ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಆರ್ ಎಸ್ ಎಸ್ ನ ಸಮಾವೇಶ ನಡೆಯುತ್ತಿದ್ದು, ಮುಖ್ಯ ಭಾಷಣ ಮಾಡಿರುವ ಮೋಹನ್ ಭಾಗವತ್ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದಿದ್ದ ಸರ್ಕಾರದ ಬಗ್ಗೆ ಭಾರತೀಯರಿಗೆ ನಿರಾಸೆ ಮೂಡಿತ್ತು. ಆದರೆ ಈಗ ಭಾರತದ ಪರಿಸ್ಥಿತಿ ಬದಲಾಗಿದೆ. ಕೇಂದ್ರದಲ್ಲಿರುವ ಎನ್.ಡಿ.ಎ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತ ವಿಶ್ವನಾಯಕನಾಗುವತ್ತ ದಾಪುಗಾಲಿಟ್ಟಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಮಾನವೀಯತೆ ನೆಲೆಯಲ್ಲಿ ನಾವು ದೇಶವನ್ನು ಮುನ್ನಡೆಸಬೇಕು ಎಂದಿರುವ ಭಾಗವತ್, ನಾವು ರಾಮ ರಾಜ್ಯ ನಿರ್ಮಿಸುತ್ತೇವೆ ಎಂದು ಪಣತೊಡೋಣ ಎಂದು ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯ ಹರಿಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖ್ಯಾತಿ ಹೆಚ್ಚುತ್ತಿದೆ. ಭಾರತದಿಂದ ವಿಶ್ವದ ಜನರು ವಿಶೇಷವಾದದ್ದನ್ನು ಬಯಸಿದ್ದಾರೆ. ಜನರು ಬಯಸಿರುವುದನ್ನು ನಾವು ಪರಿಣಾಮಕಾರಿಯಾಗಿ ನೀಡಬೇಕಿದೆ. ಈ ನಿಟ್ಟಿನಲ್ಲಿ ನಾವು ಮತ್ತಷ್ಟು ಶ್ರಮ ಹಾಕಬೇಕಾಗಿರುವುದು ಅತ್ಯಗತ್ಯ ಎಂದು ಭಾಗವತ್ ಹೇಳಿದ್ದಾರೆ.
ಇದೇ ವೇಳೆ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿರುವ ಆರ್.ಎಸ್.ಎಸ್ ಮುಖಂಡ, ಭಾರತ ಕೆಲವು ನೆರೆ ದೇಶಗಳಿಂದ ಅಪಾಯ ಎದುರಿಸುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ಇರಬೇಕಿದೆ. ಅಲ್ಲದೇ ಭಾರತೀಯರು ಸಹ ದೇಶಕ್ಕಾಗಿ ಹೋರಾಡಬೇಕು, ನೆರೆ ರಾಷ್ಟ್ರಗಳು ಸರಿಯಾದ ನಿರ್ಧಾರ ಕೈಗೊಳ್ಳದೇ ಇದ್ದಲ್ಲಿ ತಪ್ಪಿಗೆ ಸರಿಯಾದ ದಂಡ ತೆರಬೇಕಾದೀತು ಎಂದು ಹೇಳಿದ್ದಾರೆ.
ಆರ್.ಎಸ್.ಎಸ್ ಸಮಾವೇಶದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದಾರೆ.