ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ನಡೆದ ಡಬಲ್ ಮರ್ಡರ್ಗೆ ಸಂಬಂಧಿಸಿದಂತೆ ಜೈಲಿನೊಳಗೆ ಮಾರಾಕಸ್ತ್ರಗಳು ಬರುವಲ್ಲಿ ಜೈಲಿನ ಸಿಬ್ಬಂದಿಗಳ ಪಾತ್ರವಿದೆ ಎಂದು ಘರ್ಷಣೆ ಸಂದರ್ಭ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಕೈದಿ ಫೈಜಲ್ ಆರೋಪಿಸಿದ್ದಾನೆ.
ನ್ಯಾಯಾಲಯಕ್ಕೆ ಕೈದಿಗಳನ್ನು ಕರೆದೊಯ್ಯುತ್ತಿರುವ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಕೈದಿ ಫೈಝಲ್, ನಗರದ ಸಬ್ ಜೈಲಿನಲ್ಲಿ ನಡೆದ ಮಾಡೂರು ಇಸುಬು ಮತ್ತು ಗಣೇಶ್ ಶೆಟ್ಟಿ ಕೊಲೆಗೆ ಉಪಯೋಗಿಸಿದ ಮಾರಾಕಾಸ್ತ್ರಗಳು ಜೈಲಿನ ಸಿಬ್ಬಂದಿಗಳ ಮೂಲಕವೇ ಜೈಲಿನೊಳಗೆ ಬಂದಿದೆ. ಆಯುಧಗಳು ಗೋಡೆಯ ಮೇಲಿಂದ ಬಂದಿಲ್ಲ. ಭಾನುವಾರ ರಾತ್ರಿಯೇ ಬಾಗಿಲ ಮೂಲಕವೇ ಬಂದಿವೆ. ಜೈಲು ಸಿಬ್ಬಂದಿ ರಾಜೇಂದ್ರ, ಪುಟ್ಟಣ್ಣ ಇದಕ್ಕೆ ಸಹಕರಿಸಿದ್ದಾರೆ. ಇನ್ನೊಬ್ಬ ಸಿಬ್ಬಂದಿ ಚಕಲೇಶ್ ಎಂಬುವವ ಪ್ಲಾಸ್ಟಿಕ್ ಚೀಲವೊಂದರಲ್ಲಿ ಆಯುಧಗಳನ್ನು ತಂದಿದ್ದ ಎಂದಿದ್ದಾನೆ ದೂರಿದ್ದಾನೆ.
ಜೈಲಿನಲ್ಲಿ ನಡೆದ ಕೊಲೆ ಪ್ರತಿಕಾರದಿಂದ ನಡೆದಿಲ್ಲ. ಬದಲಾಗಿ ಜೈಲು ಸಿಬ್ಬಂದಿಗಳು ರೂಪಿಸಿದ ತಂತ್ರದಿಂದಾಗಿ ಈ ಕೊಲೆ ನಡೆದಿದೆ. ಘಟನೆಗೆ ಮುನ್ನದಿನ ರಾತ್ರಿ 11:30ರ ಸುಮಾರಿಗೆ ಜೈಲು ಸಿಬ್ಬಂದಿ ಚಕ್ರೇಶ್ ಎಂಬವರು ನೀಲಿ ಪ್ಯಾಕೆಟ್ ನಲ್ಲಿ ಮಾರಕಾಸ್ತ್ರಗಳನ್ನು ತಂದು ಆರೋಪಿಗಳಿಗೆ ನೀಡಿದ್ದರು ಎಂದು ಫೈಝಲ್ ಆರೋಪಿಸಿದ್ದಾನೆ.
ಸಾಮಾನ್ಯವಾಗಿ ಗಲಾಭೆಯಲ್ಲಿ ಪಾಲ್ಗೊಂಡ ಆರೋಪಿಗಳ ಕೋಣೆಯ ಬಾಗಿಲನ್ನು ಎಲ್ಲಾ ಕೈದಿಗಳನ್ನು ಹೊರಗೆ ಬಿಟ್ಟ ಬಳಿಕ ಕೊನೆಯಲ್ಲಿ ತೆರೆಯಲಾಗುವುದು. ಆದರೆ ಗಲಾಟೆ ನಡೆದ ದಿನ ಈ ಇಬ್ಬರು ಜೈಲು ಸಿಬ್ಬಂದಿಗಳಾದ ರಾಜೇಂದ್ರ ಮತ್ತು ಪುಟ್ಟಣ್ಣ ಅವರು, ಗಲಾಭೆಯಲ್ಲಿ ಪಾಲ್ಗೊಂಡ ಆರೋಪಿಗಳ ಕೋಣೆಯ ಬಾಗಿಲನ್ನು ಮೊದಲೇ ತೆಗೆದು ಆರೋಪಿಗಳಿಗೆ ಪರೋಕ್ಷವಾಗಿ ಸಹಕರಿಸಿದ್ದಾರೆ ಎಂದು ಫೈಝಲ್ ತಿಳಿಸಿರುವುದಾಗಿ ವರದಿಯಾಗಿದೆ.
ಪ್ರಕರಣ ತಿರುಚಲು ಪ್ರಯತ್ನ : ಆರೋಪ
ಘಟನೆ ಕುರಿತು ಎಡಿಜಿಪಿ ಕಮಲ್ಪಂತ್ ಅವರಿಗೆ ಮಾಹಿತಿ ನೀಡಿದರೂ ಅವರು ಪರಿಗಣಿಸಿಲ್ಲ. ಆಯುಧವನ್ನು ಗೋಡೆಯ ಮೇಲೆ ಎಸೆದಿರುವುದಾಗಿ ಪ್ರಕರಣವನ್ನು ತಿರುಚಲು ಪ್ರಯತ್ನಿಸಲಾಗುತ್ತಿದೆ. ಘಟನೆಯ ಸಾಕ್ಷಿಗಳನ್ನು ಬೆದರಿಸಿ ಸಾಕ್ಷಿ ನುಡಿಯದಂತೆ ಮಾಡಲಾಗುತ್ತಿದೆ. ನಮಗೆ ಜೈಲಿನೊಳಗೆ ಭದ್ರತೆ ಇಲ್ಲ ಎಂದು ಫೈಝಲ್ ಆರೋಪಿಸಿದ್ದಾನೆ.