Lifestyle

ಮುಖದ ಚರ್ಮದ ಆರೈಕೆಗೆ ಕಡಲೆ ಹಿಟ್ಟಿನ ಚಮತ್ಕಾರ

Pinterest LinkedIn Tumblr

Gram_flour_skin

ಸೌಂದರ್ಯದ ವಿಷಯ ಬಂದಾಗ ಕಡಲೆ ಹಿಟ್ಟು ಹಲವು ವಿಧದಲ್ಲಿ ತ್ವಚೆಗೆ ಉಪಯೋಗಕಾರಿಯಾಗಿದೆ. ತಮ್ಮ ತ್ವಚೆಯ ಬಗ್ಗೆ ಕಾಳಜಿ ಹೊಂದಿರುವವರು ಸೋಪು, ರಾಸಾಯನಿಕ ಮುಖಲೇಪನ, ರಾಸಾಯನಿಕ ಆಧಾರಿತ ಪ್ರಸಾಧನಗಳ ಬದಲು ಸುರಕ್ಷಿತವಾದ ಮನೆಮದ್ದುಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ. ಇದರಲ್ಲಿ ಕಡಲೆ ಹಿಟ್ಟು ಪ್ರಮುಖವಾಗಿದೆ.

ರಾಸಾಯನಿಕಗಳ ಪ್ರಭಾವದಿಂದ ಮುಖ ಸ್ವಚ್ಛವಾದಂತೆ ಅನ್ನಿಸಿದರೂ ಇದು ಪರಿಪೂರ್ಣ ಸುರಕ್ಷಿತ ಎನ್ನುವಂತಿಲ್ಲ. ಏಕೆಂದರೆ ಚರ್ಮಕ್ಕೆ ಅತಿ ಚಿಕ್ಕ ಪ್ರಮಾಣದಲ್ಲಿ ಯಾದರೂ ಒಂದಾದರೂ ಅಡ್ಡ ಪರಿಣಾಮ ಇದ್ದೇ ಇರುತ್ತದೆ. ಇದರ ಬದಲಿಗೆ ಸಂಪೂರ್ಣವಾಗಿ ಸುರಕ್ಷಿತವಾದ, ಸುಲಭವಾಗಿ ಲಭ್ಯವಿರುವ ಕಡಲೆ ಹಿಟ್ಟನ್ನು ಮುಖದ ಚರ್ಮದ ಆರೈಕೆಗೆ ಬಳಸಿದರೆ ರಾಸಾಯನಿಕಗಳಿಗಿಂತ ಉತ್ತಮ ಪರಿಣಾಮವನ್ನೂ ಪಡೆಯಬಹುದು ಹಾಗೂ ರಾಸಾಯನಿಕಗಳಿಂದ ಉಂಟಾಗ ಬಹುದಾಗಿದ್ದ ಅಲರ್ಜಿ, ತುರಿಕೆ, ಉರಿಗಳಿಂದ ತಪ್ಪಿಸಿಕೊಳ್ಳಲೂಬಹುದು. ಅದರಲ್ಲೂ ಮುಖ ತೊಳೆಯಲು ಕಡಲೆ ಹಿಟ್ಟು ಬಳಸುವುದರ ಮೂಲಕ ಮುಖದ ಚರ್ಮಕ್ಕೆ ಯಾವುದೇ ರೀತಿಯ ಹಾನಿಯನ್ನುಂಟುಮಾಡದೇ ಚರ್ಮದ ಕಾಂತಿಯನ್ನು ಸ್ವಾಭಾವಿಕ ರೂಪದಲ್ಲಿ ಉಳಿಸಿಕೊಳ್ಳಬಹುದು.

ಬಿಸಿಲಿಗೆ ಒಡ್ಡಿದ್ದ ಚರ್ಮದ ಭಾಗ ಕೊಂಚ ದಟ್ಟನಾಗಿರುವುದನ್ನು ಗಮನಿಸಬಹುದು. ಕಡಲೆ ಹಿಟ್ಟನ್ನು ಬಳಸಿ ಮುಖ ಮತ್ತು ಸೂರ್ಯನಿಗೆ ಒಡ್ಡಿದ್ದ ಚರ್ಮದ ಭಾಗಗಳನ್ನು ತೊಳೆದುಕೊಳ್ಳುವ ಮೂಲಕ ಈ ಬಣ್ಣವನ್ನು ಸುಲಭವಾಗಿ ಮತ್ತು ಯಶಸ್ವಿಯಾಗಿ ನಿವಾರಿಸಬಹುದು. ಚರ್ಮದ ಸತ್ತ ಜೀವಕೋಶಗಳು ಪುಡಿಯ ರೂಪದಲ್ಲಿದ್ದು ಬೆವರು ಮತ್ತು ಇತರ ಕಾರಣಗಳಿಂದ ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಇದು ನೀರಿನಿಂದ ಹೋಗುವುದಿಲ್ಲ. ಇದಕ್ಕೆ ಕಡಲೆ ಹಿಟ್ಟಿನ ಆರೈಕೆ ಬಿದ್ದ ಕೂಡಲೇ ಸಡಿಲವಾಗಿ ಚರ್ಮದಿಂದ ಕಳಚಿಕೊಂಡು ಬರುತ್ತದೆ.

ಕಡ್ಲೆಹಿಟ್ಟಿನಲ್ಲಿ ಚರ್ಮವನ್ನು ಬಿಳಿಚಿಸುವ ಗುಣವೂ ಇದೆ. ಈ ಗುಣ ಬಿಸಿಲಿಗೆ ಮತ್ತು ಇತರ ಕಾರಣಗಳಿಗೆ ಕಳೆದುಕೊಂಡಿದ್ದ ಸಹಜವರ್ಣವನ್ನು ಪುನಃ ಪಡೆಯುವಲ್ಲಿ ನೆರವಾಗುತ್ತದೆ. ಎಷ್ಟೇ ಜಾಹಿರಾತುಗಳ ಮೂಲಕ ಸೋಪುಗಳು ರಾರಾಜಿಸಿದರೂ ಕಡ್ಲೆಹಿಟ್ಟಿನ ಆರೈಕೆಗೆ ಸಮನಾಗಲಾರವು.

ಮೊಡವೆಗಳನ್ನು ನಿವಾರಿಸಲು ಮತ್ತು ಚರ್ಮದಲ್ಲಿ ಆದ್ರತೆ ಇರುವಂತೆ ನೋಡಿಕೊಳ್ಳಲು ಕಡ್ಲೆಹಿಟ್ಟು ಉತ್ತಮವಾಗಿದೆ. ಚರ್ಮದ ರಂಧ್ರಗಳನ್ನು ತೆರೆದು ಸ್ವಚ್ಛಗೊಳಿಸುವ ಮೂಲಕ ಕಡ್ಲೆಹಿಟ್ಟು ಚರ್ಮದಡಿಯಲ್ಲಿ ಕಲ್ಮಶ ಸಂಗ್ರಹಗೊಳ್ಳಲು ಬಿಡದೇ ಮೊಡವೆಗಳಿಂದ ರಕ್ಷಣೆ ನೀಡುತ್ತದೆ. ಕಲೆಗಳು ನಿವಾರಣೆಯಾಗುತ್ತವೆ ಎಂದು ಸೋಪಿನ ಅಬ್ಬರದ ಜಾಹೀರಾತಿನಲ್ಲಿ ನಿಜಾಂಶದ ಪ್ರಮಾಣ ಸೊನ್ನೆ. ಬದಲಿಗೆ ಸತತವಾಗಿ ಕಡ್ಲೆಹಿಟ್ಟಿನಿಂದ ಕಲೆಗಳನ್ನು ತೊಳೆದುಕೊಳ್ಳುತ್ತಾ ಇದ್ದರೆ ಶೀಘ್ರವೇ ಕಲೆಗಳು ನಿವಾರಣೆಯಾಗುತ್ತವೆ. ಕಡ್ಲೆಹಿಟ್ಟಿನಿಂದ ಮುಖ ತೊಳೆದುಕೊಳ್ಳುವ ಮೂಲಕ ಮೂಗಿನ ಮತ್ತು ಅಕ್ಕಪಕ್ಕದಲ್ಲಿರುವ ಬ್ಲಾಕ್ ಹೆಡ್ (ಕಪ್ಪು ಚುಕ್ಕೆಯಂತಿರುವ ಭಾಗ) ಸುಲಭವಾಗಿ ಹೊರಬರುತ್ತದೆ.

ನಮ್ಮ ಚರ್ಮ ಅತಿಸೂಕ್ಷ್ಮ ರಂಧ್ರಗಳ ಜರಡಿಯಂತಿದೆ. ಆದರೆ ಈ ಸೂಕ್ಷರಂಧ್ರಕ್ಕಿಂತಲೂ ಕಿರಿದಾದ ಕಣ, ಪರಾಗಗಳು ಸುಲಭವಾಗಿ ಪ್ರವೇಶ ಪಡೆದು ಸೋಂಕು ಉಂಟು ಮಾಡಿ ಉಂಡ ಮನೆಗೆ ದ್ರೋಹ ಬಗೆಯುತ್ತವೆ. ಕಡ್ಲೆಹಿಟ್ಟಿನಿಂದ ಮುಖ ತೊಳೆದುಕೊಳ್ಳುವ ಮೂಲಕ ಈ ರಂಧ್ರಗಳು ಸೆಳೆತಗೊಂಡು ಚಿಕ್ಕದಾಗುತ್ತವೆ. ಪರಿಣಾಮವಾಗಿ ಕಣಗಳು ಮತ್ತು ಪರಾಗಗಳು ಒಳಪ್ರವೇಶಿಸಲು ಸಾಧ್ಯವಾಗದೇ ಈ ತೊಂದರೆಗಳಿಂದ ಮುಕ್ತಿ ಪಡೆದಂತಾಗುತ್ತದೆ.

ಎಣ್ಣೆಚರ್ಮದವರಿಗೆ ತಮ್ಮ ಮುಖದ ಎಣ್ಣೆಯನ್ನು ನಿವಾರಿಸುವುದೇ ದೊಡ್ಡ ಚಿಂತೆ. ಇವರು ಅಗತ್ಯಕ್ಕಿಂತಲೂ ಹೆಚ್ಚು ಬಾರಿ ಸೋಪು ಹಾಕಿ ಮುಖ ತೊಳೆಯುತ್ತಲೇ ಇರುತ್ತಾರೆ. ಇದರಿಂದ ಚರ್ಮ ಅತೀವವಾಗಿ ಒಣಗಿ ಬಿರಿಬಿಡಲು ತೊಡಗುತ್ತದೆ. ಕಡ್ಲೆಹಿಟ್ಟಿನಿಂದ ತೊಳೆದುಕೊಳ್ಳುವ ಮೂಲಕ ಎಣ್ಣೆ ಉತ್ಪತ್ತಿಮಾಡುವ ಗ್ರಂಥಿಗಳು ಈ ಪ್ರಮಾಣವನ್ನು ತಗ್ಗಿಸಿಬಿಡುವ ಮೂಲಕ ಯಾವುದೇ ಹಾನಿಕರ ಪರಿಣಾಮವಿಲ್ಲದೇ ಎಣ್ಣೆಜಿಡ್ಡನ್ನು ಕಳೆದುಕೊಳ್ಳಬಹುದು.

ಸತ್ತ ಜೀವಕೋಶಗಳನ್ನು ನಿವಾರಿಸುವ ಮೂಲಕ ಚರ್ಮ ನಯವಾಗುತ್ತದೆ ಹಾಗೂ ಮೃದುವಾಗಿಯೂ ಇರುತ್ತರೆ. ಇದೇ ವೇಳೆ ಸೋಪಿನ ಉಪಯೋಗದಿಂದ ಚರ್ಮ ಒರಟು ಮತ್ತು ಆರ್ದ್ರತೆಯಿಲ್ಲದಂತಾಗುತ್ತದೆ.

Write A Comment