ಗಲ್ಫ್

ಅ.30ರಂದು ದುಬೈ ದೇವಾಡಿಗಾಸ್‌ನ 23ನೇ ವಾರ್ಷಿಕೋತ್ಸವ: ಖ್ಯಾತ ಗಾಯಕರಿಂದ ರಸಮಂಜರಿ, ಹಾಸ್ಯಮಯ ಪ್ರದರ್ಶನ

Pinterest LinkedIn Tumblr

DEVADIGA-2015

ದುಬೈ, ಅ.27: ಯುಎಇಯ ದುಬೈ ದೇವಾಡಿಗಾಸ್ ಇದರ 23ನೇ ವಾರ್ಷಿಕೋತ್ಸವ ಅಕ್ಟೋಬರ್ 30ರಂದು ದೆರಾದ ಅಲ್ ಮುತೀನಾದ ಶೆರಟಾನ್‌ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷರೂ, ಖ್ಯಾತ ಗಾಯಕರೂ ಹಾಗೂ ದುಬೈಯ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕರೂ ಆಗಿರುವ ಹರೀಶ್ ಶೇರಿಗಾರ್ ಪ್ರಕಟಿಸಿದ್ದಾರೆ.

ಸಂಸ್ಥೆಯ ವಾರ್ಷಿಕೋತ್ಸವವನ್ನು ಈ ಬಾರಿ ಅತ್ಯಂತ ವಿಜೃಂಬಣೆ ಮತ್ತು ಅವಿಸ್ಮರಣೀಯವಾಗಿಸಲು ನಿರ್ಧರಿಸಲಾಗಿದೆ. ಅಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ದೇವಾಡಿಗ ಫ್ಯಾಮಿಲಿ ಡೇ(ಕುಟುಂಬದ ಸ್ನೇಹಮಿಲನ) ಆಚರಣೆ ನಡೆಯಲಿದೆ. ಉತ್ಸಾಹಿ ಸದಸ್ಯರು ಇಡೀ ದಿನ ಮನರಂಜನೆ, ವಿನೋದಗಳ ಮೂಲಕ ಎಲ್ಲ ಕುಟುಂಬದ ಸದಸ್ಯರನ್ನು ಮನರಂಜಿಸಲಿದ್ದಾರೆ. ಇದರೊಂದಿಗೆ ರುಚಿಕರವಾದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಹರೀಶ್ ಶೇರಿಗಾರ್ ತಿಳಿಸಿದ್ದಾರೆ.

????????????????????????????????????

ಎಮಿರೇಟ್ಸ್‌ನಲ್ಲಿ 23 ವರ್ಷ ಪೂರ್ಣಗೊಳಿಸಿರುವುದಕ್ಕೆ ನಮಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆ ಎನಿಸುತ್ತಿದೆ. ಇಲ್ಲಿನ ಅತ್ಯಂತ ಹಳೆಯ ಸಮುದಾಯ ಸಂಘಟನೆಗಳಲ್ಲಿ ನಮ್ಮ ಸಂಘಟನೆ ಕೂಡ ಒಂದು ಎಂದು ಹೇಳಿಕೊಳ್ಳಲು ಹರ್ಷವಾಗುತ್ತಿದೆ. 1992ರಲ್ಲಿ ಸ್ಥಾಪಿಸಲ್ಟಟ್ಟ ದುಬೈ ದೇವಾಡಿಗಾಸ್ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದಿದೆ.

ತಾಯ್ನಡಿನಿಂದ ದೂರವಿರುವ ಸಮುದಾಯದ ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು, ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಅಂದು ಸಂಘಟನೆಯನ್ನು ಸ್ಥಾಪಿಸಲಾಯಿತಾದರೂ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಂಘ ಕೆಲಸ ಮಾಡಿದೆ. ಸಮಾಜದ ಸದಸ್ಯರಲ್ಲಿ ಒಗ್ಗಟ್ಟು ಮೂಡಿಸಲು ವೇದಿಕೆ ಒದಗಿಸಿಕೊಟ್ಟು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸಲು ನಮ್ಮ ಸಂಘ ತನ್ನದೇ ಆದ ಕೊಡುಗೆ ನೀಡಿದೆ. ಊರಿನಿಂದ ಉದ್ಯೋಗ ಅರಸಿ ಬಂದ ಸಮಾಜದವರಿಗೆ ಎಲ್ಲ ರೀತಿಯ ಸಹಾಯ-ಸೌಕರ್ಯ ಒದಗಿಸಿಕೊಟ್ಟು ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿರುವುದು ಕೂಡ ಸಂಘದ ಮತ್ತೊಂದು ಸಾಧನೆ ಎಂದರೆ ತಪ್ಪಾಗಲಾರದು ಎಂದು ಅವರು ತಿಳಿಸಿದ್ದಾರೆ.

28

ಸಂಘದ ಅಧೀನದಲ್ಲಿ ನಿಶ್ಚಿತ ಠೇವಣಿ ತೆರೆದು ಸಮಾಜದ ಸಾವಿರಾರು ಬಡ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರಿಯಲು ಪ್ರತಿವರ್ಷ ಧನಸಹಾಯ, ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಬಡ ವಿದ್ಯಾರ್ಥಿಗಳು ಕಲಿಯಲು ಇಚ್ಛಿಸುವ ಕೋರ್ಸ್ ತೆಗೆದುಕೊಳ್ಳಲು ಬೇಕಾದ ಸಹಾಯವನ್ನು ಸಂಘ ಒದಗಿಸುತ್ತಿದೆ. ಸಂಘಕ್ಕೆ ಸದಸ್ಯರು ನೀಡಿದ ಧನಸಹಾಯದಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಇದುವರೆಗೆ ಸಂಘದ ವತಿಯಿಂದ ಸುಮಾರು 75 ಲಕ್ಷ ರೂ.ಗೂ ಅಧಿಕ ವಿದ್ಯಾರ್ಥಿವೇತನ, ಪುಸ್ತಕ ವಿತರಣೆ, ವೈದ್ಯಕೀಯ ಸಹಾಯ, ಶಾಲೆಗಳಿಗೆ ಪ್ರಾಯೋಜಕತ್ವ, ವೃತ್ತಿಪರ ಶಿಕ್ಷಣಕ್ಕೆ ನೆರವು, ಅಗತ್ಯ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಬಳಸಲಾಗಿದೆ. ಪ್ರತಿವರ್ಷವೂ ಹೆಚ್ಚೆಚ್ಚು ಮೊತ್ತದಲ್ಲಿ ವಿದ್ಯಾರ್ಥಿ ವೇತನ ನೀಡುತ್ತಿರುವುದು ನಮ್ಮಲ್ಲಿ ಮತ್ತಷ್ಟು ಸಂತೋಷ ಉಂಟು ಮಾಡಿದೆ.

ಇಷ್ಟು ಮಾತ್ರವಲ್ಲದೆ ನಮ್ಮ ಸಮಾಜದ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೆ ಅವರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕೆಲಸವನ್ನು ಮಾಡುತ್ತಾ ಬರುತ್ತಿದ್ದೇವೆ. ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಡಾ. ಎಂ.ವೀರಪ್ಪ ಮೊಯ್ಲಿ, ಸ್ಯಾಕ್ಸೊಫೋನ್‌ವಾದಕ ಮೂಡಬಿದ್ರೆ ಗೋಪಾಲಕೃಷ್ಣ ದೇವಾಡಿಗ, ನರ ಶಸ್ತ್ರಚಿಕಿತ್ಸಕ ಡಾ. ಕೆ.ವಿ.ದೇವಾಡಿಗ, ಎಸ್‌ಡಿಎಂ ಕಾಲೇಜಿನ ನಿರ್ದೇಶಕ ಡಾ. ದೇವರಾಜ್ ಕೆ, ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಪ್ರೊ. ಬಿ.ಎಸ್.ಶೇರಿಗಾರ, ಹರಿಶ್ಚಂದ್ರ ದೇವಾಡಿಗ ದಂಪತಿ, ಆನಂದ್ ದೇವಾಡಿಗ ದಂಪತಿ ಮುಂತಾದವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಅವರ ಕೆಲಸವನ್ನು ಗುರುತಿಸಲಾಗಿದೆ.

ಮಾತ್ರವಲ್ಲ ರಕ್ತದಾನ ಶಿಬಿರ, ಅಡುಗೆ ಸ್ಪರ್ಧೆ, ಕ್ರೀಡಾಕೂಟ, ಪ್ರವಾಸ ಕಾರ್ಯಕ್ರಮ ಮುಂತಾದ ವಾರ್ಷಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಂಘದ ಸದಸ್ಯರಲ್ಲಿ ಹೊಸ ಚೈತನ್ಯ ಮತ್ತು ಹುಮ್ಮಸ್ಸು, ಸೃಜನಶೀಲತೆ ರೂಪಿಸಲಾಗುತ್ತಿದೆ ಎಂದು ಶೇರಿಗಾರ್ ತಿಳಿಸಿದ್ದಾರೆ.

23ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿ-ಹಲವರಿಗೆ ಸನ್ಮಾನ

23ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಅಬುಧಾಬಿಯ ನ್ಯೂ ಮೆಡಿಕಲ್ ಸೆಂಟರ್ ಗ್ರೂಪ್ ಆಫ್ ಕಂಪೆನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಶ್ರೀ ಡಾ.ಬಿ.ಆರ್. ಶೆಟ್ಟಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅವರಿಗೂ ಸನ್ಮಾನವನ್ನು ಏರ್ಪಡಿಸಲಾಗಿದೆ.

sindu

ಖ್ಯಾತ ಉದ್ಯಮಿ ಹಾಗೂ ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಮತ್ತು ಖ್ಯಾತ ವೈದ್ಯ ಡಾ. ಕೆ.ವಿ.ದೇವಾಡಿಗ, ಸಂಸ್ಥಾಪನಾ ಸದಸ್ಯ ಪದ್ಮವಲ್ಲಿ ಸಂಜಯ್ ದೇವಾಡಿಗ, ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಸಿಂಧು ಭೈರವಿ ಮತ್ತು ಮಚೇಂದ್ರನಾಥ ಮಂಗಳಾದೇವಿ, ಮಂಗಳೂರಿನ ಸಿಟಿ ಆಸ್ಪತ್ರೆಯ ಡಾ. ಭಾಸ್ಕರ್ ಶೆಟ್ಟಿ, ಯುಎಇ ಎಕ್ಸ್‌ಚೇಂಜ್‌ನ ಸಿಇಒ ಸುಧೀರ್ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್‌ನ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಚಿಲ್ಲಿ ವಿಲ್ಲಿಯ ಸಿಇಒ ಹಾಗೂ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ವೆಂಕಟರಮಣ, ಬಾರ್ಕೂರಿನ ಏಕನಾಥೇಶ್ವರಿ ದೇವಾಲಯದ ಟ್ರಸ್ಟಿ ಅಣ್ಣಯ್ಯ ಶೇರಿಗಾರ್, ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಎಚ್. ಮೋಹನ್‌ದಾಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

Padmavalli

ಇದೇ ವೇಳೆ ದೇವಾಡಿಗ ಫ್ಯಾಶನ್ ಷೋ, ಆಕರ್ಷಕ ಹಾಗೂ ಮನಮೋಹಕ ನೃತ್ಯ ಮತ್ತು 2014ರಲ್ಲಿ ದುಬೈಯಲ್ಲಿ ನಡೆದ ಬಲೆ ತೆಲಿಪಾಲೆ ಹಾಸ್ಯ ಸ್ಪರ್ಧೆಯ ರನ್ನರ್ಸ್‌ ತಂಡದಿಂದ ಹಾಸ್ಯ ಪ್ರದರ್ಶನ ನಡೆಯಲಿದೆ. ಹರೀಶ್ ಶೆರಿಗಾರ್, ವಿಜಯ ಭಟ್, ಅಕ್ಷತಾ ರಾವ್, ಸುರೇಶ್ ದೇವಾಡಿಗ ಮತ್ತಿತರರು ಇಂಪಾದ ಹಾಡುಗಳಿಂದ ಮನರಂಜಿಸಲಿದೆ. ಮಾತ್ರವಲ್ಲ ಆಕರ್ಷಕ ಬಹುಮಾನ ಪಡೆಯುವ ಸ್ಪರ್ಧೆ ನಡೆಯಲಿದೆ. ಯುಎಇಯಲ್ಲಿ ನೆಲೆಸಿರುವ ಎಲ್ಲಾ ದೇವಾಡಿಗ ಸಮುದಾಯದವರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹರೀಶ್ ಶೇರಿಗಾರ್ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗೆ ರಮೇಶ್ ದೇವಾಡಿಗ 050 4237589, ಲಕ್ಷ್ಮಿದಾಸ್ ರಾವ್ 05- 6557913, ದಿನೇಶ್ ಕುಮಾರ್ 050 5761564, ಬಾಲಕೃಷ್ಣ 050 1400638 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Write A Comment