ಬೆಂಗಳೂರು,ಅ.22: ಭೂ ದಾಖಲೆ ಮತ್ತು ಸರ್ವೆ ಇಲಾಖೆ ಆಯುಕ್ತರಾದ ಐಎಎಸ್ ಅಧಿಕಾರಿ ಮುನೀಶ್ ಮೌಡ್ಗಿಲ್ ಅವರನ್ನು ವಾಯುವಿಹಾರ ನಡೆಸುತ್ತಿದ್ದ ವೇಳೆ ದುಷ್ಕರ್ಮಿಗಳು ತಡೆದು ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಅವರು ಬನಶಂಕರಿ ಠಾಣೆಯಲ್ಲಿ ಅ.14ರಂದು ದೂರು ದಾಖಲಾಗಿದೆ. ಮುನೀಶ್ ಮೌಡ್ಗಿಲ್ ಅವರು ಅ.14ರ ಸಂಜೆ ವಾಯುವಿಹಾರ ಮಾಡುವಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರಿಗೆ ಬೆದರಿಕೆ ಹಾಕಿದ್ದಲ್ಲದೆ. ಅವರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ವಾಯುವಿಹಾರ ಮಾಡುತ್ತಿದ್ದ ನನ್ನನ್ನು ಮನೆಗೆ ಹೋಗುವಂತೆ ಬೆದರಿಸಿದ್ದರಲ್ಲದೆ, ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದಕ್ಕೆ ಕೈ ಹಿಡಿದು ಎಳೆದಾಡಿದರು. ಹಲ್ಲೆ ಮಾಡುವ ಯತ್ನ ಮಾಡಿದರು ಎಂದು ಅವರು ಹೇಳಿದ್ದಾರೆ. ಹಾಡಹಗಲೇ ಕಳ್ಳತನ, ಕಳವು ಪ್ರಕರಣಗಳು, ಕೊಲೆ, ಸುಲಿಗೆ, ಸರಗಳ್ಳತನ ನಡೆಯುತ್ತಿರುವ ಸಂದರ್ಭದಲ್ಲಿ ಮುಕ್ತವಾಗಿ ಓಡಾಡದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಅಧಿಕಾರಿಗಳನ್ನೇ ಕಳ್ಳರು ಕೊಲೆ ಮಾಡಿರುವ ಘಟನೆಗಳು ಕೂಡ ನಡೆದಿವೆ. ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ನಡೆದಿರುವುದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.