ಮುಂಬೈ: ದೇಶದ ಟೆಲಿಕಾಂ ಕ್ಷೇತ್ರದ ಪಿತಾಮಹ ಎನ್ನುವ ಖ್ಯಾತಿ ಪಡೆದ ಸ್ಯಾಮ್ ಪಿತ್ರೋಡಾ, ಡಿಜಿಟಲ್ ಇಂಡಿಯಾ ಮಾಡಿರುವುದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯೇ ಹೊರತು ಪ್ರಧಾನಿ ಮೋದಿಯಲ್ಲ ಎಂದು ಹೇಳಿಕೆ ನೀಡಿ ಮೋದಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಆರಂಭಿಸಲಿಲ್ಲ.ಕಳೆದ 25 ವರ್ಷಗಳ ಹಿಂದೆಯೇ ಡಿಜಿಟಲ್ ಇಂಡಿಯಾ ಆರಂಭವಾಗಿದೆ. ಸಂಪೂರ್ಣ ಡಿಜಿಟಲ್ ಇಂಡಿಯಾ ಆಗಲು ಇನ್ನೂ 20 ವರ್ಷಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕಳೆದ 1984ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅಧಿಕಾರವಧಿಯಲ್ಲಿ ಟೆಲಿಕಾಂ ಆಯೋಗದ ಮುಖ್ಯಸ್ಥರಾಗಿದ್ದ ಪಿತ್ರೋಡಾ, ತಮ್ಮ ಆತ್ಮಕಥನದಲ್ಲಿ ಡ್ರೀಮಿಂಗ್ ಬಿಗ್ ಮೈ ಜರ್ನಿ ಟು ಕನೆಕ್ಟ್ ಇಂಡಿಯಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ.
ಪಿತ್ರೋಡಾ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಟೆಲಿಕಾಂ ಕ್ರಾಂತಿಯಲ್ಲಿ ದೇಶದ ಮುಂದಿನ ಟೆಲಿಕಾಂ ಭವಿಷ್ಯವನ್ನು ಅರಿತು ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು ಎಂದು ಸಂತಸ ವ್ಯಕ್ತಪಡಿಸಿದರು.
1984ರಲ್ಲಿ ನ್ಯಾಷನಲ್ ಇನ್‌ಫಾರ್ಮಾಟಿಕ್ಸ್ ಸೆಂಟರ್ ಆರಂಭಿಸುವ ಮೂಲಕ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಡಿಜಿಟಲ್ ಇಂಡಿಯಾಗೆ ಚಾಲನೆ ನೀಡಿದರು. ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾಗೆ ಚಾಲನೆ ನೀಡಲಿಲ್ಲ ಎಂದು ಪಿತ್ರೋಡಾ ಸ್ಪಷ್ಟಪಡಿಸಿದರು.