ಮುಂಬೈ: ಮುಂಬೈನ ಪೊಲೀಸ್ ಠಾಣೆಯಲ್ಲಿ ದಂಪತಿಗಳಿಗೆ ಪೊಲೀಸರು ಥಳಿಸಿರುವ ವೀಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಮಹಿಳಾ ಪೊಲೀಸರು ಯುವತಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದು, ಪೊಲೀಸರೆಲ್ಲರೂ ಸೇರಿ ದಂಪತಿಗಳನ್ನು ಥಳಿಸುತ್ತಿರುವುದು ಕಂಡು ಬಂದಿದೆ. ಪೊಲೀಸರ ಹೊಡೆತವನ್ನು ತಾಳಲಾರದ ಯುವತಿ ಬಿಟ್ಟು ಬಿಡಿ ಎಂದು ಕಿರುಚಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ವೀಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು, ಪೊಲೀಸರ ನೈತಕಿ ಗಿರಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ವೀಡಿಯೋ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಂಧೇರಿ ಪೊಲೀಸರು, ನವೆಂಬರ್ 1 ರಂದು ಕಂಠಪೂರ್ತಿ ಮಧ್ಯಪಾನ ಮಾಡಿದ್ದ ದಂಪತಿಗಳಿಬ್ಬರು ಅಂಧೇರಿ ಮೆಟ್ರೋ ಸ್ಟೇಷನ್ ಬಳಿಯಿರುವ ನಡುರಸ್ತೆಯಲ್ಲಿ ಜಗಳವಾಡುತ್ತಿದ್ದರು. ಇಬ್ಬರ ಜಗಳವನ್ನು ಬಿಡಿಸಲು ಪ್ರಯತ್ನ ಮಾಡಿದರೂ, ಮತ್ತೆ ಮತ್ತೆ ಜಗಳವಾಡುತ್ತಿದ್ದರು. ಹೀಗಾಗಿ ಇಬ್ಬರನ್ನು ಠಾಣೆಗೆ ಕರೆದೊಯ್ಯಲಾಗಿತ್ತು. ನಂತರ ಠಾಣೆಯಲ್ಲಿಯೂ ಇಬ್ಬರು ಜಗಳವಾಡಲು ಆರಂಭಿಸಿದ್ದರು. ಇಬ್ಬರನ್ನು ಬಿಡಿಸಲು ಪೊಲೀಸರು ಪ್ರಯತ್ನ ಮಾಡುತ್ತಿದ್ದರು. ಈ ವೇಳೆ ವೀಡಿಯೋವನ್ನು ಚಿತ್ರೀಕರಿಸಿಲಾಗಿದೆ. ದಂಪತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರಲಿಲ್ಲ. ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಯುವತಿ ಸಬುರ್ಬನ್ ನಲಸೋಪರ ಹಾಗೂ ಯುವಕ ದಕ್ಷಿಣ ಮುಂಬೈನ ಬೈಕುಲ್ಲಾದ ನಿವಾಸಿಗಳಾಗಿದ್ದು ಮಲಾಡ್ ನಲ್ಲಿರುವ ಕಾಲ್ ಸೆಂಟರ್ ನಲ್ಲಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದಾರೆಂದು ಹೇಳಿದ್ದಾರೆ.