ಕನ್ನಡ ವಾರ್ತೆಗಳು

ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳಿಗೆ ರಾಜ್ಯ ಸರ್ಕಾರದ ನಿರ್ಲಕ್ಷವೇ ಕಾರಣ : ಕ್ಯಾ ಗಣೇಶ್ ಕಾರ್ನಿಕ್ ಆರೋಪ

Pinterest LinkedIn Tumblr

ganesh-karnik-pic

ಮಂಗಳೂರು,ನ.04 : ಕರಾವಳಿ ಕರ್ನಾಟಕದ ಈ ಭಾಗ ಭೂಗತ ಚಟುವಟಿಕೆಗಳಿಗೆ ನೆಲೆಯಾಗುತ್ತಿರುವ ಎಲ್ಲಾ ಮಾಹಿತಿಗಳು ಲಭ್ಯವಿದ್ದರೂ, ಈ ಕುರಿತಾಗಿ ಪತ್ರಿಕಾ ಮಾಧ್ಯಮಗಳು ದಾಖಲೆ ಸಹಿತ ಲೇಖನಗಳನ್ನು ಪ್ರಕಟಿಸಿದ್ದರೂ, ಜನಪ್ರತಿನಿಧಿಯಾಗಿ ನಾನು ನಗರ ಕೇಂದ್ರ ಭಾಗದಲ್ಲಿರುವ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ಭೂಗತ ಪಾತಕಿಗಳ ಪ್ರಭಾವದ ಕುರಿತಾಗಿ ಸಂಬಂಧಿಸಿದ ಅಧಿಕಾರಿಗಳಿಗೆ, ಗೃಹ ಮಂತ್ರಿಗಳಿಗೆ ಹಾಗೂ ಮುಖ್ಯ ಮಂತ್ರಿಯ ವರಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಸರ್ಕಾರದ ದಿವ್ಯ ನಿರ್ಲಕ್ಷ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ನಿಕ್ ಆರೋಪಿಸಿದ್ದಾರೆ.

ನಗರದ ಕೇಂದ್ರ ಕಾರಾಗೃಹದಲ್ಲಿ ನಡೆದ ಜೋಡಿ ಕೊಲೆ ಹಾಗೂ ಗುಂಪು ಘರ್ಷಣೆ ಸರ್ಕಾರದ ಮತ್ತು ಗೃಹ ಇಲಾಖೆಯ ಘೋರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪೆರ್ಮುದೆ, ಹಂಡೇಲು, ಮೂಡಬಿದ್ರೆ, ಮೂಡುಶೆಡ್ಡೆ, ತೊಕ್ಕೊಟ್ಟು ಮುಂತಾದ ಕಡೆಗಳಲ್ಲಿ ನಡೆದಿರುವ ಕೊಲೆ ಹಾಗೂ ಮಾರಣಾಂತಿಕ ಹಲ್ಲೆಗಳು ಕಳೆದ ಒಂದು ತಿಂಗಳಿನಲ್ಲಿ ಕರಾವಳಿಯ ಜನತೆಯನ್ನು ದಿಗ್ಭ್ರಮೆಗೊಳಿಸಿವೆ. ಈ ಮಾರಕ ಘಟನೆಗಳನ್ನು ಅವಲೋಕನ ಮಾಡಿದಾಗ ಕ್ಷುಲ್ಲಕ ಸಂಗತಿಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಇಲಾಖೆ ಈ ಘೋರ ಕೃತ್ಯದ ಹಿಂದಿರುವ ಅಪರಾಧಿಗಳ ಅಧೀನ ಕಾರ್ಯನಿರ್ವಹಿಸುತ್ತಿದೆಯೋ ಎಂಬ ಸಂಶಯ ಉಂಟಾಗುತ್ತಿದೆ. ಇಲ್ಲದಿದ್ದಲ್ಲಿ, ಜೈಲುವಾಸಿಗಳಾಗಿರುವ ಅಪರಾಧಿಗಳಿಗೆ ಮೊಬೈಲು, ಮಾದಕದ್ರವ್ಯ, ಹಾಗೂ ಶಸ್ತ್ರಗಳ ಪೂರೈಕೆ ಎಲ್ಲಿಂದ ಸಾಧ್ಯ? ಜೈಲಿನಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆದಾಗಲೂ ಪೊಲೀಸ್ ಇಲಾಖೆ ಎಚ್ಚತ್ತುಕೊಳ್ಳದಿರುವುದು ಘೋರ ದುರಂತ.

ಶಾಲಾ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಅಸಭ್ಯ ಚಿತ್ರೀಕರಣದಲ್ಲಿ ಮೀಸಲಾಗಿರುವ ಘಟನೆ ಹಾಗೂ ಮುಂದುವರೆದ ಭಾಗವಾಗಿ ಅಧಿಕಾರಿಯ ರಾಜೀನಾಮೆ ಪ್ರಹಸನ, ಎಸೈ ಮಲ್ಲಿಕಾರ್ಜುನ ಬಂಡೆ ಹತ್ಯೆ ಪ್ರಕರಣ, ಎಸೈ ಜಗದೀಶ್ ಹತ್ಯೆ ಹಾಗೂ ಕರಾವಳಿ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ ಘಟನೆಗಳು ರಾಜ್ಯದಲ್ಲಿ ಪೊಲೀಸ್ ಇಲಾಖೆಯು ಸಂಪೂರ್ಣ ನಿಷ್ಕ್ರೀಯವಾಗಿರುವುದನ್ನು ಹಾಗೂ ಗೃಹಮಂತ್ರಿಗಳ ಅದಕ್ಷತೆಯನ್ನು ಎತ್ತಿ ತೋರಿಸುತ್ತದೆ. ಇಷ್ಟೆಲ್ಲಾ ಗಂಭೀರ ಅಪರಾಧಗಳು ನಡೆಯುತ್ತಿದ್ದರೂ ನನ್ನ ಅವಧಿಯಲ್ಲಿ ಕನಿಷ್ಠ ಲಾಟಿಚಾರ್ಚ್ ನಡೆದಿಲ್ಲ ಎನ್ನುವ ನಿಕಟಪೂರ್ವ ಗೃಹ ಸಚಿವರ ಹೇಳಿಕೆ ಹಾಸ್ಯಸ್ಪದ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ.

ಕಾರಾವಳಿಯ ಈ ಭಾಗದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸಾಗಾಟ, ಖೋಟಾ ನೋಟು ಚಲಾವಣೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಪಬ್‌ನಲ್ಲಿಶೂಟೌಟ್ ಪ್ರಕರಣ, ಹೊರದೇಶಗಳಿಂದ ಬರುತ್ತಿರುವ ಬೆದರಿಕೆ ಕರೆಗಳು, ಕರಾವಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮರಳು ಮಾಫಿಯಾ, ಅವ್ಯಾಹತವಾಗಿ ನಡೆಯುತ್ತಿರುವ ಗೋವುಗಳ ಕಳ್ಳಸಾಗಾಣಿಕೆ, ಅಕ್ರಮ ಕಸಾಯಿಕಾನೆ, ಪ್ರತಿಷ್ಟಿತ ಕಾಲೇಜಿಗಳ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯದ ಬಳಕೆ, ಹೆಣ್ಮಕ್ಕಳ ಕಣ್ಮರೆ ಮುಂತಾದ ಅಕ್ರಮ, ಅನೈತಿಕ ಹಾಗೂ ಸಮಾಜ ಘಾತುಕ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು, ಈ ಕೂಡಲೆ ಇಲಾಖೆ ಎಚ್ಚೆತ್ತುಕೊಂಡು ಯಾವುದೇ ಒತ್ತಡಗಳಿಗೂ ಮಣಿಯದೆ ನಿಷ್ಪಕ್ಷವಾದ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತೇನೆ.

ಕಾರಾಗೃಹದಲ್ಲಿ ನಡೆದ ಜೋಡಿ ಹತ್ಯೆ ಘಟನೆಯ ಕುರಿತು ವರದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳು ಹಾಗೂ ಪತ್ರಕರ್ತರ ಮೇಲೆ ನಡೆಸಿದ ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತಾ, ಹಲ್ಲೆನಡೆಸಿದ ಮಾಡೂರು ಇಸೂಬ್ ಸಹಚರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ.

ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಮೂವರು ಮಂತ್ರಿಗಳು ಹಾಗೂ ಆಡಳಿತ ಪಕ್ಷದ ಶಾಸಕರು ನಿರಂತರವಾಗಿ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎನ್ನುವ ರೀತಿಯಲ್ಲಿ ವರ್ತಿಸಿ ಈ ರೀತಿಯ ಅಪರಾಧಿ ಚಟುವಟಿಕೆಗಳನ್ನು ಪರೋಕ್ಷವಾಗಿ ಪ್ರೊತ್ಸಾಹಿಸಿದ ಪರಿಣಾಮವೇ ಈ ರೀತಿಯ ಘಟನೆಗಳಿಗೆ ಕಾರಣ ಎಂದು ಸಾರ್ವಜನಿಕರು ಮಾತನಾಡುತ್ತಿರುವುದು ವಿಷಾದನೀಯ. ಮಾನ್ಯ ಉಸ್ತುವಾರಿ ಸಚಿವರು ಹಾಗೂ ಆಡಳಿತ ಪಕ್ಷದ ಶಾಸಕರು ಇನ್ನಾದರೂ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸುವಂತೆ ಆಗ್ರಹಿಸುತ್ತೇನೆ ಎಂದು ಕಾರ್ನಿಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Write A Comment