ರಾಯಚೂರು,ನ.19: ಜಿಲ್ಲೆಗೆ ಐಐಟಿ ಸ್ಥಾಪನೆಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದ್ದು, ಕಳೆದ ನಾಲ್ಕು ದಿನಗಳಿಂದ ಅಮರಣಾಂತ ಉಪವಾಸ ಕೈಗೊಂಡಿರುವ ಐವರಲ್ಲಿ ಅಮರೇಶ್ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ ಅಂಬೇಡ್ಕರ್ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸುವ ಸಮಯದಲ್ಲಿ ಪೆಟ್ರೋಲ್ ಸಿಡಿದು ಮೈಗೆ ಬೆಂಕಿ ಸೋಂಕಿದ ಪರಿಣಾಮ ಸಂತೋಷ್ ಎಂಬುವರ ಮುಖಕ್ಕೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದ್ದು ವಿಶೇಷ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇಂದು ಕರೆ ನೀಡಿದ್ದ ರಾಯಚೂರು ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ರಸ್ತೆಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಗಲಭೆಗಳನ್ನು ಹೊರತುಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿತ್ತು.
ಐಐಟಿಗಾಗಿ ರಾಯಚೂರು ಜನತೆ 70 ದಿನಗಳಿಂದ ಸತತ ಹೋರಾಟ ನಡೆಸುತ್ತಾ ಬಂದಿದ್ದರೂ, ಇದುವರೆಗೆ ಸರ್ಕಾರ ಸ್ಪಂದಿಸದಿರುವುದರಿಂದ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೋರಾಟ ಸಮಿತಿ ತಿಳಿಸಿದೆ. ಬೆಳಗ್ಗೆ 6 ಗಂಟೆಯಿಂದಲೇ ವ್ಯಾಪಾರಸ್ಥರು ಸ್ವಯಂಪ್ರೇರಣೆಯಿಂದ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು. ರಸ್ತೆ ಸಂಚಾರ ಬಂದ್ ಆಗಿದ್ದರಿಂದ ದೂರದೂರುಗಳಿಗೆ ಹೋಗುವ ಪ್ರಯಾಣಿಕರು ಪರದಾಡಿದರು. ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.