ಕನ್ನಡ ವಾರ್ತೆಗಳು

ನ.7-8: ತಾಲೂಕುಗಳಲ್ಲಿ ಮಂಗಳೂರು ಉದ್ಯೋಗ ಮೇಳದ ಓರಿಯಂಟೇಶನ್ ಸಭೆ.

Pinterest LinkedIn Tumblr

Udyoga_Mela_Press_1

ಮಂಗಳೂರು, ನ.03:  ನಗರದ ಹೊರವಲಯದ ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ.19 ಮತ್ತು 20ರಂದು ನಡೆಯಲಿರುವ ಮಂಗಳೂರು ಉದ್ಯೋಗ ಮೇಳದ ಅಂಗವಾಗಿ ನ.7 ಮತ್ತು 8ರಂದು ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಮುಖ ಕೇಂದ್ರಗಳಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಓರಿಯಂಟೇಶನ್ ಸಭೆಯನ್ನು ಆಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪೆನಿಗಳು ಹಾಗೂ ಲಭ್ಯವಿರುವ ಉದ್ಯೋಗಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಈ ಸಭೆಯನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು. ಮಂಗಳೂರಿನ ಕದ್ರಿ ಪಾಲಿಟೆಕ್ನಿಕ್, ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್, ಮುಲ್ಕಿಯ ಸರಕಾರಿ ಜೂನಿಯರ್ ಕಾಲೇಜು, ಬಂಟ್ವಾಳದ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆ, ಸುಳ್ಯದ ಸೈಂಟ್ ಬ್ರಿಡ್ಜಸ್ ಸ್ಕೂಲ್, ಬೆಳ್ತಂಗಡಿಯ ದ.ಕ. ಜಿಪಂ ಮಾದರಿ ಹಿ.ಪ್ರಾ. ಶಾಲೆ ಹಾಗೂ ಪುತ್ತೂರಿನ ಸೈಂಟ್ ವಿಕ್ಟರ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಈ ಸಭೆಗಳು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಎರಡು ದಿನ ನಡೆಯಲಿದೆ ಎಂದು ರೈ ತಿಳಿಸಿದರು.

Udyoga_Mela_Press_2 Udyoga_Mela_Press_3 Udyoga_Mela_Press_4

೨೦0 ಕಂಪೆನಿಗಳು ಭಾಗವಹಿಸುವ ನಿರೀಕ್ಷೆ: ಬೆಂಗಳೂರಿನಲ್ಲಿ ಈಗಾಗಲೇ ವಿವಿಧ ಕಂಪನಿಗಳ ಆಡಳಿತ ನಿರ್ದೇಶಕರು ಹಾಗೂ ಸಿಇಒಗಳ ಸಭೆ ನಡೆಸಲಾಗಿದ್ದು, 100 ಕಂಪೆನಿಗಳ 200 ಪ್ರತಿನಿಧಿಗಳು ಭಾಗವಹಿಸಿದ್ದರು. ಈಗಾಗಲೇ 45 ಕಂಪೆನಿಗಳು ನೋಂದಣಿ ಮಾಡಿಕೊಂಡಿದ್ದು, 192 ಕಂಪೆನಿಗಳು ವೌಖಿಕವಾಗಿ ಒಪ್ಪಿಗೆ ಸೂಚಿಸಿವೆ. 200ಕೂ ಅಧಿಕ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಚಿವ ರೈ ಹೇಳಿದರು.

ಸರಕಾರಿ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಲು ಕಿಯೋನಿಕ್ಸ್ ಸಂಸ್ಥೆಯೂ ಮುಂದೆ ಬಂದಿದೆ. ಸ್ಥಳೀಯ ಕಂಪೆನಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಸಭೆಯನ್ನು ಕೂಡಾ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಹೇಳಿದರು. ಪದವಿ, ಸ್ನಾತಕೋತ್ತರ, ಐಟಿಐ, ಡಿಪ್ಲೊಮಾ, ನರ್ಸಿಂಗ್, ಬಿ ಫಾರ್ಮಾ, ಡಿ ಫಾರ್ಮಾ, ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ನುರಿತ ಅನುಭವಿ ಹಾಗೂ ಅನುಭವ ಇಲ್ಲದ ಉದ್ಯೋಗಾಕಾಂಕ್ಷಿಗಳು ಮೇಳದ ಪ್ರಯೋಜನ ಪಡೆಯಬಹುದು.

ಮೇಳಕ್ಕಾಗಿ ಪ್ರತ್ಯೇಕ ವೆಬ್‌ಸೈಟ್ (www.mangaluruudyogamela.com), ಪ್ರತ್ಯೇಕವಾದ ಇ ಮೇಲ್ ಐಡಿ (mangaluruudyogamela@gmail.com)ತೆರೆಯಲಾಗಿದೆ. ಈಗಾಗಲೇ 1,111 ಉದ್ಯೋಗಾಕಾಂಕ್ಷಿಗಳು ಆನ್‌ಲೈನ್ ನೋಂದಣಿ ಮಾಡಿಸಿಕೊಂಡಿದ್ದು, 10,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೇಳದ ಸಂಯೋಜಕ ವಿವೇಕ್ ಆಳ್ವ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ಶಾಸಕ ಜೆ.ಆರ್. ಲೋಬೊ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ., ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಜಿ.ಪಂ. ಸಿಇಒ ಶ್ರೀವಿದ್ಯಾ, ಯು.ಟಿ. ಇಫ್ತಿಕಾರ್ ಅಲಿ ಉಪಸ್ಥಿತರಿದ್ದರು.

Write A Comment