ಕನ್ನಡ ವಾರ್ತೆಗಳು

 ಎಟಿಎಂ ಸಂಗ- ಗ್ರಾಹಕರ ನೆಮ್ಮದಿಗೆ ಭಂಗ

Pinterest LinkedIn Tumblr

13Icici-bank

ಮಂಗಳೂರು,ಅ.17 : ಸಾರ್ವಜನಿಕ ರಂಗದ ಪ್ರಮುಖ ಬ್ಯಾಂಕ್‍ಗಳು ಗ್ರಾಹಕ ಸ್ನೇಹಿಯಾಗುವತ್ತ ಹೆಚ್ಚೆಚ್ಚು ಒಲವು ತೋರುತ್ತಿರುವ ಈ ವೇಳೆಯಲ್ಲಿ ಕೊಟ್ಟಾರದ ಇನ್ಫೋಸಿಸ್ ಮುಂಭಾಗದಲ್ಲಿರೋ ಐಸಿಐಸಿಐ ಬ್ಯಾಂಕ್‍ನ ಎಟಿಎಂ ಕೇಂದ್ರ ಮಾತ್ರ ಹಣ ನುಂಗೋದನ್ನೇ ಕಾಯಕ ಮಾಡಿಕೊಂಡಿದೆ. ದಿನದ 24 ಗಂಟೆಯೂ ಹಣ ಪಡೆಯಬಹುದು ಎಂದು ತುರ್ತು ಸಂದರ್ಭದಲ್ಲಿ ನೀವು ಇಲ್ಲಿಗೆ ಬಂದು ಎಟಿಎಂ ಕಾರ್ಡ್ ಹಾಕಿದಿರೋ ನಿಮ್ಮ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಇದಕ್ಕೆ ಕಾರಣ ಎಟಿಎಂ ಕೇಂದ್ರದಲ್ಲಿ ಪವರ್ ಸಪ್ಲೈ ಕಡಿತವಾದಾಗ ಯುಪಿಎಸ್ ಅಥವಾ ಜನರೇಟರ್ ವ್ಯವಸ್ಥೆ ಇಲ್ದೇ ಇರೋದು. ಇದರಿಂದ ನೀವು ಪಡೆಯಬೇಕಿರೋ ಹಣ ಯಂತ್ರದಲ್ಲೇ ಬಾಕಿಯಾಗಿ ಪಡಬಾರದ ಯಾತನೆ ಅನುಭವಿಸಬೇಕಾದೀತು.

ಘಟನೆ ವಿವರ :
ಶುಕ್ರವಾರ ಮುಂಜಾನೆ 9:40ರ ಸುಮಾರಿಗೆ ಕೊಟ್ಟಾರ ಇನ್ಫೋಸಿಸ್ ಮುಂಭಾಗದ ಎಟಿಎಂ ಕೇಂದ್ರಕ್ಕೆ ಬಂದ ಗ್ರಾಹಕರೊಬ್ಬರು ತಮ್ಮ ಕೆ.ಎಸ್.ರಾವ್ ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ಖಾತೆಯಿಂದ ಮೂರು ಸಾವಿರ ನಗದು ಡ್ರಾ ಮಾಡಲು ಕಾರ್ಡ್ ತುರುಕಿದ್ದಾರೆ. ಇನ್ನೇನು ಹಣ ಕೈಗೆ ಬಂತು ಅನ್ನೋವಷ್ಟರಲ್ಲಿ ಪವರ್ ಸಪ್ಲೈ ಕಡಿತಗೊಂಡಿದೆ. ಇದರಿಂದ ಹೊರಬರಬೇಕಿದ್ದ ಹಣ ಬಾರದೆ ಯಂತ್ರದಲ್ಲಿ ಬಾಕಿಯಾಗಿದೆ. ಅವರು ಅಲ್ಲೇ ಇರುವ ಗಾರ್ಡ್ ಬಳಿ ವಿಚಾರಿಸಿದಾಗ ಇಲ್ಲಿ ಪವರ್ ಇಲ್ಲದಿದ್ದರೆ ಯುಪಿಎಸ್ ವ್ಯವಸ್ಥೆ ಇಲ್ಲ ಎಂಬ ಉತ್ತರ ಬಂದಿದೆ. ಆನಂತರ ಗ್ರಾಹಕರು ತುರ್ತಾಗಿ ಹಣದ ಅವಶ್ಯಕತೆ ಇದ್ದ ಕಾರಣ ಸದ್ರಿ ಬ್ಯಾಂಕ್ ಮೆನೇಜರ್ ಅವರಲ್ಲಿ ವಿಚಾರಿಸಿದ್ದಾರೆ. ಆದರೆ ಅವರು ನೀವು ನಿಮ್ಮ ಕಾರ್ಪೊರೇಷನ್ ಬ್ಯಾಂಕ್‍ನಲ್ಲಿ ವಿಚಾರಿಸಿ ಎಂಬ ಉತ್ತರ ನೀಡಿದ್ದಾರೆ.

ಕೊನೆಗೆ ಗ್ರಾಹಕರು ಕಾರ್ಪೊರೇಷನ್ ಬ್ಯಾಂಕ್‍ಗೆ ಕರೆ ಮಾಡಿ ತಮ್ಮ ಸಮಸ್ಯೆಯನ್ನು ವಿವರಿಸಿದ್ದಾರೆ. `ಸಂಜೆಯೊಳಗೆ ನಿಮ್ಮ ಹಣ ಅಕೌಂಟ್‍ಗೆ ರಿಫಂಡ್ ಆದರೂ ಆಗಬಹುದು, ಒಂದು ವೇಳೆ ಆಗದಿದ್ದರೆ ನೀವು ಬ್ಯಾಂಕ್‍ಗೆ ಬಂದು ಲೆಟರ್ ಕೊಡಬೇಕು, ಆನಂತರ ನಾವು ಕ್ಲೇಮ್ ಮಾಡಿ ನಿಮ್ಮ ಹಣ ವಾಪಸ್ ಮಾಡುತ್ತೇವೆ’ ಎಂಬ ಉತ್ತರ ಆ ಕಡೆಯಿಂದ ಬಂದಿದೆ. ಎಟಿಎಂ ಕೇಂದ್ರವನ್ನು ವ್ಯವಸ್ಥಿತವನ್ನಾಗಿ ಇಡಲು ಸಾಧ್ಯವಾಗದ ಬ್ಯಾಂಕ್‍ನಿಂದ ಇಷ್ಟೆಲ್ಲ ಪಡಿಪಾಟಲು ಅನುಭವಿಸಿದ ಗ್ರಾಹಕರು ಸಮಸ್ಯೆಗೆ ಪರಿಹಾರ ಸಿಗದೇ ಇದ್ದರೆ ಗ್ರಾಹಕ ನ್ಯಾಯಾಲಯದ ಮೆಟ್ಟಿಲು ತುಳಿಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಎಂಟು ತಿಂಗಳಿಂದ ಇದೇ ವ್ಯಥೆ:
ಕೊಟ್ಟಾರ ಇನ್ಫೋಸಿಸ್ ಮುಂಭಾಗದ ಎಟಿಎಂ ಕೇಂದ್ರಕ್ಕೆ ಹೋದರೆ ನೀವು ಬೆವರಿ ನೀರಾಗುತ್ತೀರಿ. ಇದಕ್ಕೆ ಕಾರಣ ಇಲ್ಲಿ ಏರ್ ಕಂಡೀಷನಿಂಗ್ ವ್ಯವಸ್ಥೆಯೂ ಇಲ್ಲ. ಇನ್ನು ಇಲ್ಲಿ ಪವರ್ ಸಪ್ಲೈ ನಿಂತರೆ ಯುಪಿಎಸ್, ಜನರೇಟರ್ ವ್ಯವಸ್ಥೆ ಇಲ್ಲದೆ ಬರೋಬ್ಬರಿ ಎಂಟು ತಿಂಗಳುಗಳೇ ಕಳೆಯಿತು. ಹಾಗಿದ್ದೂ ಬ್ಯಾಂಕ್ ಇದನ್ನು ಸರಿಪಡಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಒಳಗಡೆ ಎರಡು ಯಂತ್ರ ಇದ್ದರೂ ಒಂದು ಮಾತ್ರ ಗ್ರಾಹಕರಿಗೆ ದೊರೆಯುತ್ತಿದೆ, ಅದೂ ಪವರ್ ಇರುವಾಗ ಮಾತ್ರ. ಕಳೆದ ಎಂಟು ತಿಂಗಳುಗಳಿಂದ ದಿನನಿತ್ಯ ಕಮ್ಮಿ ಎಂದರೂ ಹತ್ತಿಪ್ಪತ್ತು ಜನರು ಇದೇ ರೀತಿ ಕಾರ್ಡ್ ಹಾಕಿ ಬ್ಯಾಂಕ್‍ಗೆ ಅಂಡಲೆದಿದ್ದಾರೆ. ಶುಕ್ರವಾರವೂ ಮಧ್ಯಾಹ್ನದೊಳಗೆ ಐದು ಮಂದಿ ಗ್ರಾಹಕರು ಹಣ ಬಾರದೆ ಕಂಗಾಲಾಗಿದ್ದಾರೆ. `ಗ್ರಾಹಕಸ್ನೇಹಿ’ ಎಂಬ ಪದದ ಅರ್ಥವನ್ನೇ ಅರಿಯದ ಬ್ಯಾಂಕ್ ಒಂದೋ ಈ ಎಟಿಎಂ ಕೇಂದ್ರಕ್ಕೆ ಬೀಗ ಜಡಿಯಲಿ ಇಲ್ಲವೇ ಯೋಗ್ಯ ವ್ಯವಸ್ಥೆ ಕಲ್ಪಿಸಲಿ ಅನ್ನೋದು ಗ್ರಾಹಕರ ಬೇಡಿಕೆಯಾಗಿದೆ.

Write A Comment