ಬೆಂಗಳೂರು: ಪತ್ನಿಗೆ ವಿಚ್ಛೇದನ ನೀಡದೇ ಪತಿ ಮರುಮದುವೆಯಾಗಿದ್ದಾರೆಂದು ತಿಳಿದು ಮನನೊಂದ ಪತ್ನಿ ಮತ್ತು ಇಬ್ಬರು ಪುತ್ರಿಯರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದ ಹೇಮಾವತಿ ನಗರದಲ್ಲಿ ಸಂಭವಿಸಿದೆ. ಕೆಪಿಟಿಸಿಎಲ್ ಎಂಜಿನಿಯರ್ ಪ್ರಭಾಕರ್ ಅವರ ಪತ್ನಿ ಪುಷ್ಪಾ ಮತ್ತು ಮತ್ತು ಮಕ್ಕಳಾದ ಪೂಜಾ, ಪಲ್ಲವಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
ಕಳೆದ ಎರಡು ದಿನಗಳ ಹಿಂದೆ ಪತಿ ಮರುಮದುವೆಯಾಗಿದ್ದಾರೆಂದು ಪುಷ್ಪಾ ಆರೋಪಿಸಿದ್ದರು. ಆದರೆ ತಾವು ಮದುವೆಯಾಗಿಲ್ಲವೆಂದು ಪ್ರಭಾಕರ್ ಸ್ಪಷ್ಟನೆ ನೀಡಿದ್ದಾರೆ. ಪತಿ ತಮಗೆ ತುಂಬಾ ಹಿಂಸೆ ನೀಡುತ್ತಿದ್ದು, ಪೊಲೀಸ್ ಠಾಣೆಯಲ್ಲೇ ತನಗೆ ಹೊಡೆದಿದ್ದಾರೆಂದು ಪತ್ನಿ ಆರೋಪಿಸಿದ್ದಾರೆ. ಇವರ ಹಿಂಸೆಯನ್ನು ಸಹಿಸಿಕೊಂಡು ಮನೆಯಲ್ಲಿ ಜೀವನ ಮಾಡುವುದೇ ಕಷ್ಟವಾಗಿದೆ ಎಂದು ಪತ್ನಿ ಆರೋಪಿಸಿದ್ದಾರೆ.
ಇದಲ್ಲದೇ ತಮಗೆ ಪತಿ ವಿಚ್ಛೇದನ ನೀಡಿದರೆ ಸಿಗುವ ಜೀವನಾಂಶದ ಹಣ ಸಾಕಾಗುವುದಿಲ್ಲ. ಆದ್ದರಿಂದ ಹೆಚ್ಚಿನ ಜೀವನಾಂಶ ಸಿಗುವಂತೆ ಮಾಡಬೇಕು ಎಂದು ಪುಷ್ಪಾ ಒತ್ತಾಯಿಸಿದ್ದಾರೆ. ಹೈಕೋರ್ಟ್ನಲ್ಲಿ ಪತ್ನಿಗೆ ವಿಚ್ಛೇದನ ಕುರಿತು ವಿಚಾರಣೆ ಬಾಕಿವುಳಿದಿತ್ತು. ಹಾಸನದ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ.