ಕನ್ನಡ ವಾರ್ತೆಗಳು

ಜಿಲ್ಲೆಯಲ್ಲಿ ನ.5ರಿಂದ ನ.20ರವರೆಗೆ ವಿಷಯಾಧಾರಿತ ಸ್ವಚ್ಛತಾ ಆಂದೋಲನ

Pinterest LinkedIn Tumblr

Dc_Press_Meet_2

ಮ೦ಗಳೂರು ನ,04: ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ದ.ಕ ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ನ.5 ರಿಂದ ನ.20 ರವರೆಗೆ ವಿಷಯಾಧಾರಿತ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಿಳಿಸಿದ್ದಾರೆ. ಅವರು ಇಂದು ತಮ್ಮ ಕಛೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಪುರಸಭೆಗಳ ಮುಖ್ಯಾಧಿಕಾರಿಗಳು, ಶಾಲಾಕಾಲೇಜುಗಳ ಮುಖ್ಯಸ್ಥರಿಗೆ ಈ ಮಾಹಿತಿ ನೀಡಿದರು.

ಶಾಲಾ ಕಾಲೇಜುಗಳಲ್ಲಿ ಬ್ಲಾಕ್ ವಾರು/ಇಲಾಖಾವಾರು ಸ್ವಚ್ಛತಾ ಆಂದೋಲನವನ್ನು ಆಯಾ ಸಂಬಂಧಪಟ್ಟ ಇಲಾಖೆ/ಬ್ಲಾಕ್ ಗಳ ವತಿಯಿಂದ ಹಮ್ಮಿಕೊಳ್ಳು ವುದು. ಹಾಗೂ ಪ್ರಾಂಶುಪಾಲರು 15ದಿನಗಳ ನಂತರ ಪ್ರತಿಯೊಂದು ಬ್ಲಾಕ್/ ಇಲಾಖೆಗಳನ್ನು ಘೋಷಿಸಬೇಕು.ಪ್ರಾದೇಶಿಕವಾಗಿ ಶಾಲಾ/ಕಾಲೇಜುಗಳ ಸ್ವಚ್ಛತಾ ಸ್ವರ್ಧೆಗಳನ್ನು ಏರ್ಪಡಿಸುವುದು ಹಾಗೂ ಅತೀಹೆಚ್ಚು ಸ್ವಚ್ಛತೆಯನ್ನು ಸಾಧಿಸುವ ಶಾಲೆ/ಕಾಲೇಜುಗಳನ್ನು ಘೋಷಿಸುವುದು.

ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳನ್ನು ಮತ್ತು ಆವರಣವನ್ನು ಸ್ವಚ್ಛವಾಗಿ ಇಡುವ ಬಗ್ಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಅತ್ಯುತ್ತಮ ಪದ್ಧತಿಗಳ ಬಗ್ಗೆ, ಘನತ್ಯಾಜ್ಯ ವಸ್ತು ನಿರ್ವಹಣೆ ಬಗ್ಗೆ, ಕಾಗದಗಳ ಪುನರ್ ಬಳಕೆ ಬಗ್ಗೆ ಹಾಗೂ ನಡವಳಿಕೆಗಳಲ್ಲಿ ಬದಲಾವಣೆ ತರುವ ಬಗ್ಗೆ ಸೂಕ್ತ ತರಬೇತಿಗಳನ್ನು ನೀಡಬೇಕು.

ಸ್ವಚ್ಛವಾದ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ವಾಟರ್ ಪ್ಯೂರಿಫೈಯರ್ ಗಳನ್ನು ಅಳವಡಿಸಬೇಕು. ಸುರಕ್ಷಿತ ಆಹಾರ ಲಭ್ಯತೆಗಾಗಿ ಕ್ಯಾಂಟೀನ್ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕು ಹಾಗೂ ಆಹಾರ ತ್ಯಾಜ್ಯ ಪದಾರ್ಥಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು.

ನಿಗದಿತ ಪ್ರದೇಶಗಳಲ್ಲಿ ಇರುವ ಪ್ರತಿಯೊಂದು ಶಾಲಾ ಕಾಲೇಜುಗಳು, ತಮ್ಮ ಆವರಣಗಳಿಂದ ಹೊರಗಿರುವ ಪ್ರದೇಶಗಳನ್ನು ಒಡಗೂಡಿ ಸ್ವಚ್ಛಗೊಳಿಸಲು ಸೂಕ್ತ ದಿನಾಂಕಗಳನ್ನು ನಿಗದಿಪಡಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಸಾಮಾನ್ಯ ಉದ್ಧೇಶಕ್ಕಾಗಿ ಸೇವೆಯನ್ನು ಸಲ್ಲಿಸುವ ಅವಕಾಶ ಲಭಿಸುತ್ತದೆ.

ಸದರಿ ಕಾರ್ಯಕ್ರಮವನ್ನು ಶಾಲಾ ಕಾಲೇಜುಗಳು, ಸಾರ್ವಜನಿಕ ಗ್ರಂಥಾಲಯಗಳು ಹಾಗೂ ಅಂಗನವಾಡಿಗಳು ಯಶಸ್ವಿಯಾಗಿ ಪೂರ್ಣಗೊಳಿಸಿ, ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಪ್ರೆಸ್ ಕ್ಲಿಪ್ಪಿಂಗ್ಸ್, ವೀಡಿಯೋ ತುಣುಕುಗಳು ಮುಂತಾದವುಗಳನ್ನು ಕೇಂದ್ರ ಸ್ವಚ್ಛಭಾರತ್ ಮಿಷನ್ ನ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲು ಕ್ರಮ ಕೈಗೊಳ್ಳಬೇಕು.

ಈ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನಗರ/ ಪಟ್ಟಣಗಳ ಮಟ್ಟದಲ್ಲಿ ಸಂಬಧಪಟ್ಟ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾಮಟ್ಟದ ಯೋಜನಾ ನಿರ್ದೇಶಕರು ಅಗತ್ಯ ಸಹಕಾರ ನೀಡಬೇಕಾಗಿರುತ್ತದೆ. ಎಂದು ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ ಹಾಗೂ ತೇಜೋಮೂರ್ತಿ ಅವರು ಸಭೆಯಲ್ಲಿ ಮಾಹಿತಿ ನೀಡಿದರು.

Write A Comment