ಕನ್ನಡ ವಾರ್ತೆಗಳು

ಗಾಂಜಾ ಡೀಲಿಂಗ್ ಬಗ್ಗೆ ಮಾಹಿತಿಯಿದ್ದು ಶೀಘ್ರ ಕ್ರಮ ಕೈಗೊಳ್ತೇವೆ: ತಲ್ಲೂರು ಜನಸಂಪರ್ಕ ಸಭೆಯಲ್ಲಿ ಕುಂದಾಪುರ ಡಿವೈಎಸ್ಪಿ

Pinterest LinkedIn Tumblr

ಕುಂದಾಪುರ: ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡುವ ಮೂಲಕ ಅವರಲ್ಲಿ ಸಂಸ್ಕಾರವನ್ನು ಬೆಳೆಸುವ ಮಹತ್ತರ ಜವಬ್ದಾರಿ ಪೋಷಕರದ್ದಾಗಿದೆ. ಮನೆಯಲ್ಲಿ ಉತ್ತಮ ವ್ಯವಸ್ಥೆ ಹಾಗೂ ವಾತಾವರಣವಿದ್ದಲ್ಲಿ ಆ ಮನೆ ಹಾಗೂ ಸುತ್ತಮುತ್ತಲಿನ ಸಮಾಜ ಸುವ್ಯವಸ್ಥಿತವಾಗಿರುತ್ತದೆ ಆದ್ದರಿಂದ ಎಲ್ಲಾ ಮನೆಗಳು ಸರಿಯಗಿದ್ದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕುಂದಾಪುರ ಡಿವೈ‌ಎಸ್ಪಿ ಎಂ. ಮಂಜುನಾಥ ಶೆಟ್ಟಿ ಹೇಳಿದ್ದಾರೆ.

ತಲ್ಲೂರು ಗ್ರಾಮಪಂಚಾಯತ್ ವತಿಯಿಂದ ಗ್ರಾಮಸ್ಥರ ಸಹಕಾರದಲ್ಲಿ ಭಾನುವಾರ ತಲ್ಲೂರು ಸಮೀಪದ ಕೋಟೆಬಾಗಿಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಪೊಲೀಸ್ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಂದಾಪುರದಲ್ಲಿ ಉತ್ತಮ ಜನಸ್ನೇಹಿ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ, ಸಂಚಾರಿ ಪೊಲೀಸ್ ಠಾಣೆಗಳಿದೆ. ಜನರು ಅಗತ್ಯ ಸಂದರ್ಭದಲ್ಲಿ ಇದೆಲ್ಲದರ ಸದುಪಯೋಗವನ್ನು ಪಡೆಯಬೇಕು. ತಮ್ಮ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಬಂದಪಟ್ಟವರನ್ನು ಸಂಪರ್ಕಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು. ಕೆಲವೊಮ್ಮೆ ಸಾರ್ವಜನಿಕರು ನೀಡುವ ಸಣ್ಣ ಮಾಹಿತಿಯೂ ಮುಂದಾಗುವ ದೊಡ್ಡ ಅಪರಾಧವನ್ನು ತಡೆಯಲು ಸಾಧ್ಯವಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಸುಗಮಗೊಳ್ಳುವಲ್ಲಿ ಇಲಾಖೆಯ ಜೊತೆ ಸಾರ್ವಜನಿಕರ ಪಾತ್ರವೂ ಮಹತ್ತರವೆನ್ನುವುದನ್ನು ಪ್ರತಿಯೊಬ್ಬ ನಾಗರಿಕನು ತಿಳಿದು ಸಹಕಾರ ನೀಡಬೇಕಿದೆ ಎಂದರು.

Tallur_Police _jana samarka sabhe (1) Tallur_Police _jana samarka sabhe (2) Tallur_Police _jana samarka sabhe (6) Tallur_Police _jana samarka sabhe (4) Tallur_Police _jana samarka sabhe (7) Tallur_Police _jana samarka sabhe (5) Tallur_Police _jana samarka sabhe (3)

ಗ್ರಾಮಪಂಚಾಯತ್ ಸದಸ್ಯ ಉದಯಕುಮಾರ್ ತಲ್ಲೂರು ಮಾತನಾಡಿ, ಗ್ರಾಮೀಣ ಭಾಗದ ಜನಸಾಮಾನ್ಯರಲ್ಲಿ ಕಾನೂನು ಅರಿವು ಹಾಗೂ ತಪಿಗೆ ತಕ್ಕದಾಗಿ ಆಗುವ ಶಿಕ್ಷೆಯ ಬಗ್ಗೆ ಗೊಂದಲಗಳಿವೆ. ಅಲ್ಲದೇ ಪೊಲೀಸ್ ಠಾಣೆಯ ಕುರಿತಾಗಿ ಭಯವೂ ಇದ್ದು ಇದನ್ನು ನಿವಾರಣೆ ಮಾಡುವ ಸಲುವಾಗಿ ಇಲಾಖೆ ಪ್ರಯತ್ನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಇನ್ನೋರ್ವ ಗ್ರಾ.ಪಂ. ಸದಸ್ಯೆ ಜುಡಿತ್ ಮೆಂಡೋನ್ಸಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಅವರಲ್ಲಿ ಕಾನೂನಿನ ಬಗ್ಗೆಗಿನ ಅರಿವು ಮೂಡಿಸುವ ಕೆಲಸ ಇಲಾಖೆಯಿಂದ ನಡೆಯಬೇಕಿದ್ದು ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಜಾಗ್ರತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಲ್ಲೂರು ಗ್ರಾ.ಪಂ. ಅಧ್ಯಕ್ಷ ಆನಂದ ಬಿಲ್ಲವ ಮಾತನಾಡಿ, ತಲ್ಲೂರು ಗ್ರಾ.ಪಂ. ವ್ಯಾಪ್ತಿಯ ಉಪ್ಪಿನಕುದ್ರು ಹಾಗೂ ತಲ್ಲೂರು ಗ್ರಾಮಕ್ಕೆ ನಿತ್ಯ ಪೊಲೀಸರು ಗಸ್ತು ತಿರುಗುವ ಅನಿವಾರ್ಯತೆ ಇದ್ದು ಇದರಿಂದ ಕಿಡಿಗೇಡಿಗಳ ಸಮಸ್ಯೆ ನಿವಾರಣೆಯಾಗುವ ಕುರಿತು ಅಭಿಪ್ರಾಯಪಟ್ಟರು. ಈಗಾಗಲೇ ಗ್ರಾಮಪಂಚಾಯತ್ ಆಸುಪಾಸಿನಲ್ಲಿ ಅಕ್ರಮ ಚಟುವಟಿಕೆಗಳು ರಾತ್ರಿ ವೇಳೆ ನಡೆಯುತ್ತಿರುವ ಬಗ್ಗೆಯೂ ಗಮನಕ್ಕೆ ಬಂದಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಆಯಕಟ್ಟಿನ ಸ್ಥಳಕ್ಕೆ ಸಿ.ಸಿ. ಟಿವಿ ಅಳವಡಿಸುವ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕುವ ಯೋಜನೆಯಿದೆ ಎಂದರು.

ಗ್ರಾಮಸ್ಥರ ಅಹವಾಲುಗಳು:
ತಲ್ಲೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪಾರ್ಥಿಕಟ್ಟೆ, ಕುಂತಿಯಮ್ಮ ದೇವಸ್ಥಾನದ ಸಮೀಪದಲ್ಲಿ ಒಂಟಿಯಾಗಿ ಸಂಚರಿಸುವ ಮಹಿಳೆಯರು ಮತ್ತು ಯುವತಿಯರಿಗೆ ಕೆಲವು ಕಿಡಿಗೇಡಿಗಳು ಚುಡಾಯಿಸುತ್ತಿದ್ದು ಈ ಬಗ್ಗೆ ಮಹಿಳೆಯರು ಇಲಾಕೆಯ ಅಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ವೈ.ಎಸ್ಪಿ. ಅವರು ಸೂಕ್ತ ಕ್ರಮಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಇನ್ನು ತಲ್ಲೂರು ಭಾಗದಲ್ಲಿ ಮಾಧಕ ವಸ್ತುಗಳ ಮಾರಾಟ ಹಾಗೂ ಸರಬರಾಜು ನಡೆಯುತ್ತಿರುವ ಬಗ್ಗೆಯೂ ಸಾರ್ವಜನಿಕರು ಈ ಸಂದರ್ಭ ಪೊಲೀಸರಿಗೆ ಮಾಹಿತಿ ನೀಡಿದರು. ಇನ್ನು ತಲ್ಲೂರು ಬಸ್ಸು ನಿಲ್ದಾಣದಲ್ಲಿ ವಾಹನ ದಟ್ಟಣೆ ನಡೆಯುತ್ತಿದ್ದು ಇದನ್ನು ಸಂಚಾರಿ ಪೊಲೀಸರು ತಡೆಯಬೇಕೆಂದು ಮನವಿಯಿತ್ತರು.

ಈ ಸಂದರ್ಭದಲ್ಲಿ ಕುಂದಾಪುರ ವೃತ್ತನಿರೀಕ್ಷಕ ದಿವಾಕರ ಪಿ.ಎಂ, ಠಾಣಾಧಿಕಾರಿ ನಾಸೀರ್ ಹುಸೇನ್, ಸಂಚಾರಿ ಠಾಣೆ ಉಪನಿರೀಕ್ಷಕ ಜಯ ಹಾಗೂ ಮಹಿಳಾ ಠಾಣೆ ಎಸ್ಸೈ ಸುಜಾತಾ ಅವರು ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಜಯಲಕ್ಷ್ಮೀ ಕೊಠಾರಿ, ಚಾಲುಕ್ಯ ಪತ್ರಿಕೆ ಸಂಪಾದಕ ಚಂದ್ರಮ ತಲ್ಲೂರು, ಗ್ರಾ.ಪ. ಸದಸ್ಯರು ಉಪಸ್ಥಿತರಿದ್ದರು.

Write A Comment