ಕರಾವಳಿ

ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ ದ. ರಾ. ಬೇಂದ್ರೆ ಪ್ರಶಸ್ತಿ ಇರ್ಷಾದ್ ಮೂಡಬಿದ್ರಿಯವರ ಮಡಿಲಿಗೆ

Pinterest LinkedIn Tumblr

Irshad Channaveera Kanavi

ದುಬಾಯಿಯಲ್ಲಿ ನೆಲೆಸಿರುವ ಶ್ರೀಯುತ ಇರ್ಷಾದ್ ಮೂಡಬಿದ್ರಿ ಕವಿಯಾಗಿ, ಕತೆಗಾರನಾಗಿ, ಸಾಹಿತಿಯಾಗಿ, ಚುಟುಕುಗಳ ಮೂಲಕ ಜನಮಾನಸದಲ್ಲಿ ಚಿರಪರಿಚಿತರಾಗಿದ್ದಾರೆ. ಸಾಧನೆಯ ಹಾದಿಯ ಪಕ್ಷಿನೋಟದ ವಿಶೇಷ ಲೇಖನ……

ಶ್ರೀಯುತ ಶೇಖ್ ಇಸ್ಮಾಯಿಲ್ ಮತ್ತು ಶ್ರೀಮತಿ ಸಿರಾಜುನ್ನಿಸಾ ದಂಪತಿಗಳ ಪುತ್ರರಾದ “ಮಹಮ್ಮದ್ ಇರ್ಷಾದ್” ಅವರು ಕರಾವಳಿ ಕರ್ನಾಟಕದ ಪ್ರಕೃತಿಯ ಮಡಿಲಿನ ಸುಂದರ ನಾಡು ಕಾರ್ಕಳದಲ್ಲಿ ಹುಟ್ಟಿ ಬೆಳೆದವರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳಿಯ ಶಾಲೆಯಲ್ಲಿಯೇ ಪೊರೈಸಿದರು.

Irshad -photo- 4

Print

Print

ತಂದೆ ಅರಣ್ಯಾಧಿಕಾರಿಯಾಗಿದ್ದು ಸರ್ಕಾರಿ ಸೇವೆಯ ಜೊತೆಗೆ, ಸಮಾಜ ಸೇವೆಯಲ್ಲೂ ಹೆಸರುಗಳಿಸಿದ ವ್ಯಕ್ತಿತ್ವ ಹೊಂದಿದವರು. ಅವರು ಮುಂದೆ ವರ್ಗವಾಗಿ ಮೂಡಬಿದ್ರಿಗೆ ಆಗಮಿಸಿದಾಗ, ಇರ್ಷಾದ್ ಅವರು ಜೈನ್ ಹೈಸ್ಕೂಲಿಗೆ ಸೇರ್ಪಡೆಗೊಂಡರು. ಅಲ್ಲಿಯೇ ಪ್ರೌಡಶಾಲಾ ವಿದ್ಯಾಭ್ಯಾಸವನ್ನು ಪಡೆದು ಬಳಿಕ, ಬಿ.ಎ. ಪದವಿಯನ್ನು ಶ್ರೀ ಮಹಾವೀರ ಕಾಲೇಜಿನಲ್ಲಿ ಪೊರೈಸಿದರು.

Daiji Dubai irshad

Dhvani - Irshad

Irsha - Basavaraj Horatti

ಎಂಟನೇ – ಒಂಬತ್ತನೇ ತರಗತಿಯಲ್ಲಿಯೇ ಸಾಹಿತ್ಯದ ಗೀಳು ಹಚ್ಚಿಸಿಕೊಂಡ ಇವರು ಅಂದಿನ ದಿನಗಳಲ್ಲಿಯೇ “ಉದಯವಾಣಿ”, ಮುಂಗಾರು, ಪುಟಾಣಿ, ತರಂಗದಂತಹ ಪತ್ರಿಕೆಗಳಿಗೆ ಸಣ್ಣ ಪುಟ್ಟ ಕಥೆ ಕವನಗಳನ್ನು ಬರೆಯುತ್ತಿದ್ದರು. ಸ್ವಯಂ ಶಾಲಾ ಗುರುಗಳಾದ ಶಿಶು ಸಾಹಿತಿ ಪಳಕಳ ಸೀತಾರಾಮಭಟ್ಟರು ಇವರ ಬರವಣಿಗೆಗಳನ್ನು ತಿದ್ದಿದರು. ಉದಯವಾಣಿಯ ಸಂಪಾದಕರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರು ಹಾಗೂ ತರಂಗ ವಾರಪತ್ರಿಕೆಯ ಸಂಪಾದಕರಾದ ಸಂತೋಷ್ ಕುಮಾರ್ ಗುಲ್ವಾಡಿ ಅವರು ಇವರ ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಸಾಹಿತ್ಯ ವಲಯದಲ್ಲಿ ಗುರುತಿಸಿಕೊಳ್ಳಲು ತಮ್ಮ ಹೆಸರನ್ನು ಇರ್ಶಾದ್ ಮೂಡಬಿದ್ರಿ ಎಂಬ ಕಾವ್ಯನಾಮದಲ್ಲಿ ಪರಿಚಯಿಸಿಕೊಂಡರು.

Irshad Book Release

Karnataka Sangha Dubai

22

ಪ್ರಥಮ ಪಿ.ಯು.ಸಿ. ಸೇರಿದಾಗ ಇವರ ಬರವಣಿಗೆಗಳು ಸಾಕಷ್ಟು ಪಕ್ವವಾಗಿತ್ತು. ಇದೇ ಕಾರಣವಾಗಿ ತರಂಗದಲ್ಲಿ ಇವರ ಎರಡು ಬರಹಗಳು ಮುಖಪುಟ ಲೇಖನದ ರೂಪದಲ್ಲಿ ಪ್ರಕಟವಾಯಿತು. ’ಸುಧಾ’ ಪತ್ರಿಕೆಯಲ್ಲಿ ’ಕಾಡಿನ ಅರಸರು ಕೊರಗರು’ ಎಂಬ ಲೇಖನವು ಮುಖಪುಟ ಲೇಖನವಾಗಿ ಮೂಡಿ ಬಂದು ಇದು ಇವರ ಬರವಣಿಗೆ ಇನ್ನಷ್ಟು ಉತ್ತೇಜನ ನೀಡಿತ್ತು.

ಶಾಲಾ ವಾರ್ಷಿಕೋತ್ಸವಕ್ಕಾಗಿ ಇವರು ರಚಿಸಿದ ಮೂರು ನಾಟಕಗಳಲ್ಲಿ, ಒಂದು ನಾಟಕವನ್ನು ಸ್ವಯಂ ಅದ್ಯಾಪಕರೇ ಅಭಿನಯಿಸಿ ತಮ್ಮ ಶಿಷ್ಯನ ಬೆನ್ನು ತಟ್ಟಿದರು.

ಬಿ.ಎ. ಮುಗಿಸಿದ ಇರ್ಷಾದ್ ಮುಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋಧ್ಯಮದಲ್ಲಿ ಡಿಪ್ಲೋಮಾ ಪಡೆದರು. ಕಾಲೇಜಿನ ವತಿಯಿಂದಲೇ ’ಸಂಯುಕ್ತ ಕರ್ನಾಟಕ’ ಪತ್ರಿಕೆಗೂ ಆಯ್ಕೆಯಾದರು. ಅದಕ್ಕೂ ಮುನ್ನ ದುಬೈಯಲ್ಲಿನ ಸಂಸ್ಥೆಯೊಂದರಲ್ಲಿ ಉದ್ಯೋಗ ಲಭ್ಯವಾದ ಕಾರಣ . ಜಾಹಿರಾತು ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ.

Kuvempu Utsava Abu Dhabi Karnataka sangha

Mayura Awrad _ irshad

ಆರಂಭದಲ್ಲಿ ಉದಯವಾಣಿಗಾಗಿ ಹವ್ಯಾಸಿ ಪತ್ರಕರ್ತರಾಗಿ ದುಡಿದ ಅವರು ಇಲ್ಲಿಯ ಸಂಘ ಸಂಸ್ಥೆಗಳ ಚಟುವಟಿಕೆಗಳನ್ನು ನಾಡಿನ ಕನ್ನಡಿಗರಿಗೆ ಪರಿಚಯಿಸಿದರು. ದುಬೈಯ ಕುರಿತು ಅನೇಕ ಸಚಿತ್ರ ಲೇಖನಗಳನ್ನು ಬರೆದು ಉದಯವಾಣಿ, ತರಂಗ, ಸುಧಾ, ತುಷಾರ, ಪ್ರಜಾವಾಣಿ, ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟಿಸಿದರು. ’ಉದಯವಾಣಿ’ ಆರಂಭಿಸಿದ್ದ ನುಡಿಬರಹಗಳ ಚಿತ್ರಾವಳಿ ಅಂಕಣಕ್ಕೆ ಇವರು ಸುಮಾರು ನೂರಕ್ಕೂ ಹೆಚ್ಚಿನ ಬರಹಗಳನ್ನು ಬರೆದರು. ಇದು “ಯು.ಎ.ಇ.” ಯ ಬಗ್ಗೆ ಜನರು ನೋಡದ ಇನ್ನೊಂದು ಮಗ್ಗುಲಿನ ಬಗ್ಗೆ ಹೊಸ ಹೊಸ ರೋಚಕ ವಿಚಾರಗಳನ್ನು ಎಲ್ಲರೂ ತಿಳಿವಂತಾಯಿತು.

ಮಂಗಳೂರಿನಿಂದ ಆರಂಭವಾದ ದಿನಪತ್ರಿಕೆಯಾದ ’ವಾರ್ತಾಭಾರತಿ’ಗೆ ಇವರು ಅಂಕಣ ಬರಹ ಬರೆದರು. ’ಮರಳ ಹೆಜ್ಜೆಗಳು’ ಅನ್ನುವ ಅಂಕಣದಲ್ಲಿ ಗಲ್ಫ್ ದೇಶದ ಆಗು-ಹೋಗುಗಳನ್ನು ಸವಿಸ್ತಾರವಾಗಿ ತೆರೆದಿಟ್ಟರು. ಮುಖ್ಯವಾಗಿ ಇದು ದುಬೈಗೂ ನಮ್ಮವರಿಗೂ ಒಂದು ರೀತಿಯ ಸೇತುವೆಯಾಗಿ ಕಾರ್ಯ ನಿರ್ವಹಿಸಿತು.

Press Club Moodabidri

Tulu Siri Dubai

’ಕನ್ನಡ ಧ್ವನಿ’ ದುಬೈಯಲ್ಲಿ ಕೆಲವು ವರ್ಷಗಳ ಹಿಂದೆ ಪ್ರಚಲಿತದಲ್ಲಿದ್ದ ತಾಣ ಇಲ್ಲೂ ಇರ್ಷಾದ್ ಮೂಡಬಿದ್ರಿ ಅವರು “ಇರ್ಶಾದ್ರಿಯ ಚುಟುಕುಗಳು” ಅನ್ನುವ ಅಂಕಣದಲ್ಲಿ ಪ್ರತಿವಾರ ಬರೆದರು ಅದನ್ನು ಎರಡು ವರ್ಷದವರೆಗೆ ಮುಂದುವರೆಸಿದರು.

‘ಅನುಪಮ’ ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ’ದೂರ ದುಬೈಯಿಂದ’ ಇರ್ಷಾದ್ ಮೂಡಬಿದ್ರಿ ಅವರ ಜನಪ್ರಿಯ ಅಂಕಣ ಬರಹ. ಅದನ್ನು ನಾಲ್ಕು ವರ್ಷಗಳವರೆಗೆ ನಿರಂತರವಾಗಿ ಪ್ರಕಟಗೊಂಡಿತು.

ಇದೇ ಅಂಕಣದಲ್ಲಿ ಅವರು ನೊಂದ, ಮೋಸಹೋದ ಓರ್ವ ಮಾತು ಬಾರದ ಮೂಕ ಹೆಣ್ಣು ಮಗಳ ಸಚಿತ್ರ ವರದಿಯನ್ನು ಬರೆದರು. ಆಕೆಯನ್ನು ಮದುವೆಯಾದ ಗಂಡು, ಇವಳಿಂದ ವರದಕ್ಷಿಣೆಯ ಹಣದೊಂದಿಗೆ ಒಡವೆ – ಬಂಗಾರವನ್ನು ದೋಚಿ ಪರಾರಿಯಾದ. ಸುದ್ದಿ ತಿಳಿದ ಆಕೆಯ ತಂದೆ ಹೃದಯಘಾತದಿಂದ ತೀರಿಹೋದರು. ಮೈ ತುಂಬಾ ಸಾಲ ಮಾಡಿದ್ದ ಮನೆಯವರಿಗೆ ಏನೂ ಮಾಡಲಾಗದ ಅಸಹಾಯಕತೆ, ಮದುವೆಯಾದ ಒಂದೇ ತಿಂಗಳಿನಲ್ಲಿ ತನ್ನ ಬದುಕು ಈ ರೀತಿಯಾಗುವುದೆಂದು ಆ ಮೂಕ ಹೆಣ್ಣು ಮಗಳು ಕಲ್ಪಿಸಿಯೇ ಇರಲಿಲ್ಲ.
ಇರ್ಷಾದ್ ಅವರು ಈ ಎಲ್ಲಾ ರೋದನವನ್ನು ಬರೆದು “ಮೂಕ ಹಕ್ಕಿಗೆ ಸಹಾಯ ಮಾಡುತ್ತಿರಾ” ಎಂದು ಓದುಗ ಬಳಗದಲ್ಲಿ ವಿನಂತಿಸಿಕೊಂಡರು. ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಕೇವಲ ಒಂದೂವರೆ ತಿಂಗಳಿನಲ್ಲಿ ಆಕೆಯ ಖಾತೆಗೆ ಸುಮಾರು ಎರಡು ಲಕ್ಷದ ಇಪ್ಪತು ಸಾವಿರ ರೂ. ಜಮೆಯಾಯಿತು. ಇದು ಅವರ ಸಾಲ ತೀರಿಸಲು ಸಾಕಷ್ಟು ನೆರವು ನೀಡಿತು.

ಇರ್ಷಾದ್ ಮೂಡಬಿದ್ರಿಯವರು ಇದುವರೆಗೆ ನಾಲ್ಕು ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅವರ ಪ್ರವಾಸ ಬರಹಗಳ ಕೃತಿ ’ದುಬಾಯಿ ನೆನಪುಗಳು” ಎರಡನೆಯ ಮುದ್ರಣ ಕಂಡಿದೆ. ’ರಗಳೆ ರಾಗಿಣಿ’ ಇವರ ಹಾಸ್ಯ ಬರಹಗಳ ಸಂಕಲನ, ಇರ್ಶಾದ್ರಿಯ ಚುಟುಕುಗಳು. ಚುಟುಕು ಚೂರುಗಳ ಸಂಗ್ರಹ. ಹಾಗೆ ಈ ವರ್ಷ ಕಾಂತಾವರದ ಮೊಗಸಾಲೆ ಪ್ರಕಾಶನದಿಂದ ಬಿಡುಗಡೆಯಾದ “ಖರ್ಜೂರದ ಮರದಲ್ಲಿ ಕೋಗಿಲೆ” ಪ್ರಬಂಧ ಬರಹಗಳ ಸಂಕಲನ ಜನ ಮೆಚ್ಚುಗೆ ಪಡೆದಿದೆ.

ಸರಳ ಸ್ವಭಾವದ ಇರ್ಷಾದ್ ಅವರು ಅನೇಕ ಕಥೆ ಹಾಗೂ ಕವಿತೆಗಳನ್ನು ಬರೆದಿದ್ದಾರೆ. ಯು.ಎ.ಇ. ಯ ದುಬೈ, ಅಬುಧಾಬಿ, ಶಾರ್ಜಾ ದಲ್ಲಿ ನಡೆಯುವ ರಾಜ್ಯೋತ್ಸವ, ವಿಶ್ವಕನ್ನಡ ಸಮ್ಮೆಳನ, ಚುಟುಕು ಸಮ್ಮೇಳನ ಮುಂತಾದ ಅದ್ದೂರಿ ಸಭೆ ಸಮಾರಂಭಗಳಲ್ಲಿ ಏರ್ಪಡಿಸುವ ಪ್ರತಿಯೊಂದು ಕವಿ ಗೋಷ್ಠಿಯಲ್ಲಿಯೂ ಅವರ ಕಾವ್ಯ ವಾಚನ ಇದ್ದೇ ಇರುತ್ತದೆ.

ಸಾಮಾಜಿಕ ಕಳಕಳಿ ಇರುವ ಇರ್ಷಾದ್ ಮಾಡಬಿದ್ರಿ ಸ್ವತ: ಓರ್ವ ರಕ್ತದಾನಿಯಾಗಿದ್ದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು, ರಕ್ತ ದಾನ ಮಾಡುವ ಸಂಘ ಸಂಸ್ಥೆಗಳೊಂದಿಗೆ ಕೈ ಜೋಡಿಸಿದ್ದಾರೆ.

ಇವರ ಪತ್ನಿ ಶ್ರೀಮತಿ ನಸೀಮ್ ಸ್ಥಳಿಯ ಶಾಲೆಯಲ್ಲಿ ಅಧ್ಯಾಪಕಿಯಾಗಿದ್ದಾರೆ. ಮಗ ಮಹಮ್ಮದ್ ನಿಹಾದ್ ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮ್ಯಕಾನಿಕಲ್ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಪುತ್ರಿ ನಾಜ್ಮಿ ಇನಾಸ್ ದುಬೈ ಇಂಡಿಯನ್ ಹೈಸ್ಕೂಲಿನಲ್ಲಿ ಎಂಟನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ.

2005 ರಲ್ಲಿ ಶಾರ್ಜಾ ಕರ್ನಾಟಕ ಸಂಘ ಕೊಡಮಾಡುವ “ಮಯೂರ ಪ್ರಶಸ್ತಿ” ಪಡೆದ ಇರ್ಷಾದ್ ಅವರು ಸ್ಥಳೀಯ ಮತ್ತು ನಾಡಿನಲ್ಲಿರುವ ಹಲವು ಸಂಘ ಸಂಸ್ಥೆಗಳಿಂದಲೂ ಹಲವಾರು ಸನ್ಮಾನ, ಪುರಸ್ಕಾರಗಳನ್ನು ಪಡೆದಿದ್ದಾರೆ.

ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ 2015 ನೇ ಸಾಲಿನ “ದ. ರಾ. ಬೇಂದ್ರೆ ಪ್ರಶಸ್ತಿ” ಯನ್ನು ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅಬುಧಾಬಿ ಇಂಡಿಯ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ ಕನ್ನಡಿಗರ ಸಮಾವೇಶದಲ್ಲಿ ಸ್ವೀಕರಿಸಲಿದ್ದಾರೆ.

ಇರ್ಷಾದ್ ಮೂಡಬಿದಿರಿಯವರ ಸಾಹಿತ್ಯ ಸೇವೆ ನಿರಂತರವಾಗಿ ಮುನ್ನಡೆಯುತ್ತಿರಲಿ ಎಂಬ ಹಾರೈಕೆಯೊಂದಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು.

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ

Write A Comment