ಅಯೋಧ್ಯಾ: ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಬೀಫ್ ಕುರಿತ ವದಂತಿಗಳು ಹಿಂಸಾತ್ಮಕ ರೂಪಕ್ಕೆ ಪರಿವರ್ತನೆಯಾಗುವಂತೆ ಪ್ರಚೋದಿಸುತ್ತಿದ್ದರೆ, ಅಯೋಧ್ಯೆಯಲ್ಲಿ ಭಾರೀ ಸಂಖ್ಯೆಯ ಮುಸ್ಲಿಂ ಬಾಂಧವರು ರಾಮಲೀಲಾ ಎಂಬ ಸಮಿತಿಯನ್ನು ಸ್ಥಾಪಿಸಿ ಕಳೆದ 51 ವರ್ಷಗಳಿಂದ ತಮ್ಮ ಹೆಗಲಲ್ಲಿ ಹೊತ್ತು ಸಾಗುತ್ತಿದ್ದಾರೆ.
ಅಯೋಧ್ಯೆಯಿಂದ 5 ಕೀಲೋಮೀಟರ್ ದೂರದಲ್ಲಿರುವ ಮಮತಾಜ್ ನಗರ್ ಎಂಬ ಗ್ರಾಮದಲ್ಲಿ ರಾಮಲೀಲಾ ನಾಟಕವನ್ನು ಕಳೆದ 51 ವರ್ಷಗಳಿಂದ ಪ್ರತಿವರ್ಷ ಅಭಿನಯಿಸಲಾಗುತ್ತಿದ್ದು ಅದಕ್ಕಾಗಿ ಒಂದು ಸಂಘವನ್ನೇ ಸ್ಥಾಪಿಸಲಾಗಿದೆ. ಅದರ ಅಧ್ಯಕ್ಷರು ಡಾಕ್ಟರ್ ಮಸೀದ್ ಅಲಿ, ಸಮಿತಿಯ ಸಂಸ್ಥಾಪಕ ಅಧ್ಯಕ್ಷರು ಡಾ ವಾಜಿದ್ ಅಲಿ ಎಂಬುವವರಾಗಿದ್ದಾರೆ. ಹೀಗೆ ಮುಸ್ಲಿಂ ಬಾಧವರಿಂದಲೇ ಪ್ರಾರಂಭವಾದ ಈ ಸಮಿತಿ ಆಯೋಜಿಸುವ ನಾಟಕದಲ್ಲೂ ಮುಸ್ಲಿಂ ಸಮುದಾಯದವರೇ ರಾಮಾಯಣದ ಪಾತ್ರಗಳನ್ನು ನಿರ್ವಹಿಸುತ್ತಾರೆ. ಶಶಿ ನೂರ್ ಎಂಬುವವರು ಊರ್ಮಿಳಾ (ಲಕ್ಷ್ಮಣನ ಪತ್ನಿ) ಪಾತ್ರ ನಿರ್ವಹಿಸಿದರೆ, ಅಹಮದ್ ಎಂಬುವವರು ರಾವಣನಾಗಿ ಆರ್ಭಟಿಸುತ್ತಾರೆ.
ಎಲ್ಲದಕ್ಕಿಂತ ಆಸಕ್ತಿಕರ ವಿಷಯವೇನೆಂದರೆ ರಾಮಲೀಲಾ ನಾಟಕದಲ್ಲಿ ಅಭಿನಯಿಸುವ ಎಲ್ಲರೂ ಪಾತ್ರಕ್ಕೆ ಪ್ರಾಮಾಣಿಕತೆಯನ್ನು, ನೈಜತೆಯನ್ನು ನೀಡುವ ಉದ್ದೇಶದಿಂದ ಸಂಪೂರ್ಣವಾಗಿ ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಿಗಳಾಗಿ ಬದಲಾಗಿದ್ದಾರೆ.
ದಾದ್ರಿಯಲ್ಲಿ ಗೋಮಾಂಸ ಸೇವನೆ ಮಾಡಿದ್ದಾರೆ ಎಂಬ ವದಂತಿಯ ಮೇಲೆ ಅಕ್ಲಾಖ್ ಎಂಬುವವರು ಹತ್ಯೆಗೀಡಾಗಿದ್ದಾರೆ. ಆದರೆ ಈ ಹಳ್ಳಿಯಲ್ಲಿ ಅಖ್ಲಾಕ್ ಎಂಬುವವರು ತನ್ನ ಸ್ನೇಹಿತರಾದ ನಿಯಾಝ್ ಅಹಮದ್, ಮೊಹಮ್ಮದ್ ಶಾಹಿದ್, ಮೊಹಮ್ಮದ್ ನಫೀಸ್ ಮತ್ತು ಜಬೀರ್ ಈ ಬಾರಿ ರಾಮಲೀಲಾ ಸಮತಿಗೆ ಸೇರಿಕೊಂಡಿದ್ದು ಸಂಪೂರ್ಣವಾಗಿ ಸಸ್ಯಾಹಾರಿಗಳಾಗಿ ಬದಲಾಗಿದ್ದಾರೆ.
“ನಾಟಕ ಮುಗಿದ ಮೇಲೆ ಎಲ್ಲ ಪಾತ್ರದಾರಿಗಳಿಗೂ ಆರತಿ ಬೆಳಗಿ ಪೂಜಿಸಲಾಗುತ್ತದೆ ಆದ್ದರಿಂದ ನಾನು ಸಸ್ಯಾಹಾರಿಯಾಗಲು ನಿರ್ಧರಿಸಿದೆ. ನಾನು ಹಿಂದೂ ಧಾರ್ಮಿಕ ಪಾತ್ರವನ್ನು ಮಾಡುತ್ತೇನೆ ಎಂಬ ಕಾರಣಕ್ಕೆ ನನ್ನನ್ನು ಪ್ರಶಂಸೆ ಮಾಡುವ ಜನರ ಭಾವನೆಗಳಿಗೆ ನೋವುಂಟು ಮಾಡಲು ನನಗಿಷ್ಟವಿಲ್ಲ”, ಎನ್ನುತ್ತಾರೆ ನೂರ್ ನಗುತ್ತ.