ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆಲ್ಲ ವಾರಕ್ಕೆ ಇಂತಿಷ್ಟು ಹಣ ಕೊಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ, ಯಾರಿಗೆ ಎಷ್ಟು ಕೊಡುತ್ತಾರೆ? ವಾರಕ್ಕೆ ಎಷ್ಟು ಹಣ ಸಿಗುತ್ತದೆಂಬುದು ಮಾತ್ರ ಬಿಗ್ ಬಾಸ್ ಮನೆಯಲ್ಲಿ ಕೇಳಿಬರುವ `ಹೌದು ಸ್ವಾಮಿ’ ಎಂಬ ದನಿ ಯಾರದ್ದೆನ್ನುವುದಷ್ಟೇ ನಿಗೂಢ.
ಆದರೆ, ಬಿಗ್ಬಾಸ್ ಸ್ಪರ್ಧಿಗಳ ಪೈಕಿ ಎಲಿಮಿನೇಟ್ ಆದ ನಟಿ ಮಾಧುರಿ ಇಟಗಿ ಅವರಿಗೆ ಸಿಕ್ಕ ಸಂಭಾವನೆಯಿಂದ ಈಗ ಬಿಗ್ಬಾಸ್ ಎನ್ನು-ವುದು ಪೇಮೆಂಟ್ ಮನೆ ಎನ್ನುವಂತಾಗಿದೆ. ಸದ್ಯ ಮಾಧುರಿ ಬಿಗ್ಬಾಸ್ ಮನೆಯಿಂದ ಒಂದೇ ವಾರಕ್ಕೆ ಹೊರಬಂದರೂ ಆಕೆಯ ಕೈಗೆ ರೂ. 13 ಲಕ್ಷ ನೀಡಲಾಗಿದೆಯಂತೆ. ಹಾಗಾದ್ರೆ ಉಳಿದ ಸ್ಪರ್ಧಿಗಳಿಗೂ ಅಷ್ಟೊಂದು ಹಣ ನೀಡಲಾಗುತ್ತಿದೆಯೇ?
ಎಂಟ್ಹತ್ತು ದಿನಗಳಿಂದ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ಅಸಲಿ ಆಟವೂ ಶುರುವಾಗಿದೆ. ವೀಕ್ಷಕರ ಪಾಲಿಗೆ ಹುಚ್ಚ ವೆಂಕಟ್ ಕೇಂದ್ರಬಿಂದು. ಬಿಗ್ಬಾಸ್ಗೂ ಆತನೇ ಟಿಆರ್ಪಿ ವ್ಯಕ್ತಿ. ಸ್ವರ್ಧಿಗಳ ಸಂಭಾವನೆಯದ್ದೇ ಈಗ ಚರ್ಚೆ. ಕೇವಲ ವಿವಾದಿತರು, ಸೆಲೆಬ್ರಿಟಿಗಳನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಟಿಆರ್ಪಿಯೇ ಇಲ್ಲಿ ಕಾರಣ. ಹೀಗಾಗಿ ಮೊದಲಿನಿಂದಲೂ ಸೆಲೆಬ್ರಿಟಿ ಸ್ಪರ್ಧಿಗಳಿಗೆ ದುಡ್ಡಿನ ಆಮಿಷ ನೀಡುತ್ತಲೇ ಬರಲಾಗಿದೆ.
ಈ ಸಲವೂ ಅದು ಮುಂದುವರಿದಿದೆ. ಆದರೆ, ಯಾರ್ಯಾರಿಗೆ ಎಷ್ಟೆಷ್ಟು ಎನ್ನುವುದು ಗೌಪ್ಯ. ಅದನ್ನು ಹಿಂದಿನವರೂ ಬಹಿರಂಗ ಮಾಡಿರಲಿಲ್ಲ. ಈಗ ಹೋಗಿ ಬರುತ್ತಿರುವವರೂ ಬಾಯಿ ಬಿಡುತ್ತಿಲ್ಲ. ಆದರೂ, ಅತ್ಯಧಿಕ ಮೊತ್ತದ ಸಂಭಾವನೆಯಂತೂ ನೀಡುತ್ತಿದ್ದಾರಂತೆ. ಈಗಿರುವ ಮಾಹಿತಿ ಪ್ರಕಾರ ನಟಿಯರಾದ ಪೂಜಾ ಗಾಂಧಿ, ಶ್ರುತಿ ಅವರಿಗೆ ಪ್ರತಿ ವಾರಕ್ಕೆ ರೂ. 10 ಲಕ್ಷ ಸಂಭಾವನೆಯಂತೆ. ಅಲ್ಲಿರುವ ಅಷ್ಟೂ ಸ್ಪರ್ಧಿಗಳ ಪೈಕಿ ಹೆಚ್ಚು ವರ್ಚಸ್ಸಿನ ವ್ಯಕ್ತಿಗಳಂದ್ರೆ ಇವರೇ. ಹೀಗಾಗಿ ಎಂಟ್ರಿಗೂ ಮುನ್ನವೇ ಇಂಥ ಒಪ್ಪಂದಗಳು ಸ್ಪರ್ಧಿಗಳು ಮತ್ತು ವಾಹಿನಿ ನಡುವೆ ನಡೆದಿದೆಯಂತೆ.
ಇನ್ನು ಹುಚ್ಚ ವೆಂಕಟ್ಗೆ ಎಷ್ಟು ಸಂಭಾವನೆ? ಎಂದರೆ ಅಲ್ಲಿ ಮತ್ತೊಂದು ಕಥೆ ಬಿಚ್ಚಿಕೊಳ್ಳುತ್ತದೆ. ಹುಚ್ಚ ವೆಂಕಟ್ನ ಮುಂದಿನ ಚಿತ್ರವನ್ನು ವಾಹಿನಿ ಖರೀದಿ ಮಾಡುವ ಒಪ್ಪಂದ ಮಾಡಿಕೊಂಡಿದೆಯಂತೆ. ಹುಚ್ಚ ವೆಂಕಟ್ ಬಿಗ್ಬಾಸ್ ಮನೆಯಿಂದ ಹೊರಬಂದ ಕೂಡಲೇ ಅವರ ಚಿತ್ರಕ್ಕೆ ವಾಹಿನಿಯಿಂದ ಸ್ಯಾಟ್ ಲೈ ಟ್ ರೈಟ್ಸ್ ಹಣದ ಜೊತೆಗೆ ಮೊದಲೇ ಫಿಕ್ಸ್ ಮಾಡಿರುವ ರೂ. 5 ಲಕ್ಷ ಹಣ ನೀಡಲಾಗುತ್ತದೆ. ರೆಹಮಾನ್ ಅವರ ಲೆಕ್ಕಚಾರವೇ ಬೇರೆ ಇದೆ. ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೆ ವಾಹಿನಿಯಲ್ಲಿ ಬೇರೆ ಕಾರ್ಯಕ್ರಮಗಳನ್ನು ನಡೆಸಿಕೊಡುವ ಉಸ್ತುವಾರಿಯನ್ನೂ ವಹಿಸಿಕೊಳ್ಳಲಿದ್ದಾರಂತೆ. ಈ ಕೆಲಸಕ್ಕೆ ಕಲರ್ಸ್ ಕನ್ನಡ ವರ್ಷಕ್ಕೆ ರೂ, 18 ಲಕ್ಷ ಆಫರ್ ನೀಡುತ್ತದಂತೆ.
ಸುನಾಮಿ ಕಿಟ್ಟಿ, ಆರ್ಜೆ ನೇತ್ರಾ, ನೇಹಾ, ಮಾಡೆಲ್ ಜಯಶ್ರೀ, ಚಂದನ್ ಅವರ ವಿಚಾರದಲ್ಲಿ ಹೆಚ್ಚು ಚೌಕಾಸಿ ನಡೆದಿಲ್ಲ. ವಾಹಿನಿ ಗೌರವಯುತವಾಗಿ ಇವರಿಗೆಲ್ಲ ಶೋ ಅಂತ್ಯದವರೆಗೆ ತಲಾ 15 ಲಕ್ಷ ಫಿಕ್ಸ್ ಮಾಡಿದೆಯಂತೆ.ಗೆದ್ದವರಿಗೆ ನೀಡುವ ಬಹುಮಾನದ ಮೊತ್ತ ಪ್ರತ್ಯೇಕ.
ಹೌದು ಸ್ವಾಮಿ, ಲಾಸ್ ಆಯ್ತು!
ಬಿಗ್ಬಾಸ್ ಮೊದಲ ಸೀಸನ್ಗೆ ಈ ಟಿವಿ ಸುಮಾರು 20 ಕೋಟಿ ಖರ್ಚು ಮಾಡಿತ್ತು. ಈ ಸೀಸನ್ಗೆ ಭಾರಿ ಪ್ರಚಾರವೂ ಸಿಕ್ಕಿತ್ತು. ಈ ಟಿವಿ ವೀಕ್ಷಕರ ಸಂಖ್ಯೆ ದುಪ್ಪಟ್ಟಾಗಿತ್ತು. ಆದರೆ, ಆದಾಯ ಗಳಿಕೆಯಲ್ಲಿ ಈ ಟಿವಿಗೆ ನಷ್ಟವೇ ಆಗಿತ್ತು. ಹಾಕಿದ ಬಂಡವಾಳ ಕೈ ಸೇರಿರಲಿಲ್ಲ. ಆದಾದ ನಂತರ ಸುವರ್ಣ ವಾಹಿನಿ ಬಿಗ್ಬಾಸ್ ಸೀಸನ್ 2 ಪ್ರಸಾರ ಹಕ್ಕು ಪಡೆದಿತ್ತು. ಹೆಚ್ಚು ಕಡಿಮೆ ಸೀಸನ್ 2 ಟು ಕಥೆ ಕೂಡ ಅಷ್ಟೇ ಆಗಿತ್ತು. ಈಗ ಸೀಸನ್ 3 ಮತ್ತೆ ಈಟಿವಿಯ ಪರಿವರ್ತಿತ ವಾಹಿನಿ ಕಲರ್ಸ್ ಕನ್ನಡದಿಂದ ಮೂಡಿಬರುತ್ತಿದೆ. ಸೀಸನ್ 1 ಮತ್ತು 2 ಪ್ರಸಾರದ ಹಕ್ಕಿಗೆ ನೀಡಿದಷ್ಟು ಹಣವನ್ನೇ ಈಗ ಕಲರ್ಸ್ ಕನ್ನಡ ನೀಡಿದೆ.
ನಾನು ಬೇಗನೆ ಹೊರಗೆ ಬರುತ್ತೇನೆಂದು ಮೂರೇ ದಿನಗಳಲ್ಲಿ ಸುಳಿವು ಸಿಕ್ಕಿತ್ತು. ಆದರೆ ಇಷ್ಟು ಬೇಗ ಎಲಿಮಿನೇಟ್ ಆಗಬಹುದೆಂಬ ನಿರೀಕ್ಷೆ ಇರಲಿಲ್ಲ. ನಾವು ನಮ್ಮ ಪೇಮೆಂಟ್ ಎಷ್ಟು ಎಂದು ಹೊರಗಡೆ ಹೇಳುವುದಕ್ಕೆ ಸಾಧ್ಯವಿಲ್ಲ. ಚಾನೆಲ್ ಮತ್ತು ನಮ್ಮ ನಡುವಿನ ಒಪ್ಪಂದದ ಪ್ರಕಾರ ನಾವು ಈ ಬಗ್ಗೆ ಮಾತನಾಡುವಂತಿಲ್ಲ. ಮನೆ ಪ್ರವೇಶಿಸುವ ಮುನ್ನವೇ ಹೀಗೆ ಒಪ್ಪಂದ ಆಗಿರುತ್ತದೆ. ಚಾನೆಲ್ನವರು ತೃಪ್ತಿದಾಯಕ ಸಂಭಾವನೆಯನ್ನೇ ಕೊಟ್ಟಿರುತ್ತಾರೆ. ಬೇಕಾದರೆ, ಈ ಹಿಂದೆ ಬಿಗ್ ಬಾಸ್ನಿಂದ ಯಾರನ್ನೇ ಕೇಳಿ… ಅವರೂ ಸರಿಯಾಗಿ ಹೇಳುವುದಿಲ್ಲ. ಸಂಭಾವನೆ ವಿಚಾರ ನಮ್ಮೊಳಗೇ ಇರಬೇಕು. ಕೇವಲ ಸಂಭಾವನೆ ಮಾತ್ರ ಅಲ್ಲ, ಮನೆಯೊಳಗೆ ನಡೆಯುವ ಕೆಲವು ಸಂಗತಿಗಳನ್ನೂ ನಾವು ಬಹಿರಂಗ ಪಡಿಸುವಂತಿಲ್ಲ.-ಮಾಧುರಿ ಇಟಗಿ ಬಿಗ್ಬಾಸ್ನಿಂದ ಎಲಿಮಿನೇಟ್ ಆದ ಸ್ಪರ್ಧಿ