ಕನ್ನಡ ವಾರ್ತೆಗಳು

ಬಡಗುತಿಟ್ಟಿನ ಯಕ್ಷಗಾನ ಕಲಾವಿದ ಮಾರ್ಗೋಳಿ ಗೋವಿಂದ ಶೆರುಗಾರರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Pinterest LinkedIn Tumblr

ಕುಂದಾಪುರ: ಬಡಗು ತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಮಾರ್ಗೋಳಿ ಗೋವಿಂದ ಶೆರುಗಾರರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದಕ್ಕೆ ಯಕ್ಷಗಾನ ಪ್ರೀಯರಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಪ್ರಶಸ್ತಿ ಪಡೆಯಬೇಕು ಎಂದು ಪ್ರಯತ್ನ ಮಾಡದ ಹಾಗೂ ದೊಡ್ಡ ಪ್ರಶಸ್ತಿಗಳ ನಿರೀಕ್ಷೆ ಇಲ್ಲದೆ ಹಲವು ದಶಕಗಳ ಕಾಲ ಕರಾವಳಿಯ ಗಂಡು ಕಲೆಯಾದ ಯಕ್ಷಗಾನದ ಬೆಳವಣಿಗೆಗಾಗಿ ಅವಿರತವಾಗಿ ದುಡಿದ ಅಜಾತಶತ್ರುವೊಬ್ಬರಿಗೆ ಎಂದೋ ಸಲ್ಲ ಬೇಕಾದ ಪ್ರಶಸ್ತಿ ಅವರ ಇಳಿ ವಯಸ್ಸಿನಲ್ಲಿಯಾದರೂ ಸಂದಿತಲ್ಲ ಎನ್ನುವ ತೃಪ್ತಿ ಅವರ ಅಭಿಮಾನಿಗಳಲ್ಲಿದೆ.

Yakshagana_Artist_Margoli Govindha

ಕುಂದಾಪುರ ನಗರದಿಂದ ಬಸ್ರೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಬರುವ ಮಾರ್ಗೋಳಿ ಎನ್ನುವ ಪುಟ್ಟ ಗ್ರಾಮದ ನರಸಿಂಹ ಶೇರುಗಾರ ಹಾಗೂ ಸುಬ್ಬಮ್ಮ ದಂಪತಿಗಳ ಕುಟುಂಬದಲ್ಲಿ ಜನಿಸಿದ್ದ ಅವರು ಯಕ್ಷಗಾನ ಕಲೆಯ ಮೇಲಿರುವ ಅಪರಿಮಿತ ಆಸಕ್ತಿಯಿಂದಾಗಿ ತಮ್ಮ 13 ನೇ ವಯಸ್ಸಿನಲ್ಲಿಯೇ ಬಡಗುತಿಟ್ಟಿ ಹೆಸರಾಂತ ಮೇಳಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಮಂದರ್ತಿ ಮೇಳವನ್ನು ಸೇರಿದ್ದರು. ಪಾರಂಪರಿಕ ಯಕ್ಷಗಾನ ಗುರುಗಳಾದ ವೀರಭಧ್ರ ನಾಯಕ್, ಕೊಕ್ಕರ್ಣಿ ಗುಂಡು ನಾಯಕ್, ನರಸಿಂಹ ಕಮ್ತಿ ಮುಂತಾದ ಹಿರಿಯ ಕಲಾವಿದರ ಗರಡಿಯಲ್ಲಿ ಯಕ್ಷಗಾನದ ಹೆಜ್ಜೆಯ ಹದಗಳನ್ನು ಕರಗತ ಮಾಡಿಕೊಂಡ ಅವರು ಅತ್ಯಲ್ಪ ಕಾಲದಲ್ಲಿಯೇ ಬಡಗುತಿಟ್ಟಿನ ಪ್ರಮುಖ ಸ್ತ್ರೀ ವೇಷಧಾರಿಯಾಗಿ ಗುರುತಿಸಿಕೊಂಡಿದ್ದರು.

ಯಕ್ಷರಂಗ ಸೇವೆಯ ಬಹು ಪಾಲು ಅಂದರೆ ಅಂದಾಜು 38 ವರ್ಷಗಳ ಕಾಲ ಸ್ತ್ರೀ ವೇಷಧಾರಿಯಾಗಿ ರಂಗ ಮೇಲೆ ಅಭಿನಯ ಶಾರದೆಯಾಗಿ ಮೆರೆದಿದ್ದ ಅವರು ಬಡಗುತಿಟ್ಟಿನ ಪ್ರಸಿದ್ದ ಮೇಳಗಳಾದ ಶ್ರೀ ಕ್ಷೇತ್ರ ಮಂದರ್ತಿ, ಶ್ರೀ ಕ್ಷೇತ್ರ ಮಾರಣಕಟ್ಟೆ, ಶ್ರೀ ಕ್ಷೇತ್ರ ಸೌಕೂರು, ಶ್ರೀ ಕ್ಷೇತ್ರ ಅಮೃತೇಶ್ವರಿ. ಶ್ರೀ ಕ್ಷೇತ್ರ ಇಡಗುಂಜಿ, ಶ್ರೀ ಕ್ಷೇತ್ರ ಕಮಲಶಿಲೆ ಮೇಳಗಳಲ್ಲಿ ಹಾಗೂ ವೃತ್ತಿ ಮೇಳಗಳಾದ ಪೆರ್ಡೂರು ಹಾಗೂ ಸಾಲಿಗ್ರಾಮ ಮೇಳಗಳಲ್ಲಿ ಬಣ್ಣದ ಸೇವೆಯನ್ನು ಮಾಡುವ ಮೂಲಕ ಸುಮಾರು 5 ದಶಕಗಳ ಕಾಲ ಯಕ್ಷಾಭಿಮಾನಿಗಳ ಹೃದಯ ಸಿಂಹಾಸನದ ಅನಭಿಶೇಕ್ತ ರಾಣಿಯಾಗಿದ್ದರು.

ಬಡಗುತಿಟ್ಟಿನ ಪುರಾಣ ಪ್ರಸಂಗಗಳಲ್ಲಿ ಅತ್ಯಂತ ಪ್ರಸಿದ್ದವಾದ ಹಾಗೂ ಭಕ್ತಿಪೂರ್ಣವಾದ ಪ್ರಸಂಗ ಶ್ರೀ ದೇವಿ ಮಾಹಾತ್ಮೆ. ಈ ಪ್ರಸಂಗದ ಮೊದಲ ಪ್ರಯೋಗ ನಡೆದದ್ದು, ಶ್ರೀ ಕ್ಷೇತ್ರ ಮಂದರ್ತಿಯಲ್ಲಿ. ಮೊದಲ ಪ್ರದರ್ಶನದಲ್ಲಿ ಶ್ರೀ ದೇವಿಯಾಗಿ ಬಣ್ಣ ಹಚ್ಚಿದ್ದು ಮಾರ್ಗೋಳಿಯವರು

Write A Comment