ಅಂತರಾಷ್ಟ್ರೀಯ

ಕಪ್ಪು ಹಣ ವರ್ಗಾವಣೆಯಲ್ಲಿ ಭಾರತಕ್ಕೆ 4ನೇ ಸ್ಥಾನ

Pinterest LinkedIn Tumblr

black_money_1

ವಾಷಿಂಗ್ಟನ್: ಭಾರತೀಯರು ವಿದೇಶಗಳಲ್ಲಿ ಇಟ್ಟಿರುವ ಕಪ್ಪುಹಣವನ್ನು ಹಿಂತರುವುದಾಗಿ ಕೇಂದ್ರ ಸರ್ಕಾರ ಮೇಲಿಂದ ಮೇಲೆ ಹೇಳುತ್ತಿದೆ. ಆದರೆ ದೇಶದಿಂದ ಮಾತ್ರ ಕಪ್ಪು ಹಣ ನಿರಂತರವಾಗಿ ವರ್ಗಾವಣೆಯಾಗುತ್ತಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಕಪ್ಪು ಹಣ ವರ್ಗಾಯಿಸುತ್ತಿರುವ ದೇಶಗಳಲ್ಲಿ ಭಾರತ ನಾಲ್ಕನೆ ಸ್ಥಾನದಲ್ಲಿದೆ. ಕಳೆದ 2004ರಿಂದ 2013ರ ನಡುವೆ ಭಾರತದಿಂದ 51 ಬಿಲಿಯನ್ ಡಾಲರ್ (ರು.3,21,300 ಕೋಟಿ) ವರ್ಗಾವಣೆ ಮಾಡಲಾಗಿದೆ. ಭಾರತದಿಂದ ವರ್ಗಾವಣೆಯಾಗಿರುವ ಕಪ್ಪು ಹಣ ದೇಶದ ರಕ್ಷಣಾ ಬಜೆಟ್ ಗಿಂತಲೂ ಹೆಚ್ಚು.

ವಾಷಿಂಗ್ಟನ್ ಮೂಲದ ಸಂಶೋಧನಾ ಸಂಸ್ಥೆ ಗ್ಲೋಬಲ್ ಫೈನಾನ್ಷಿಯಲ್ ಇಂಟಗ್ರಿಟಿ (ಜಿಎಪ್ ಐ) ಸಂಶೋಧನಾ ವರದಿ ಬಿಡುಗಡೆ ಮಾಡಿದ್ದು ಚೀನಾ, ರಷ್ಯಾ ಮತ್ತು ಮೆಕ್ಸಿಕೊ ಮೊದಲ ಮೂರು ಸ್ಥಾನಗಳಲ್ಲಿವೆ.

ಈ ಅವಧಿಯಲ್ಲಿ ಚೀನಾದಿಂದ 139 ಬಿಲಿಯನ್ ಡಾಲರ್, ರಷ್ಯಾದಿಂದ 104 ಬಿಲಿಯನ್ ಮತ್ತು ಮೆಕ್ಸಿಕೊದಿಂದ 52.86 ಬಿಲಿಯನ್ ಡಾಲರ್ ಕಪ್ಪು ಹಣ ವರ್ಗಾವಣೆ ಮಾಡಲಾಗಿದೆ.

ತೆರಿಗೆ ವಂಚನೆ, ಅಪರಾಧ, ಭ್ರಷ್ಟಾಚಾರ ಮತ್ತಿತರ ಅಕ್ರಮ ವಹಿವಾಟು ಮತ್ತು ಹಾದಿಗಳಿಂದ ಈ ಹಣ ವರ್ಗಾವಣೆ ಮಾಡಲಾಗುತ್ತಿದೆ. 2013ರಲ್ಲಿ ಮಾತ್ರವೆ ಅಭಿವೃದ್ಧಿಶೀಲ ಮತ್ತು ವೇಗವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ದೇಶಗಳಿಂದ 1.1ಲಕ್ಷ ಕೋಟಿ ಡಾಲರ್ ಕಪ್ಪು ಹಣ ವರ್ಗಾವಣೆ ಮಾಡಲಾಗಿದೆ ಎಂದು ವರದಿ ವಿವರಿಸಿದೆ. ಒಟ್ಟಾರೆಯಾಗಿ 2004-2014ರ ನಡುವಿನ ಹತ್ತು ವರ್ಷಗಳಲ್ಲಿ ಭಾರತದಿಂದ 510 ಬಿಲಿಯನ್, ಚೀನಾ 1.39 ಟ್ರಿಲಿಯನ್ ಮತ್ತು ರಷ್ಯಾದಿಂದ 1 ಟ್ರೆಲಿಯನ್ ಡಾಲರ್ ಹೊರ ಹೋಗಿದೆ.

ಅಭಿವೃದ್ಧಿಶೀಲ ದೇಶಗಳಿಂದ ಅಕ್ರಮ ಹಣಕಾಸು ವರ್ಗಾವಣೆ-2004-13 ವರದಿಯಲ್ಲಿ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿರುವ ಜಿಎಫ್ ಐ, 2004ರಲ್ಲಿ ಈ ಪ್ರಮಾಣ 465.3 ಬಿಲಿಯನ್ ಡಾಲರ್ ಇದ್ದದು 2011ರ ವೇಳೆಗೆ 1 ಟ್ರಿಲಿಯನ್ ಮತ್ತು 2013ರ ವೇಳೆಗೆ 1.1 ಟ್ರಿಲೆಯನ್ ದಾಟಿದೆ ಎಂದು ವರದಿ ವಿವರಿಸಿದೆ.

2013ರಲ್ಲಿ ಅತಿ ಹೆಚ್ಚು ಕಪ್ಪು ಹಣ ವರ್ಗಾವಣೆಯಾಗಿರುವುದು ಚೀನಾದಿಂದ. ಅಭಿವೃದ್ಧಿಶೀಲ ದೇಶಗಳು ಎದುರಿಸುತ್ತಿರುವ ಅತ್ಯಂತ ಪ್ರಮುಖ ಆರ್ಥಿಕ ಸಮಸ್ಯೆಯಲ್ಲಿ ಕಪ್ಪು ಹಣ ವರ್ಗಾವಣೆ ಪ್ರಮುಖವಾಗಿದೆ ಎಂದು ಜಿಎಪ್ ಐ ಅಧ್ಯಕ್ಷ ರೇಮಂಡ್ ಬೇಕರ್ ಎಚ್ಚರಿಸಿದ್ದಾರೆ. ಕಪ್ಪುಹಣ ತಡೆಯುವ ಕ್ರಮಗಳನ್ನು ಜಾಗತಿಕ ಮುಖಂಡರು ಕೈಗೊಳ್ಳಬೇಕೆಂದು ಜಿಎಫ್ ಐ ಹೇಳಿದೆ.

Write A Comment