ರಾಷ್ಟ್ರೀಯ

11 ತಿಂಗಳ ಮಗುವಿದ್ದಾಗ ಆದ ಮದುವೆ ರದ್ದುಗೊಳಿಸಿಕೊಂಡ ಯುವತಿ

Pinterest LinkedIn Tumblr

childmarriageಜೋಧ್ ಪುರ್: ಬಾಲ್ಯ ವಿವಾಹ ಮಕ್ಕಳನ್ನು ಎಷ್ಟರ ಮಟ್ಟಿಗೆ ಕಾಡಿದೆ ಎಂಬುದಕ್ಕೆ ಉದಾಹರಣೆ ಇಲ್ಲಿದೆ. ಬಾಲ್ಯ ವಿವಾಹ ನಡೆಯುತ್ತದೆ ನಿಜ, ಆದರೆ, 11 ತಿಂಗಳ ಮಗುವಿಗೂ ಬಾಲ್ಯ ವಿವಾಹ ಮಾಡಿದ್ದಾರೆಂದರೇ ಎಂತ ದುರದೃಷ್ಟಕರ ಸಂಗತಿ.

ಹೌದು, 1996ರಲ್ಲಿ ಜೋಧ್ ಪುರದ ರೋಹಿಚ್ಯಕಲನ್ ಎಂಬ ಹಳ್ಳಿಯಲ್ಲಿ 11 ತಿಂಗಳ ಹೆಣ್ಣು ಮಗುವಿಗೆ ಬಾಲ್ಯ ವಿವಾಹ ಮಾಡಲಾಗಿತ್ತು.

11 ತಿಂಗಳ ಸಂತದೇವಿ ಮೇಘವಾಲ್ ಎಂಬ ಹೆಣ್ಣುಮಗುವಿಗೆ 9 ವರ್ಷದ ಬಾಲಕನೊಂದಿಗೆ ಪೋಷಕರು ಬಾಲ್ಯ ವಿವಾಹ ಮಾಡಿಸಿದ್ದರು. ಆದರೆ, ಸಂತದೇವಿಗೆ ಬಾಲ್ಯ ವಿವಾಹವಾಗಿರುವುದು ತಿಳಿದದ್ದೇ 11ನೇ ತರಗತಿ ವ್ಯಾಸಂಗ ಮಾಡುತ್ತಿರಬೇಕಾದರೆ, ಆಕೆಯ ಗೆಳತಿಯರು ನೀನು ಮದುವೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ನಿನಗಾಗಲೇ ಮದುವೆಯಾಗಿದೆ ಎಂದು ಚುಡಾಯಿಸಿದಾಗಲೇ ಆಕೆಗೆ ಬಾಲ್ಯ ವಿವಾಹವಾಗಿರುವ ವಿಷಯ ತಿಳಿದಿದೆ.

ವಿಷಯ ತಿಳಿದ ಸಂತದೇವಿ ಪೋಷಕರನ್ನು ಕೇಳಿದ್ದಾಳೆ. ಆಗ ಪೋಷಕರು ಹೌದು ನಿನಗೆ ಬಾಲ್ಯ ವಿವಾಹ ಮಾಡಲಾಗಿದೆ. ಇದು ನಿನ್ನ ಅಜ್ಜನ ಆಸೆಯಾಗಿತ್ತು. ಈ ವಿಷಯದಲ್ಲಿ ನಾವೇನು ಮಾಡಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾರೆ. ತದ ನಂತರ 28 ವರ್ಷದ ಸಂವಲ್ರಾಮ್ ಎಂಬ ಯುವಕ ನಾನು ನಿನ್ನ ಗಂಡ ಎಂದು ಅವಳ ಬಳಿ ಬಂದು ಹೇಳಿದ್ದಾನೆ. ಆಗ ಸಂತದೇವಿ ನಾನು ಈ ಮದುವೆಯನ್ನು ಒಪ್ಪುವುದಿಲ್ಲ ಎಂದು ನಿರಾಕರಿಸಿದ್ದಾಳೆ. ಆದರೆ, ಪಟ್ಟು ಬಿಡದ ಯುವಕ ಆಕೆಯ ಶಾಲೆಯ ಸುತ್ತಾ ಸುತ್ತಾಡುತ್ತಾ, ಕುಡಿದ ಅಮಲಿನಲ್ಲಿ ನಾನು ನಿನ್ನ ಪತಿ ಎಂದು ಕಿರುಚಾಡುತ್ತಿದ್ದನಂತೆ.

ಈ ಸಂಬಂಧ ಹಳ್ಳಿಯ ಮುಖ್ಯಸ್ಥರಲ್ಲಿ ಸಹಾಯ ಮಾಡುವಂತೆ ಸಂತದೇವಿ ಕೇಳಿಕೊಂಡರು ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಆಕೆ ಮಕ್ಕಳ ಹಕ್ಕುಗಳ ಬಗ್ಗೆ ಹೋರಾಟ ನಡೆಸುತ್ತಿರುವ ಎನ್ ಜಿಓ ಭೇಟಿ ಮಾಡಿ ತನ್ನ ವಿಷಯ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಹಳ್ಳಿಯ ಪಂಚಾಯತ್ ಸದಸ್ಯರು, ಈ ರೀತಿ ದೂರು ನೀಡಿದರೆ, ದಂಡ ವಿಧಿಸುವ ಜೊತೆಗೆ ಗ್ರಾಮದಿಂದ ಬಹಿಷ್ಕರಿಸಲಾಗುವುದು ಎಂದು ಹೇಳಿದ್ದಾರೆ.

ನಂತರ, ಪಂಚಾಯತ್ ಸದಸ್ಯರನ್ನು ಮನವೊಲಿಸಿ ಜೋಧ್ ಪುರ್ ಕುಟುಂಬ ನ್ಯಾಯಾಲಯದಲ್ಲಿ ತನಗೆ ನ್ಯಾಯ ದೊರಕಿಸಿಕೊಡುವಂತೆ ಸಂತದೇವಿ ಅರ್ಜಿ ಸಲ್ಲಿಸಿದ್ದಳು. ವಿಚಾರಣೆ ನಡೆಸಿದ ನ್ಯಾಯಾಲಯ ಬಾಲ್ಯ ವಿವಾಹವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶದಿಂದ ನಿರಾಳಗೊಂಡಿರುವ ಸಂತದೇವಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದು, ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ.

Write A Comment