ಬೆಂಗಳೂರು, ಅ.19: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆಯನ್ನು ಖಂಡಿಸಿ ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ‘ಅಸಹಿಷ್ಣುತೆ’ ವಿರೋಧಿಸಿ ಕಿರಿಯ ಲೇಖಕಿ ಮುದ್ದು ತೀರ್ಥಹಳ್ಳಿ(ವಿತಾಶಾ ರಿಯಾ) ಅವರು ತನ್ನ ‘ಒಂದು ಚಂದ್ರನ ತುಂಡು’ ಲಲಿತ ಪ್ರಬಂಧ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರದಾನಿಸಿದ್ದ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿರುವ ಕರ್ನಾಟಕ ಸಾಹಿತ್ಯ ಅಕಾಡಮಿ ಕಚೇರಿಗೆ ಕಿರಿಯ ಲೇಖಕಿ ಮುದ್ದು ತೀರ್ಥಹಳ್ಳಿ ಭೇಟಿ ನೀಡಿ, ಅಕಾಡಮಿಯು 2011ನೆ ಸಾಲಿನಲ್ಲಿ ಪ್ರದಾನಿಸಿದ್ದ ಪುಸ್ತಕ ಪ್ರಶಸ್ತಿ, ಸ್ಮರಣಿಕೆ, ಶಾಲು ಹಾಗೂ 5 ಸಾವಿರ ರೂ. ಚೆಕ್‌ನ್ನು ಅಕಾಡಮಿ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಹಾಗೂ ರಿಜಿಸ್ಟ್ರಾರ್ ಸಿ.ಎಚ್.ಭಾಗ್ಯ ಅವರಿಗೆ ಹಿಂದಿರುಗಿಸಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸಾಹಿತ್ಯ ಅಕಾಡಮಿ ವಿರುದ್ಧ ಅಥವಾ ರಾಜ್ಯ ಸರಕಾರವನ್ನು ಟೀಕಿಸುವ ಉದ್ದೇಶದಿಂದ ಪ್ರಶಸ್ತಿ ಹಿಂದಿರುಗಿಸುತ್ತಿಲ್ಲ. ಭಾರತದಲ್ಲಿ ಹೆಚ್ಚುತ್ತಿರುವ ‘ಅಸಹಿಷ್ಣುತೆ’ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಸಾಹಿತಿಗಳಿಗೆ ಯುವ ಜನತೆಯ ಪರವಾಗಿ ಬೆಂಬಲ ಸೂಚಿಸಲು ಹಾಗೂ ಆರೋಗ್ಯಕರ ಸಮಾಜ ನಿರ್ಮಿಸಬೇಕೆಂದು ಒತ್ತಾಯಿಸಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದೇನೆೆ ಎಂದು ಹೇಳಿದರು.
ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಹಾಗೂ ಡಾ.ಎಂ.ಎಂ.ಕಲಬುರ್ಗಿ ಅವರ ಕೊಲೆಗಳು, ಭಾರತವನ್ನು ವೈಚಾರಿಕ ಅಸಹನೆಯ ಸಮಾಜವನ್ನಾಗಿ ಮಾಡುವ ಯತ್ನಗಳಾಗಿವೆ. ಇತ್ತೀಚೆಗೆ ದಾದ್ರಿಯಲ್ಲಿ ನಡೆದ ಹತ್ಯೆಯೂ ಹಾಗೂ ಲಕ್ನೋದಲ್ಲಿನ ದೇವಾಲಯ ಪ್ರವೇಶಕ್ಕೆ ಮುಂದಾದ 90 ವರ್ಷದ ದಲಿತ ವೃದ್ಧರನ್ನು ಬೆಂಕಿ ಹಚ್ಚಿ ಹತ್ಯೆಗೈದಂತಹ ಘಟನೆಗಳು ಅಸಹನೆಯ ಒಂದು ಭಾಗವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಧಾರ್ಮಿಕ ‘ಅಸಹಿಷ್ಣತೆ’ ಹಾಗೂ ಆಹಾರ ಪದ್ಧತಿಗಳ ಮೇಲೆ ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ಹಲ್ಲೆಗಳನ್ನು ಪ್ರತಿಯೊಂದು ನಾಗರಿಕ ಸಮಾಜ ವಿರೋಧಿಸಬೇಕೆಂದು ಹೇಳಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಒಡ್ಡುತ್ತಿರುವ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಬೇಕೆಂದು ಇದೇ ವೇಳೆ ಒತ್ತಾಯಿಸಿದರು.
ಭಾರತೀಯ ಸಾಹಿತಿಗಳು ನಡೆಸುತ್ತಿರುವ ವೌನ ಪ್ರತಿಭಟನೆಗೆ ಕೇಂದ್ರ ಸರಕಾರ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ದೇಶದಲ್ಲಿ ನಿರ್ಮಾಣವಾಗುತ್ತಿರುವ ದುಷ್ಟ ವ್ಯವಸ್ಥೆಯ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಎಸ್‌ಎಫ್‌ಐ ಮುಖಂಡ ಅನಂತ್‌ನಾಯ್ಕ, ಲೇಖಕ ಭಾಸ್ಕರ್ ಪ್ರಸಾದ್, ಮುದ್ದು ತೀರ್ಥಹಳ್ಳಿ ಪೋಷಕರು ಉಪಸ್ಥಿತರಿದ್ದರು.