ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ, ದಾದ್ರಿ ಘಟನೆ, ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ಕೂಡಲೇ ಮಧ್ಯೆ ಪ್ರವೇಶಿಸಬೇಕು ಎಂದು ನೂರಕ್ಕೂ ಹೆಚ್ಚು ಬಂಗಾಳಿ ಲೇಖಕರು, ಸಾಹಿತಿಗಳು ಕಲಾವಿದರು ಹಾಗೂ ವಿಚಾರವಾದಿಗಳ ಗುಂಪು ಗುರುವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಒತ್ತಾಯಿಸಿದೆ.
ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲಾಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ದೇಶದ ಬಹು ಸಂಸ್ಕೃತಿಯ ಭವ್ಯ ಪರಂಪರೆ ರಕ್ಷಿಸಲು ಮುಂದಾಗುವಂತೆ ಲೇಖಕರು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ದಮನಿಸುವ ವ್ಯವಸ್ಥಿತ ಪಿತೂರಿ ವಿರುದ್ಧ ಹೋರಾಡಲು ದೃಢ ನಿರ್ಧಾರ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ್ ಪಾನ್ಸರೆ ಡಾ. ಎಂ.ಎಂ. ಕಲಬುರ್ಗಿ ಹಾಗೂ ದಾದ್ರಿಯಲ್ಲಿ ಮಹಮ್ಮದ್ ಇಕ್ಲಾಖ್ ಹತ್ಯೆ ಅಭಿವ್ಯಕ್ತಿ ಹಾಗೂ ಆಯ್ಕೆ ಸ್ವಾತಂತ್ರ್ಯ ಹತ್ತಿಕ್ಕುವ ಯತ್ನಗಳಾಗಿವೆ ಎಂದು ಲೇಖಕರು ಆರೋಪಿಸಿದ್ದಾರೆ. ನೂರಕ್ಕೂ ಹೆಚ್ಚು ಪ್ರಸಿದ್ಧ ಬಂಗಾಳಿ ಲೇಖಕರು, ಸಾಹಿತಿಗಳು, ವಿಚಾರವಾದಿಗಳು, ಕಲಾವಿದರು ಈ ಮನವಿಗೆ ಸಹಿ ಹಾಕಿದ್ದಾರೆ.
ಪ್ರಶಸ್ತಿ ವಾಪಸ್: ಕಲಬುರ್ಗಿ ಹತ್ಯೆ ಖಂಡಿಸಿ ಕಾದಂಬರಿಕಾರ ಕುಂ.ವೀರಭದ್ರಪ್ಪ ಹಾಗೂ ರಾಜಸ್ತಾನದ ಲೇಖಕ ಹಾಗೂ ದೆಹಲಿ ದೂರದರ್ಶನದ ನಿವೃತ್ತ ನಿರ್ದೇಶಕ ನಂದ ಭಾರದ್ವಾಜ್ ಗುರುವಾರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ್ದಾರೆ.
ಜೈಪುರ ಸಾಹಿತ್ಯ ಉತ್ಸವ (ಜೆಎಲ್ಎಫ್) ಸಂಯೋಜಕರೂ ಆಗಿರುವ ಭಾರದ್ವಾಜ್ ಅವರ ‘ಸಂಹಿ ಖುಲ್ತೊ ಮಾರಗ್’ ಎಂಬ ಕೃತಿಗೆ 2004ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಅವರು ಈ ಪ್ರಶಸ್ತಿ ಹಾಗೂ 50 ಸಾವಿರ ರೂಪಾಯಿ ಚೆಕ್ನ್ನು ಅಕಾಡೆಮಿಗೆ ಹಿಂದಿರುಗಿಸಿದ್ದಾರೆ.
‘ಕಲಬುರ್ಗಿ ಅವರನ್ನು ಹತ್ಯೆ ಮಾಡಿದ ರೀತಿ ನನ್ನನ್ನು ಘಾಸಿಗೊಳಿಸಿದೆ. ಅಕಾಡೆಮಿಯು ಲೇಖಕರ ಹಕ್ಕು ರಕ್ಷಿಸಲು ಸಂಪೂರ್ಣ ವಿಫಲವಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಡಿತ ಜವಾಹರ ಲಾಲ್ ನೆಹರೂ ಸಂಬಂಧಿ, ಲೇಖಕಿ ನಯನತಾರಾ ಸೆಹಗಲ್, ಅಶೋಕ್ ವಾಜಪೇಯಿ ಸೇರಿದಂತೆ ಈವರೆಗೆ 30 ಸಾಹಿತಿಗಳು ಸಾಹಿತ್ಯ ಅಕಾಡೆಮಿಗೆ ಪ್ರಶಸ್ತಿ ಹಿಂದಿರುಗಿಸಿದಂತಾಗಿದೆ. ಐವರು ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಎಲ್ಲ ಬೆಳವಣಿಗೆಯ ಕಾರಣಕ್ಕೆ ಸಾಹಿತ್ಯ ಅಕಾಡೆಮಿ ಅ. 23ರಂದು ತುರ್ತು ಸಭೆ ಕರೆದಿದೆ.
ಕರ್ನಾಟಕದಲ್ಲೂ ವಾಪಸು: ಕಲಬುರ್ಗಿ ರಂಗಾಯಣದ ನಿರ್ದೇಶಕ ಪ್ರೊ.ಆರ್.ಕೆ.ಹುಡಗಿ, ಲೇಖಕಿ ಕೆ.ನೀಲಾ, ಸಾಹಿತಿ ಕಾಶೀನಾಥ ಅಂಬಲಿಗೆ ಅವರು ತಮಗೆ ದೊರೆತಿದ್ದ ಪ್ರಶಸ್ತಿ ಮತ್ತು ಚೆಕ್ಗಳನ್ನು ಗುರುವಾರ ಹಿಂದಿರುಗಿಸಿದರು.
ಶಿವಮೊಗ್ಗದ 17 ವರ್ಷದ ವಿದ್ಯಾರ್ಥಿನಿ ರಿಯಾ ವಿಥಾಶ ಗುರುವಾರ ಬಾಲ ಸಾಹಿತ್ಯ ಪ್ರಶಸ್ತಿ ಹಿಂದಿರುಗಿಸಿದ್ದಾಳೆ.
ಜೇಟ್ಲಿ ಲೇವಡಿ: ಪ್ರಶಸ್ತಿ ಹಿಂದಿರುಗಿಸುತ್ತಿರುವುದು ‘ಪ್ರಾಯೋಜಿತ ಕ್ರಾಂತಿ’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಲೇವಡಿ ಮಾಡಿದ್ದಾರೆ.
ಪ್ರಶಸ್ತಿಗೆ ಅವಮಾನ ಬೇಡ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒತ್ತಾಯಿಸಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ಸಾಹಿತಿಗಳು ಪ್ರಶಸ್ತಿ ವಾಪಸು ಮಾಡುತ್ತಿರುವುದು ಸರಿಯಾದ ಮಾರ್ಗವಲ್ಲ. ಇದು ಪ್ರಶಸ್ತಿಗೆ ಅಗೌರವ ತೋರಿಸಿದಂತಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.