ಕನ್ನಡ ವಾರ್ತೆಗಳು

ಪ್ರಶಾಂತ್‌ ಕೊಲೆಯಲ್ಲಿ ಪ್ರಮುಖ ವ್ಯಕ್ತಿಗಳು ಶಾಮೀಲು : ಪ್ರಕರಣವನ್ನು ಸಿಬಿಐಗೆ ನೀಡಲು ಕುಟುಂಬಸ್ಥರ ಆಗ್ರಹ

Pinterest LinkedIn Tumblr

mudbidre_murder_photo_2

ಮೂಡಬಿದಿರೆ: ಇತ್ತೀಚಿಗೆ ಮೂಡಬಿದ್ರೆಯಲ್ಲಿ ದುಷ್ಕರ್ಮಿಗಳು ಹಾಡುಹಗಲೇ ಮಾರಾಕಸ್ತ್ರಗಳಿಂದ ಕಡಿದು ಹತ್ಯೆಗೈದ ಬಜರಂಗದಳದ ಸಕ್ರೀಯ ಕಾರ್ಯಕರ್ತ, ಗೋಸಂರಕ್ಷಣೆ ವಿಚಾರದಲ್ಲಿ ಮುಂಚೂಣಿಯಲ್ಲಿ ಕಾರ್ಯಾಚರಿಸುತ್ತಿದ್ದ ಪ್ರಶಾಂತ್ ಪೂಜಾರಿಯ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಪ್ರಶಾಂತ್‌ ಪೂಜಾರಿ ತಾಯಿ ಯಶೋದಾ ಪೂಜಾರಿ ಆಗ್ರಹಿಸಿದ್ದಾರೆ.

ಪ್ರಕರಣದ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣದಲ್ಲಿ ಕೆಲವು ಪ್ರಮುಖ ವ್ಯಕ್ತಿಗಳು ಆರೋಪಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿರುವ ಬಗ್ಗೆ ಅನುಮಾನವಿದೆ. ಇಂತಹ ಪ್ರಮುಖರನ್ನೂ ಬಂಧಿಸಿ ವಿಚಾರಣೆ ನಡೆಸಬೇಕಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವುದೇ ಸೂಕ್ತ ಎಂದು ಅವರು ಹೇಳಿದರು.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಪ್ರಕರಣದ ಹಿಂದೆ ಇನ್ನೂ ಕೆಲವು ಪ್ರಮುಖ ವ್ಯಕ್ತಿಗಳ ಹಸ್ತಕ್ಷೇಪವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಈ ಪ್ರಕರಣದಲ್ಲಿ ನಮಗೆ ನ್ಯಾಯಸಿಗಬೇಕಾದರೆ ಪ್ರಕರಣದ ಸಂಪೂರ್ಣ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಯಶೋದಾ ಪೂಜಾರಿಯವರು ಒತ್ತಾಯಿಸಿದ್ದಾರೆ.

ನಮ್ಮ ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ಅವರು ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ ಕಿಡಿಗೇಡಿಯೆಂದು ಹೇಳಿರುವುದು ಖಂಡನೀಯ ಎಂದು ಹೇಳಿದ ಅವರು, ನಮ್ಮ ಸ್ಥಳೀಯ ಶಾಸಕರೂ ಅಗಿರುವ ಸಚಿವ ಅಭಯಚಂದ್ರ ಜೈನ್ ಅವರು ಸೌಜನ್ಯಕ್ಕಾದರೂ ಮನೆಗೆ ಬಂದು ಸಾಂತ್ವನ ಹೇಳಲಿಲ್ಲ. ಇಂತವರು ಜನಪ್ರತಿನಿಧಿಯಾಗಲು ಯೋಗ್ಯರೇ ಎಂದು ಪ್ರಶ್ನಿಸಿದರು.

ಹಿಂದೂ ಸಂಘಟನೆಗಳಿಗೆ ಅಭಾರಿಯಾಗಿದ್ದೇವೆ :

ನಮ್ಮ ಮನೆಗೆ ಸುಮಾರು ರೂ. 8.50 ಲಕ್ಷ ಬ್ಯಾಂಕ್‌ ಸಾಲವಿತ್ತು. ಸಂಕಷ್ಟಕ್ಕೆ ಸ್ಪಂದಿಸಿ ಹಿಂದೂ ಸಂಘಟನೆ ಕಾರ್ಯಕರ್ತರು, ಸ್ವಾಮೀಜಿಗಳು, ಉದ್ಯಮಿಗಳು ಸುಮಾರು 20 ಲಕ್ಷ ಆರ್ಥಿಕ ನೆರವು ನೀಡಿ ಹೊರೆಯನ್ನು ನಿವಾರಿಸಿದ್ದಾರೆ. ಅವರಿಗೆಲ್ಲಾ ನಮ್ಮ ಕುಟುಂಬ ಚಿರಋಣಿಯಾಗಿದೆ ಎಂದು ಅವರು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರಶಾಂತ್‌ ಪೂಜಾರಿಯ ತಂದೆ ಆನಂದ ಪೂಜಾರಿ, ತಂಗಿ ಪ್ರಮೀತಾ ಮತ್ತಿತರರು ಉಪಸ್ಥಿತರಿದ್ದರು.

Write A Comment