ಇಸ್ಲಾಮಾಬಾದ್, ಅ.16: ದಶಕದ ಹಿಂದೆ ಆಕಸ್ಮಿಕವಾಗಿ ಗಡಿದಾಟಿ, ಪಾಕಿಸ್ತಾನದಲ್ಲಿ ನೆಲೆಸಿದ್ದ ಕಿವುಡಿ ಹಾಗೂ ಮೂಕಿ ಭಾರತೀಯ ಯುವತಿ ಗೀತಾ ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾಳೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಗೀತಾ ಭಾರತಕ್ಕೆ ಹಿಂದಿರುಗಲಿದ್ದಾಳೆಂದು ತಿಳಿಸಿದ್ದಾರೆ. ‘‘ ಗೀತಾ ಶೀಘ್ರದಲ್ಲೇ ಭಾರತಕ್ಕೆ ವಾಪಸಾಗಲಿದ್ದಾಳೆ. ನಾವು ಆಕೆಯ ಕುಟುಂಬವನ್ನು ಪತ್ತೆಹಚ್ಚಿದ್ದೇವೆ. ಡಿಎನ್‌ಎ ಪರೀಕ್ಷೆ ನಡೆಸಿದ ಬಳಿಕ ಆಕೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು’’ ಎಂದವರು ತಿಳಿಸಿದ್ದಾರೆ.
ಗಡಿದಾಟಿ ಬಂದಿದ್ದ ಗೀತಾಳನ್ನು ಎದಿ ಪ್ರತಿಷ್ಠಾನದ ಮುಖ್ಯಸ್ಥೆ ಬಿಲ್ಕೀಸ್ ಎದಿ ದತ್ತು ತೆಗೆದುಕೊಂಡಿದ್ದರು. ಕರಾಚಿಯಲ್ಲಿ ಅವರು ಗೀತಾಗೆ ಆಶ್ರಯ ನೀಡಿದ್ದರು.
10 ವರ್ಷಗಳಿಂದ ಪಾಕಿಸ್ತಾನದಲ್ಲಿ ಸಿಕ್ಕಿಹಾಕಿಕೊಂಡಿದ್ದ 23 ವರ್ಷ ವಯಸ್ಸಿನ ಗೀತಾ ಸದ್ಯದಲ್ಲೇ ತನ್ನ ಕುಟುಂಬದೊಂದಿಗೆ ಪುನರ್‌ಮಿಲನಗೊಳ್ಳಲಿದ್ದಾಳೆಂದು ಎದಿ ಪ್ರತಿಷ್ಠಾನದ ವಕ್ತಾರ ಅನ್ವರ್ ಕಾಝ್ಮಿ ದೃಢಪಡಿಸಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಶನ್ ಕಳುಹಿಸಿದ ಛಾಯಾಚಿತ್ರದ ಮೂಲಕ ಗೀತಾ ತನ್ನ ತಂದೆ, ಮಲತಾಯಿ ಹಾಗೂ ಒಡಹುಟ್ಟಿದವರನ್ನು ಗುರುತಿಸಿದ್ದಾಳೆ. ಆಕೆಯ ಕುಟುಂಬವು ಬಿಹಾರದಲ್ಲಿ ವಾಸವಾಗಿದೆಯೆನ್ನಲಾಗಿದೆ.
15 ವರ್ಷಗಳ ಹಿಂದೆ ಲಾಹೋರ್ ರೈಲು ನಿಲ್ದಾಣದಲ್ಲಿ ನಿಂತಿದ್ದ ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ. 7-8 ವರ್ಷ ವಯಸ್ಸಿನ ಗೀತಾ ಏಕಾಂಗಿಯಾಗಿ ಕುಳಿತಿರುವುದನ್ನು ಪಾಕ್ ರೇಂಜರ್ಸ್ ಪಡೆಯ ಯೋಧರು ಪತ್ತೆಹಚ್ಚಿದ್ದರು. ಪೊಲೀಸರು ಆಕೆಯನ್ನು ಲಾಹೋರ್‌ನಲ್ಲಿರುವ ಎದಿ ಪ್ರತಿಷ್ಠಾನಕ್ಕೆ ಕರೆದುಕೊಂಡು ಹೋದರು. ಆನಂತರ ಆಕೆಗೆ ಪ್ರತಿಷ್ಠಾನವು ಕರಾಚಿಯಲ್ಲಿ ಆಶ್ರಯ ಒದಗಿಸಿತು. ಗೀತಾಳನ್ನು ಭೇಟಿಯಾಗಲು ಹಾಗೂ ಆಕೆಯ ಕುಟುಂಬವನ್ನು ಪತ್ತೆ ಹಚ್ಚಲು ಯತ್ನಿಸುವಂತೆ ಸುಷ್ಮಾ ಸ್ವರಾಜ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಕಳೆದ ಆಗಸ್ಟ್‌ನಲ್ಲಿ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಶನರ್ ಟಿ.ಸಿ.ಎ. ರಾಘವನ್ ಹಾಗೂ ಅವರ ಪತ್ನಿ ಗೀತಾಳನ್ನು ಭೇಟಿ ಮಾಡಿದ್ದರು.ಭಾರತಕ್ಕೆ ಗೀತಾಳ ವಾಪಸಾತಿಗೆ, ಪಾಕಿಸ್ತಾನವು ಸಂಪೂರ್ಣ ಸಹಕಾರ ನೀಡಲಿದೆಯೆಂದು ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.