ಕನ್ನಡ ವಾರ್ತೆಗಳು

‘ನಾನೊಬ್ಬ ದಲಿತನೆಂಬ ಕಾರಣ ಗಂಗೊಳ್ಳಿ ಪಿಡಿಓ ಬೆದರಿಕೆ ಹಾಕ್ತಾರೆ’ – ಕರವಸೂಲಿಗಾರ ಉದಯ್ ಆರೋಪ

Pinterest LinkedIn Tumblr

gangolli-panchayt

ಕುಂದಾಪುರ: ಇತ್ತೀಚೆಗಂತೂ ದಲಿತರ ಮೇಲಿನ ದೌರ್ಜನ್ಯಗಳು ಜಾಸ್ಥಿಯಾಗುತ್ತಲಿದೆ. ಗ್ರಾಮಪಂಚಾಯತ್ ಕಛೇರಿಯಲ್ಲೂ ದಲಿತರನ್ನು ಕೆಳಮಟ್ಟದಲ್ಲಿ ಕಂಡು ಅವರಿಗೆ ಬೆದರಿಕೆಗಳನ್ನು ಹಾಕಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಯತ್ನಿಸುವ ಘಟನೆಗಳು ನಡೆಯುತ್ತಿದೆ. ಇದಕ್ಕೊಂದು ತಾಜಾ ಉದಾಹರಣೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮಪಂಚಾಯತ್.

ಇಲ್ಲಿನ ಪಿಡಿಓ (ಗ್ರಾಮ ಪಂಚಾಯತ್ ಅಭಿವ್ರದ್ಧಿ ಅಧಿಕಾರಿ) ಪ್ರವೀಣ್‌ ಡಿಸೋಜಾ ಅವರ ವಿರುದ್ಧ ಅದೇ ಪಂಚಾಯತಿನ ಕರವಸೂಲಿಗಾರ ಉದಯ್ ಕುಮಾರ್ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸದ್ಯ ಪಿಡಿಓ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

ಪರಿಶಿಷ್ಟ ಜಾತಿಯವರಾಗಿರುವ ಉದಯಕುಮಾರ್ ಅವರು ಸುಮಾರು 18 ವರ್ಷಗಳಿಂದ ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಖಾಯಂ ಕರವಸೂಲಿಗಾರನಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಗ್ರಾಮ ಪಂಚಾಯತಿಯ ಕೆಲಸ ಕಾರ್ಯನ್ನು ನಿಷ್ಠೆಯಿಂದ ನಿರ್ವಹಿಸಿಕೊಂಡು ಬರುತ್ತಿದ್ದವರಾಗಿದ್ದಾರೆ. ಗಂಗೊಳ್ಳಿ ಗ್ರಾಮ ಪಂಚಾಯತ್‌ ಪಿಡಿಓ ಪ್ರವೀಣ್‌ ಡಿಸೋಜಾ ಹಾಗೂ ಇನ್ನಿತರ ಗ್ರಾಮ ಪಂಚಾಯತ್‌ ಸದಸ್ಯರು ಸೇರಿಕೊಂಡು, ಉದಯ ಕುಮಾರ್‌ರವರು ದಲಿತರೆಂಬ ಕಾರಣದಿಂದ ಇಲ್ಲಸಲ್ಲದ ಆರೋಪ ಮಾಡಿ ದಿನಾಂಕ:13/11/2014 ರಂದು ಕರ್ತವ್ಯದಿಂದ ಅಮಾನತುಗೊಳಿಸಿದ್ದು ಬಳಿಕ ಉದಯ ಕುಮಾರ್‌ ಮೇಲಿನ ಆರೋಪಗಳಲ್ಲಿ ಯಾವುದೇ ಹುರುಳಿಲ್ಲವೆಂದು ಹಾಗೂ ಅವರು ತಪ್ಪುಗಳಿಲ್ಲವೆಂದು ವರದಿ ಬಂದ ಬಳಿಕ ಪುನಃ 01/08/2015 ರಂದು ಕರ್ತವ್ಯ ನಿರ್ವಹಿಸಲು ಆರಂಭಿಸಿದ್ದರು.

ಇದಾದ ಬಳಿಕ ಪಿಡಿಓ ಪ್ರವೀಣ್‌ ಡಿಸೋಜಾರವರು ಉದಯ ಕುಮಾರ್‌ರವರ ಮೇಲಿನ ದ್ವೇಷವನ್ನು ಹೀಗೆಯೇ ಮುಂದುವರಿಸಿ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲು ದಾರಿ ಕಾಯುತ್ತಿದ್ದರೆನ್ನಲಾಗಿದೆ. ಇದೇ ಉಪಾಯದಿಂದ 17/10/2015 ರಂದು ಗಂಗೊಳ್ಳಿ ಗ್ರಾಮ ಪಂಚಾಯತ್‌ ಸದಸ್ಯರ ರಹಸ್ಯ ಸಭೆಯನ್ನು ಕರೆಯಿಸಿ, ಉದಯ ಕುಮಾರ್‌ರವರನ್ನು ಪಂಚಾಯತ್‌ ಕರವಸೂಲಿ ನೌಕರಿಯಿಂದ ವಜಾಗೊಳಿಸುವ ನಿರ್ಣಯ ಕೈಗೊಂಡಿದ್ದಲ್ಲದೇ ಪಿಡಿಓ ಪ್ರವೀಣ್‌ ಡಿಸೋಜಾರವರು ಉದಯ ಕುಮಾರ್‌ರವರಿಗೆ ಮೊಬೈಲ್‌ ಕರೆ ಮಾಡಿ, “ನೀವು, ಏಳು ಮಂದಿ ಗಂಗೊಳ್ಳಿ ಗ್ರಾಮ ಪಂಚಾಯತ್‌ ಸದಸ್ಯರ ವಿರುಧ್ದ ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಬೇಕು, ಇಲ್ಲದಿದ್ದಲ್ಲಿ ನಿಮ್ಮನ್ನು ಕರ್ತವ್ಯದಿಂದ ವಜಾ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಲ್ಲದೇ, ಮೊಬೈಲ್‌ ಸಂದೇಶವನ್ನು ಕಳುಹಿಸಿರುತ್ತಾರೆ.

ಉದಯ ಕುಮಾರ್‌ರವರು 19/10/2015 ರಂದು ಗಂಗೊಳ್ಳಿ ಗ್ರಾಮ ಪಂಚಾಯತ್‌ ಕರ್ತವ್ಯಕ್ಕೆ ಬಂದಾಗ ಬೆಳಿಗ್ಗೆ 10:30 ಗಂಟೆಗೆ ಉದಯ ಕುಮಾರ್‌ರವರನ್ನು ಗಂಗೊಳ್ಳಿ ಗ್ರಾಮ ಪಂಚಾಯತ್‌ ಗೇಟಿನ ಹೊರಗಡೆ ಕರೆದು, “ನಿಮ್ಮಲ್ಲಿ ವೈಯಕ್ತಿಕವಾಗಿ ಮಾತನಾಡಲಿದೆ” ಎಂದು ಹೇಳಿ ಕರೆದುಕೊಂಡು ಹೋಗಿ, ಪಂಚಾಯತ್‌ ಗೇಟಿನ ಹೊರಗಡೆ ಉದಯ ಕುಮಾರ್‌ರವರಿಗೆ “ನೀವು, ಈ ಹಿಂದೆ ನಾನು ಹೇಳಿದ್ದ 7 ಮಂದಿ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರ ವಿರುದ್ದ ದಲಿತ ದೌರ್ಜನ್ಯ ಪ್ರಕರಣ ದಾಖಲು ಮಾಡುತ್ತೀರೋ ಇಲ್ಲವೋ? ಎಂದು ಕೇಳಿದ್ದು, ಅದಕ್ಕೆ ಉದಯ ಕುಮಾರ್‌ರವರು ತನಗೆ ಅಸಾಧ್ಯವೆಂದು ತಿಳಿಸಿದಾಗ ಈಗಾಗಲೇ ತಮ್ಮನ್ನು ಕರ್ತವ್ಯದಿಂದ ವಜಾ ಮಾಡುವ ನಿರ್ಧಾರ ಮಾಡಲಾಗಿದೆ, ನಾನು ಕೇಳಿದ ಕೇಸನ್ನು ಮಾಡಿದರೆ ಮಾತ್ರ ಪುನ: ಕರ್ತವ್ಯಕ್ಕೆ ಬರುವಂತೆ ಮಾಡುತ್ತೇನೆ ಎಂದು ಏಕವಚನದಲ್ಲಿ ಮಾತನಾಡಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ಉದಯಕುಮಾರ್ ಅವರು ತನ್ನಿಂದ ಕೇಸು ಮಾಡಲು ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದ್ದು ಇದಕ್ಕೆ ಪಿಡಿಓ ಪ್ರವೀಣ್‌ ಡಿಸೋಜಾರವರು ಉದಯ ಕುಮಾರ್‌ ಅವರ ಜಾತಿಯ ಬಗ್ಗೆ ಅವ್ಯಾಚವಾಗಿ ನಿಂಧಿಸಿದ್ದಲ್ಲದೇ ಬೈದು ಕೆಲಸದಿಂದ ತೆಗೆಯುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಉದಯ ಕುಮಾರ್‌ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 134/2015 ಕಲಂ:506 ಐಪಿಸಿ ಮತ್ತು 3(1)(VIII)(X) ದಲಿತ ದೌರ್ಜನ್ಯತಡೆ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Write A Comment