ಮನೋರಂಜನೆ

ಕನಸು ಕಂಗಳ ವೈಷ್ಣವಿಗೆ ನಟಿಯಾಗುವ ಅದೃಷ್ಟ

Pinterest LinkedIn Tumblr

vaishnavif

ನೀಳ ಕಾಯ, ಗುಂಗುರು ಗುಂಗುರಾಗಿ ಹರಡಿದ ಕೂದಲು, ತಿದ್ದಿ ತೀಡಿದಂತಹ ದೇಹ, ಮುಖದ ಮೇಲೆ ಸದಾ ಹರಿದಾಡುವ ನಗುವಿನಿಂದಲೇ ನೋಡುಗರನ್ನು ಸೆಳೆಯುವ ಈಕೆ ವೈಷ್ಣವಿ ಚಂದ್ರನ್‌.

ಕೆಲವೊಂದಿಷ್ಟು ರ್‍ಯಾಂಪ್ ಷೋಗಳಲ್ಲಿ ಹೆಜ್ಜೆ ಹಾಕಿದ ಈಕೆಗೆ ಈಗ ನಟಿಯಾಗುವ ಅದೃಷ್ಟ ಒಲಿದಿದೆ. ಬಾಲ್ಯದಿಂದಲೂ ನಟಿಯಾಗಬೇಕು ಎನ್ನುವ ಆಕೆಯ ಕನಸು ‘ಮಗಧ’ ಚಿತ್ರದ ಮೂಲಕ ನನಸಾಗಿದೆ. ಸದ್ಯ ಆಕೆಯ ಕೈಯಲ್ಲಿ ಮೂರು ಕನ್ನಡ ಚಿತ್ರಗಳು ಹಾಗೂ ಒಂದು ತಮಿಳು ಒಂದು ತೆಲುಗು ಸೇರಿ 5 ಚಿತ್ರಗಳಿವೆ.

ಕೇರಳ ಮೂಲದ ವೈಷ್ಣವಿ ಹುಟ್ಟಿ ಬೆಳೆದಿದ್ದೆಲ್ಲಾ ನಗರದಲ್ಲೇ.  ಆಕೆ ಕಂಡ ಪ್ರತಿ ಕನಸನ್ನು ನನಸಾಗಿಸಲು ಪ್ರಯತ್ನಿಸಿದವರು ಆಕೆಯ ಅಪ್ಪ, ಅಮ್ಮ ಮತ್ತು ಅಜ್ಜಿ. ತನ್ನ ಪ್ರತಿ ಗೆಲುವಿನ ಹಿಂದೆ  ತಂದೆ, ತಾಯಿ ಹಾಗೂ ಕಾಲೇಜು ಪ್ರಾಂಶುಪಾಲರಾದ ಸಿಸ್ಟರ್ ನಿರ್ಮಲಾ ಅವರ ಸಹಕಾರವಿದೆ ಎಂದು ಖುಷಿಯಿಂದ ಹೇಳುವ ವೈಷ್ಣವಿ ಸದ್ಯ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ.

‘ಚಿಕ್ಕ ವಯಸ್ಸಿನಲ್ಲಿ ಯಾರಾದರೂ ಮುಂದೆ ಏನಾಗುತ್ತಿಯಾ ಎಂದರೆ ಆ್ಯಕ್ಟರ್ ಎಂದು ಕಣ್ಣು ಅರಳಿಸಿ ಹೇಳುತ್ತಿದ್ದೆನಂತೆ’ ಎಂದು ನಗು ಚೆಲ್ಲುತ್ತಾರೆ  ವೈಷ್ಣವಿ. ನಟಿಯಾಗಲು ಪೂರ್ವ ತಯಾರಿ ಎಂಬಂತೆ ಅವರು ಬಾಲ್ಯದಿಂದಲೂ ನೃತ್ಯದತ್ತ ವಿಪರೀತ ಆಸಕ್ತಿ ಹೊಂದಿದ್ದರು. ತಾವು ಎರಡು ವರ್ಷದವಳಿದ್ದಾಗಲೇ ನೃತ್ಯ ಮಾಡುತ್ತಿದ್ದ ವೈಷ್ಣವಿ ಆರು ವರ್ಷಗಳ ಕಾಲ ಭರತನಾಟ್ಯ ಅಭ್ಯಾಸ ಮಾಡಿದ್ದರು. ಈಗ ನಟನಾ ಕ್ಷೇತ್ರಕ್ಕೆ ಅನುಕೂಲವಾಗಲೆಂದು ಸಮಕಾಲೀನ ಹಾಗೂ ಪಾಪ್ ನೃತ್ಯವನ್ನು ಕೂಡ ಅಭ್ಯಾಸ ಮಾಡುತ್ತಿದ್ದಾರೆ ವೈಷ್ಣವಿ.

ನಟಿಯಾಗುವ ಕನಸಿಗೆ  ವೇದಿಕೆಯಾಗಿದ್ದು ಪ್ರಿನ್ಸೆಸ್‌ ಆಫ್ ಸೌತ್‌ ಇಂಡಿಯಾದಲ್ಲಿ ವೈಷ್ಣವಿ ಪ್ರಿನ್ಸ್ ಆಗಿ ಆಯ್ಕೆಯಾದಾಗ. ಮೊದಲ ಬಾರಿಗೆ ಆಕೆ ನಟಿಸಿದ್ದು ಸುದ್ದಿ (ನ್ಯೂಸ್) ಎಂಬ ಕಿರುಚಿತ್ರದಲ್ಲಿ.  ಆ ಕಿರುಚಿತ್ರವೇ ಆಕೆಯ ನಟನಾ ಕ್ಷೇತ್ರಕ್ಕೆ ಕಾಲಿಡಲು ಮೆಟ್ಟಿಲಾಯಿತು. ಚಿಕ್ಕಂದಿನಿಂದಲೂ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದರಿಂದ ಮೊದಲ ಬಾರಿ ಕ್ಯಾಮೆರಾ ಎದುರಿಸುವಾಗ ಯಾವುದೇ ಅಳುಕು ಕಾಡಲಿಲ್ಲ ಎಂಬುದು ಅವರ ಅನುಭವದ ಮಾತು.

‘ನಾನು ಡಾನ್ಸರ್‌ ಆದ ಕಾರಣ ನಟನೆ ನನಗೆ ಇನ್ನಷ್ಟು ಸುಲಭವಾಯಿತು.  ನೃತ್ಯ ಮಾಡುವಾಗ ಮುಖದಲ್ಲಿ ಮೂಡಿಸಬೇಕಾದ ಭಾವನೆಗಳು, ದೇಹದ ಚಲನೆ ಇವೆಲ್ಲವೂ ನಟನೆಯಲ್ಲಿ ಸೈ ಎನ್ನಿಸಿಕೊಳ್ಳಲು ನನಗೆ ಸಹಾಯ ಮಾಡಿದೆ’ ಎನ್ನುತ್ತಾರೆ ವೈಷ್ಣವಿ. ನಟನೆಯೊಂದಿಗೆ ಓದಿಗೂ ಸಮಾನ ಪ್ರಾಮುಖ್ಯತೆ ಕೊಡುತ್ತೇನೆ ಎನ್ನುವ ವೈಷ್ಣವಿ ರ‍್ಯಾಂ ಕ್‌ ಸ್ಟೂಡೆಂಟ್‌. ಕಾಲೇಜು ಕಡೆಯಿಂದ ಸಂಪೂರ್ಣ ಬೆಂಬಲ ನೀಡಿರುವ ಸಿಸ್ಟರ್‌ ಅಶ್ವಿನಿ ಅವರನ್ನು ಪದೇ ಪದೇ ನೆನೆಯುತ್ತಾರೆ ವೈಷ್ಣವಿ.

‘ನನಗೆ ಚಿತ್ರ ಯಾವುದು, ಯಾರೂ ನಿರ್ದೇಶಕರು ಎನ್ನುವುದು ಮುಖ್ಯವಲ್ಲ, ಆದರೆ ಚಿತ್ರಕಥೆ ಹೇಗಿದೆ ಎನ್ನುವುದು ಮುಖ್ಯ. ಅದನ್ನು ನೋಡಯೇ ನಾನು ಚಿತ್ರಗಳನ್ನು ಒಪ್ಪಿಕೊಳ್ಳುತ್ತೇನೆ’ ಎನ್ನುವ ವೈಷ್ಣವಿ ಚಿತ್ರವನ್ನು ಒಪ್ಪಿಕೊಳ್ಳುವ ಮೊದಲು ತಮ್ಮ ತಂದೆ ತಾಯಿಯೊಂದಿಗೆ ಚರ್ಚಿಸಿ ನಿರ್ಧರಿಸುತ್ತಾರೆ.

ಫಿಟ್‌ನೆಸ್‌ ಬಗ್ಗೆ ಬಹಳವೇನು ಮಾತನಾಡದ ವೈಷ್ಣವಿ ‘ಡಯೆಟ್ ಮಾಡೋದು ಕಷ್ಟ, ಆದರೂ ಆಹಾರ ಸೇವನೆಗೆ ತುಸು ಮಿತಿ ಹಾಕಿಕೊಂಡಿದ್ದೇನೆ. ಪ್ರತಿದಿನ ಒಂದುವರೆ ತಾಸು ಜಿಮ್‌ನಲ್ಲಿ ದೇಹದಂಡಿಸುತ್ತೇನೆ. ನಾನು ಮಿಶ್ರಾಹಾರಿ. ಆಹಾರ ಸೇವನೆಯಲ್ಲಿ ತೀರಾ ಕಟ್ಟುನಿಟ್ಟು ಪಾಲಿಸುವುದು ನನ್ನಿಂದಾಗದು’ ಎಂದು ಫಿಟನೆಸ್ ಬಗ್ಗೆ ಪುಟ್ಟದಾಗಿ ಹೇಳುತ್ತಾರೆ.

‘ನಾನು ನಟಿಯಾಗುವುದಕ್ಕಿಂತ ಕಲಾವಿದೆಯಾಗಲು ಈ ಕ್ಷೇತ್ರಕ್ಕೆ ಬಂದವಳು. ಜನ ನನ್ನಲ್ಲಿನ ಕಲೆಯನ್ನು ಗುರುತಿಸಬೇಕು ಎಂಬುದು ನನ್ನ ಮನದಾಸೆ’ ಎಂದು ಅರುಹುತ್ತಾರೆ ವೈಷ್ಣವಿ. ನಟನೆಯಷ್ಟೇ ಓದು ಕೂಡ ಮುಖ್ಯ ಎಂದು ಭಾವಿಸಿರುವ ಅವರು ನಟನೆಯಷ್ಟೇ ಓದಿಗೂ ಪ್ರಾಮುಖ್ಯತೆ ನೀಡುತ್ತಾರೆ. ಅಪ್ಪ ಅಮ್ಮನ ಆಸೆಯಂತೆ ಅವರು ಶೈಕ್ಷಣಿಕವಾಗಿಯೂ ಮುಂದುವರಿಯುವ ಬಯಕೆ ಹೊಂದಿದ್ದಾರೆ. ಚಿಕ್ಕಂದಿನಿಂದಲೂ ಮುದ್ದಿಸಿ ಬೆಳೆಸಿದ ಅಪ್ಪ ಅಮ್ಮನ ಆಸೆ ಸಾಕಾರಗೊಳಿಸುವುದರೊಂದಿಗೆ ಮನದ ನಟನಾ ಇಂಗಿತವನ್ನೂ ನೆರವೇರಿಸಿಕೊಂಡು ಬೀಗುವ ತವಕ ಅವರದ್ದು.

Write A Comment