ಕನ್ನಡ ವಾರ್ತೆಗಳು

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರಶಾಂತ್ ಕುಟುಂಬಕ್ಕೆ 25 ಲ.ರೂ ಪರಿಹಾರ ನೀಡಲು ಸಂಸದ ನಳಿನ್ ಕುಮಾರ್ ಆಗ್ರಹ.

Pinterest LinkedIn Tumblr

Bjp_press_meet_1

ಮಂಗಳೂರು,ಅ.14 : ಇತ್ತೀಚಿಗೆ ಮೂಡಬಿದ್ರೆಯಲ್ಲಿ ಹಾಡುಹಗಲೇ ದುಷ್ಕರ್ಮಿಗಳ ತಂಡದಿಂದ ಹತ್ಯೆಗೀಡಾದ ಹೂವಿನ ವ್ಯಾಪಾರಿ ಬಜರಂಗದಳದ ಸಕ್ರೀಯ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ಬುಧವಾರ ನಗರದ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕೊಲೆ ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಸಚಿವರುಗಳು ಮೌನವಹಿಸಿರುವುದು ಈಗ ಪ್ರಶ್ನಾರ್ಹವಾಗಿದೆ. ಈ ಕೊಲೆಯ ಹಿಂದೆ ರಾಜಕೀಯ ಕೈವಾಡ ಇದೆ ಎಂದು ಜಿಲ್ಲೆಯ ಜನ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಯಾಕೆ ಮೌನವಾಗಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ. ಜಿಲ್ಲಾ ಉಸ್ತುವಾರಿ ಸಚಿವರು ರಾಜಕೀಯವನ್ನು ಬದಿಗಿಟ್ಟು ಕೊಲೆಯಾದ ಪ್ರಶಾಂತ್ ಪೂಜಾರಿ ಅವರ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಬೇಕಿತ್ತು. ಆದರೆ ಅವರು ಇದುವರೆಗೆ ಭೇಟಿ ನೀಡಿಲ್ಲ ಎಂದು ಆರೋಪಿಸಿದರು.

Bjp_press_meet_2 Bjp_press_meet_3 Bjp_press_meet_4

ಈ ಕೊಲೆ ಹಾಡಹಗಲೇ ನಡೆದಿದ್ದರೂ ಪೊಲಿಸರು ಕೊಲೆಗಡುಕರನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದ ಅವರು, ತಕ್ಷಣ ಪೊಲೀಸರು ಕೊಲೆಗಡುಕರನ್ನು ಬಂಧಿಸಬೇಕು ಎಂದೂ ಆಗ್ರಹಿಸಿದರು.

ಸರ್ಕಾರಕ್ಕೆ ಪಾದಯಾತ್ರೆಯ ಬಿಸಿ ಮುಟ್ಟಿದೆ : ನಳಿನ್ ಕುಮಾರ್

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮಂಗಳೂರಿನಿಂದ ಎತ್ತಿನಹೊಳೆವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆ ಪಾದಯಾತ್ರೆ ಯಶಸ್ವಿಯಾಗಿದೆ. ಸುಮಾರು 25 ಸಾವಿರ ಜನರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು ಎಂದು ನಳಿನ್ ಕುಮಾರ್ ತಿಳಿಸಿದರು.

ಸರ್ಕಾರಕ್ಕೆ ಪಾದಯಾತ್ರೆಯ ಬಿಸಿ ಮುಟ್ಟಿದೆ. ಸರ್ಕಾರ ಪಾದಯಾತ್ರೆಯಿಂದ ದಿಗಿಲುಗೊಂಡ ಕಾರಣವೇ ಎತ್ತಿನಹೊಳೆ ತಲಪುವ ಮೊದಲೇ ನಮ್ಮನ್ನು ತಡೆಯುವ ಪ್ರಯತ್ನ ನಡೆಸಿತು ಎಂದು.ಹೇಳಿದ ಅವರು, ಎತ್ತಿನಹೊಳೆ ಯೋಜನೆ ಕಾಮಗಾರಿ ನಿಲ್ಲಿಸುವಲ್ಲಿ ಜಿಲ್ಲೆಯ ನಾಲ್ವರು ಸಚಿವರೂ ವಿಫಲವಾಗಿದ್ದಾರೆ ಎಂದು ದೂರಿದರು. ಎತ್ತಿನಹೊಳೆ ಯೋಜನೆಯನ್ನು ಕೈಬಿಡುವ ತನಕ ಹೋರಾಟ ಮುಂದುವರಿಯುತ್ತದೆ ಎಂದು ಕಟೀಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ್ ನಾಯಕ್, ಮಾಜಿ ಉಪಸ್ಪೀಕರ್ ಎನ್.ಯೋಗೀಶ್ ಭಟ್, ಮಾಜಿ ಶಾಸಕರಾದ ಪದ್ಮನಾಭ ಕೊಠಾರಿ, ಎಂ.ಮೋನಪ್ಪ ಭಂಡಾರಿ, , ಎ.ರುಕ್ಮಯ್ಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Write A Comment