾಂಗದವರ ಹಾಗೂ ನಗರದ ಸಮಗ್ರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಗೊಂಡು ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ – ಸಹಾಯಕ ಆಯುಕ್ತರು, ಮಂಗಳೂರು ಉಪವಿಭಾಗ, ಮಂಗಳೂರು.

Write A Comment