ಮಂಗಳೂರು, ಅ.16 : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಜೀರ್ಣೋದ್ಧಾರವಾಗಿ ಹಾಗೂ ಮಂಗಳೂರು ದಸರಾ ಆರಂಭವಾಗಿ 25 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಬ್ರಹ್ಮಕಲಶೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬ್ರಹ್ಮಕಲಶೋತ್ಸವ ಜರಗಿತು.
ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಪ್ರತಿಷ್ಠಾಪನೆಗೊಂಡಿರುವ ಕುದ್ರೋಳಿ ಕ್ಷೇತ್ರವನ್ನು ಮಾಜಿ ಕೆಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ಸಾರಥ್ಯದಲ್ಲಿ ನವೀಕರಣ ಮಾಡಿ 25 ವರ್ಷಗಳು ಕಳೆದಿದ್ದು ರಜತಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಬ್ರಹ್ಮಕಲಶವನ್ನೂ ನೆರವೇರಿಸಲಾಯಿತು.
ಮಂಗಳೂರು ದಸರಾ ಹಿನ್ನೆಲೆಯಲ್ಲಿ ಈಗಾಗಲೇ ಶ್ರೀ ಗಣಪತಿ, ಶಾರದೆ ಮಾತೆ ಹಾಗೂ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾಗಿದೆ.ಇಂದು ಮುಂಜಾನೆಯಿಂದಲೇ ಧಾರ್ಮಿಕ ವಿಧಿಗಳು ಆರಂಭಗೊಂಡು ಮಧ್ಯಾಹ್ನದ ವೇಳೆಗೆ ಮಹಾಪೂಜೆ ಜರಗಿತು. ಬಳಿಕ ಪ್ರಾಂಗಣದೊಳಗೆ ರಥೋತ್ಸವ ಜರಗಿತು.
ಎತ್ತಿನಹೊಳೆ ಯೋಜನೆ ಸ್ಥಗಿತಗೊಳ್ಳಲು ಇಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಸಂದರ್ಭ ಉರುಳು ಸೇವೆ ಮಾಡಿದರು.ಪೂಜಾರಿ ಜೊತೆ ಮನಪಾ ಸದಸ್ಯ ರಾಧಾಕೃಷ್ಣ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸುರೇಶ್, ಸೇರಿದಂತೆ ಹಲವರು ಉರುಳು ಸೇವೆಗೈದರು.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣ ಮತ್ತು ಮಂಗಳೂರು ದಸರಾದ ರೂವಾರಿ ಬಿ.ಜನಾರ್ದನ ಪೂಜಾರಿ, ಮಳೆ ಕಡಿಮೆಯಾಗಿ ಸಮಸ್ಯೆ ಉಂಟಾಗಿರುವುದರಿಂದ ಜನ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಈಗಾಗಲೇ ನಿರಂತರವಾಗಿ ಮಳೆಗಾಗಿ ಪ್ರಾರ್ಥನೆ ಸಲಿಸುತ್ತ ಬಂದಿದ್ದೇವೆ ಎಂದರು.
ಜನರ ಸುಭಿಕ್ಷೆಗಾಗಿ ಜನರ ಸುಖ ಶಾಂತಿಗಾಗಿ ಸಂಕಲ್ಪ ಮಾಡಿದಂತೆ ಇಂದು ನಡೆದ ಬ್ರಹ್ಮಕಲಶೋತ್ಸವದ ಪೂಜೆ ಸಂದರ್ಭ ಜಿಲ್ಲೆಗೆ ಮಾರಕವಾಗಿ ಪರಿಣಮಿಸಲಿರುವ ಎತ್ತಿನಹೊಳೆ ಯೋಜನೆಯನ್ನು ಕೈಬಿಡುವ ಸದ್ಬುದ್ಧಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಾಯಕರುಗಳಿಗೆ ಭಗವಂತನು ನೀಡಲಿ ಎಂದು ಪ್ರಾರ್ಥಿಸಲಾಯಿತು. ಎತ್ತಿನಹೊಳೆ ಯೋಜನೆಯನ್ನು ಕೈಬಿಟ್ಟು ಕೋಲಾರ, ತುಮಕೂರು ಸಹಿತ ನೀರಿಲ್ಲದ ಜಿಲ್ಲೆಗಳಿಗೆ ಪರ್ಯಾಯ ನೀರು ಒದಗಿಸುವ ಯೋಜನೆ ಕೈಗೊಳ್ಳುವ ಮನಸ್ಸನ್ನು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹಾಗೂ ಇತರ ರಾಜಕಾರಣಿಗಳಿಗೆ ಶ್ರೀ ದೇವಿ ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಪೂಜಾರಿ ಹೇಳಿದರು.
ಎತ್ತಿನಹೊಳೆ ಯೋಜನೆಯ ಮೂಲಕ ನೀರಿಗಾಗಿ ಸಂಕಷ್ಟಪಡುತ್ತಿರುವ ಬಯಲು ಸೀಮೆಯ ಜಿಲ್ಲೆಗಳಿಗೆ ಮೋಸ ಮಾಡಲು ಸರಕಾರ ಹೊರಟಿದ್ದು, ಕರಾವಳಿಯ ನಾಶಕ್ಕೆ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರ , ರಾಜ್ಯ ಸರಕಾರ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಕರಾವಳಿಯ ಸಚಿವರು, ಕರ್ನಾಟಕದಿಂದ ಆಯ್ಕೆಯಾದ ಕೇಂದ್ರ ಸಚಿವರು ಈ ಯೋಜನೆಯ ಬಗ್ಗೆ ವೌನವಾಗಿದ್ದಾರೆ. ಮಂಗಳೂರು ಸಂಸದರ ಕೂಗಿಗೂ ಬೆಲೆ ಇಲ್ಲದಂತಾಗಿದೆ. ಎಲ್ಲರೂ ಸೇರಿಕೊಂಡು ಕೋಲಾರದಂತೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಡು ಮಾಡಲು ಹೊರಟಿರುವುದು ರಾಜಧರ್ಮವೇ? ಎಂದು ಪ್ರಶ್ನಿಸಿದರು.
ತುಳುರಾಜ್ಯದ ಬೇಡಿಕೆಗೆ ಆಸ್ಪದ ಕೊಡದಂತೆ ಸರಕಾರಕ್ಕೆ ಸಲಹೆ ನೀಡಿದರು.
ಶ್ರೀ ಕ್ಷೇತ್ರದ ರಜತಮಹೋತ್ಸವ ಅಂಗವಾಗಿ ಈ ಬಾರಿ ಅಕ್ಟೋಬರ್ 13 ರಿಂದ 24ರವರೆಗೆ ನವರಾತ್ರಿ ಮಹೋತ್ಸವ ಹಾಗೂ ಮಂಗಳೂರು ದಸರಾ ಕಾರ್ಯಕ್ರಮವನ್ನು ಬಹಳ ಅದ್ಧೂರಿ ಮತ್ತು ವೈಭವಯುತವಾಗಿ ಆಚರಿಸಲಾಗುವುದು ಎಂದು ಪೂಜಾರಿ ತಿಳಿಸಿದರು.
ಸಿಎಂ ಸಿದ್ದರಾಮಯ್ಯರಿಂದ ಹಠ ಸಾಧನೆ :
ಎತ್ತಿನಹೊಳೆ ಯೋಜನೆಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಮನವರಿಕೆ ಮಾಡಿದ್ದೇನೆ. ಸೋನಿಯಾಗಾಂಧಿ ಅವರು ಸ್ಪಂದಿಸಿದ್ದು,ಈ ಬಗ್ಗೆ ಚರ್ಚೆ ನಡೆಸಲು ಅವರು ರಾಜ್ಯ ಸರಕಾರಕ್ಕೆ ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ತಮ್ಮ ಹಠ ಮುಂದುವರಿಸಿದ್ದಾರೆ. ಇದರಿಂದ ಸೋನಿಯಾ ಗಾಂಧಿ ಅವರ ಮಾತಿಗೂ ಬೆಲೆಯಿಲ್ಲದಂತಾಗಿದೆ ಎಂದು ಪೂಜಾರಿ ಹೇಳಿದರು.
ಎತ್ತಿನಹೊಳೆ ಯೋಜನೆ ಕುರಿತು ಚರ್ಚಿಸಲು ಸೋಮವಾರದಂದು ಮುಖ್ಯಮಂತ್ರಿಯವರು ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ತನಗೆ ಈವರೆಗೆ ಆಮಂತ್ರಣ ಬಂದಿಲ್ಲ. ಜಿಲ್ಲೆಯಿಂದ ಪಾಲ್ಗೊಳ್ಳಲಿರುವ ಶಾಸಕರು, ಸಚಿವರು ಜನರ ನೋವನ್ನು ಅರ್ಥ ಮಾಡಿಕೊಂಡು ಚರ್ಚೆ ನಡೆಸಬೇಕು ಎಂದು ಜನಾರ್ದನ ಪೂಜಾರಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕುದ್ರೋಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಯ ಸಿ.ಸುವರ್ಣ, ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್, ಮೊಕ್ತೇಸರರಾದ ರವಿಶಂಕರ್ ಮಿಜಾರ್, ಕೆ ಮಹೇಶ ಚಂದ್ರ, ಕ್ಷೇತ್ರ ಆಡಳಿತ ಮಂಡಳಿ ಸದಸ್ಯರಾದ ಎಂ. ವೇದ ಕುಮಾರ್, ದೇವೇಂದ್ರ ಪೂಜಾರಿ, ವಿಶ್ವನಾಥ್ ಕಾಸರಗೋಡು, ಎಸ್ ಜಯವಿಕ್ರಮ್, ಹರಿಕೃಷ್ಣ ಬಂಟ್ವಾಳ, ಪಿ ಕೆ ಲೋಹಿತ್ ಪೂಜಾರಿ, ಪ್ರೊ.ಬಿ.ಜೆ.ಸುವರ್ಣ, ಎಂ ಶೇಖರ ಪೂಜಾರಿ, ಡಾ. ಅನುಸೂಯ, ಬಿ.ಜಿ. ಸಾಲ್ಯಾನ್, ಜತೀನ್ ಅತ್ತಾವರ, ರಾಧಾಕೃಷ್ಣ, ಕೆ, ಚಿತ್ತರಂಜನ್ ಗರೋಡಿ, ಡಿ.ಡಿ.ಕಟ್ಟೆಮಾರ್ , ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುಧೀರ್ ಟಿ.ಕೆ. ಉಪಸ್ಥಿತರಿದ್ದರು
ಅ.23ರಂದು ಮಂಗಳೂರು ದಸರಾ ಮೆರವಣಿಗೆ :
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ.23ರಂದು ಮಂಗಳೂರು ದಸರಾ ಮೆರವಣಿಗೆ ನಡೆಯಲಿದೆ. ಅ.24ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ,ದಸರಾ ಉತ್ಸವ ನಡೆಯಲಿದೆ. ಈಗಾಗಲೇ ಕ್ಷೇತ್ರವನ್ನು ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿದ್ದು, ಜೊತೆಗೆ ಶ್ರೀ ಮಹಾಗಣಪತಿ, ಶಾರದೆ ಮಾತೆ ಹಾಗೂ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾಗಿರುವ ಹಿನ್ನೆಲೆಯಲ್ಲಿ ಬಾರೀ ಸಂಖ್ಯೆಯಲ್ಲಿ ಭಕ್ತಾಧಿಗಳು ಕುದ್ರೋಳಿ ಶ್ರೀ ಕ್ಷೇತ್ರಕ್ಕೆ ಹರಿದು ಬರುತ್ತಿದ್ದಾರೆ. ಜೊತೆಗೆ ವಿದೇಶಿ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ಕ್ಷೇತ್ರದಲ್ಲಿ ದಿನ ನಿತ್ಯಾ ನಡೆಯುವ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಕ್ಷೇತ್ರದ ಆಕರ್ಷಣೆ ಇನ್ನಷ್ಟು ಹೆಚ್ಚಿದೆ. ಒಟ್ಟಿನಲ್ಲಿ ಮುಸ್ಸಂಜೆ ಹೊತ್ತು ಕ್ಷೇತ್ರವನ್ನು ನೋಡುವುದೇ ಒಂದು ಸೊಬಗು. ( ಕಣ್ಣಿಗೆ ಹಬ್ಬ)