ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 69ನೇ ಹುಟ್ಟುಹಬ್ಬದ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಶುಭ ಹಾರೈಸಿದ್ದಾರೆ.
ಈ ಕುರಿತಂತೆ ಟ್ವಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಮೋದಿ ಅವರು, ಸೋನಿಯಾ ಗಾಂಧಿವರಿಗೆ ಹುಟ್ಟುಹಬ್ಬ ಶುಭಶಯ ಎಂದು ಹೇಳಿದ್ದಾರೆ. ಸೋನಿಯಾ ಉತ್ತಮ ಆರೋಗ್ಯದೊಂದಿಗೆ ಸುಧೀರ್ಘವಾಗಿ ಜೀವನ ಸಾಗಿಸಲಿ ಎಂದು ಹಾರೈಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅವ್ಯವಹಾರ ಪ್ರಕರಣದಲ್ಲಿ ಈಗಾಗಲೇ ಸಂಕಷ್ಟದಲ್ಲಿರುವ ಸೋನಿಯಾಗಾಂಧಿ ಅವರು ನಿನ್ನೆಯಷ್ಟೇ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದರು. ಪ್ರಕರಣದ ತೀರ್ಪು ನೀಡುವ ವಿಚಾರ ನ್ಯಾಯಧೀಶರಿಗೆ ಸಂಬಂಧಪಟ್ಟಿದ್ದು, ಹೀಗಾಗಿ ನಾನೇಕೆ ಇಂತಹ ವಿಚಾರಕ್ಕೆ ಹೆದರಬೇಕು. ನನ್ನ ವಿರುದ್ಧ ಬಿಜೆಪಿ ರಾಜಕೀಯ ಪಿತೂರಿ ರೂಪಿಸುತ್ತಿದೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ. ನಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸೊಸೆ ಎಂದು ಹೇಳಿದ್ದರು. ನಿನ್ನೆ ಸಂಸತ್ತಿನಲ್ಲಿ ನಡೆದ ಕಲಾಪದಲ್ಲಿ ಈ ವಿಚಾರ ಗದ್ದಲ ಎಬ್ಬಿಸಿತ್ತು. ಅಲ್ಲದೆ, ಕಲಾಪ ನಡೆದಿರಲಿಲ್ಲ.
ಸದ್ಯ ಪ್ರಕಟಣೆ ನಿಲ್ಲಿಸಿರುವ ನ್ಯಾಷನಲ್ ಹೆರಾಲ್ಡ್ ಕಂಪನಿಗೆ ದೇಶದ ವಿವಿಧೆಡೆ 2000 ಕೋಟಿ ರೂ. ಬೆಲೆಬಾಳುವ ಭೂಮಿ ಇದೆ. ಇದನ್ನು ಕಬಳಿಸಲು ಸೋನಿಯಾ, ರಾಹುಲ್ ಅವ್ಯವಹಾರ ನಡೆಸಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಸೋನಿಯಾ ಹಾಗೂ ರಾಹುಲ್ಗೆ 2014ರಲ್ಲಿ ದೆಹಲಿ ವಿಚಾರಣಾಧೀನ ಕೋರ್ಟ್ ಸಮನ್ಸ್ ಕೂಡ ಜಾರಿ ಮಾಡಿತ್ತು.