ಅಂತರಾಷ್ಟ್ರೀಯ

ನಿಮಗೆ ಸದಾ ಸ್ವಾಗತವಿದೆ: ಮುಸ್ಲಿಮರಿಗೆ ಫೇಸ್‌ಬುಕ್ ಸ್ಥಾಪಕನ ಅಭಯ

Pinterest LinkedIn Tumblr

Faceburgeವಾಶಿಂಗ್ಟನ್, ಡಿ.10: ಭಯೋತ್ಪಾದಕ ಘಟನೆಗಳ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಬಲಿಪಶು ಮಾಡುವ ಪ್ರವೃತ್ತಿಯ ವಿರುದ್ಧ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಧ್ವನಿ ಎತ್ತಿದ್ದಾರೆ.

ಅಮೆರಿಕಕ್ಕೆ ಮುಸ್ಲಿಮರು ಪ್ರಯಾಣಿಸುವುದನ್ನು ನಿಷೇಧಿಸಬೇಕು ಎಂಬುದಾಗಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ವಿವಾದಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು.

‘‘ಪ್ಯಾರಿಸ್ ಮೇಲೆ ನಡೆದ ದಾಳಿ ಹಾಗೂ ಈ ವಾರ ವ್ಯಕ್ತವಾಗಿರುವ ದ್ವೇಷ ಸಾಧನೆಯ ಬಳಿಕ ಇತರರ ಕೃತ್ಯಗಳಿಗಾಗಿ ತಮ್ಮನ್ನು ಶಿಕ್ಷಿಸಲಾಗುತ್ತದೆ ಎಂಬು ದಾಗಿ ಮುಸ್ಲಿಮರನ್ನು ಕಾಡುವ ಭಯವನ್ನು ನಾನು ಊಹಿಸಬಲ್ಲೆ’’ ಎಂದು ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ಝಕರ್‌ಬರ್ಗ್ ಹೇಳಿದ್ದಾರೆ.

‘‘ಮುಸ್ಲಿಮರ ಹಕ್ಕುಗಳನ್ನು ರಕ್ಷಿಸಲು ನಾನು ಬಯಸಿದ್ದೇನೆ. ಬೇರೆಯವರ ಕೃತ್ಯಗಳಿಗಾಗಿ ತಮ್ಮನ್ನು ಶಿಕ್ಷಿಸಲಾಗುತ್ತದೆ ಎನ್ನುವ ಭಯ ಅವರಲ್ಲಿ ಇರಬಾರದು’’ ಎಂದಿದ್ದಾರೆ.

‘‘ಈ ಸಮುದಾಯದಲ್ಲಿ ನೀವು ಮುಸ್ಲಿಮರಾಗಿದ್ದರೆ, ನಿಮಗೆ ಇಲ್ಲಿ ಯಾವಾಗಲೂ ಸ್ವಾಗತವಿದೆ ಹಾಗೂ ನಿಮ್ಮ ಹಕ್ಕುಗಳನ್ನು ರಕ್ಷಿಸಲು ಹಾಗೂ ನಿಮಗಾಗಿ ಪ್ರಶಾಂತ ಹಾಗೂ ಸುರಕ್ಷಿತ ವಾತಾವರಣವೊಂದನ್ನು ಸೃಷ್ಟಿಸಲು ನಾವು ಬಯಸಿದ್ದೇವೆ ಎಂಬುದನ್ನು ಫೇಸ್‌ಬುಕ್‌ನ ನಾಯಕನಾಗಿ ನಾನು ನಿಮಗೆ ಹೇಳುತ್ತಿದ್ದೇನೆ’’ ಎಂದು ಝುಕರ್‌ಬರ್ಗ್ ಬರೆದಿದ್ದಾರೆ.

‘‘ಯಾವುದೇ ಸಮುದಾಯದ ವಿರುದ್ಧ ಆಕ್ರಮಣ ನಡೆದರೂ ಪ್ರತಿಭಟಿಸಬೇಕು ಎಂಬುದಾಗಿ ಓರ್ವ ಯಹೂದಿಯಾಗಿ ನನ್ನ ಹೆತ್ತವರು ನನಗೆ ಕಲಿಸಿದ್ದಾರೆ. ಯಾರದೇ ಸ್ವಾತಂತ್ರದ ಮೇಲೆ ದಾಳಿ ನಡೆದರೂ ಅದು ಪ್ರತಿಯೊಬ್ಬರನ್ನೂ ಬಾಧಿಸುತ್ತದೆ’’ ಎಂದಿದ್ದಾರೆ.

ಮುಸ್ಲಿಮರನ್ನು ಕುರಿತ ಟ್ರಂಪ್ ಹೇಳಿಕೆ ಅಂತಾರಾಷ್ಟ್ರೀಯ ಆಕ್ರೋಶವನ್ನು ಹುಟ್ಟುಹಾಕಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅವರು ಈಗ ತನ್ನದೇ ರಿಪಬ್ಲಿಕನ್ ಪಕ್ಷದ ಚುನಾವಣಾ ಸಮೀಕ್ಷೆಯಲ್ಲಿ ತನ್ನ ಸಮೀಪದ ಪ್ರತಿ ಸ್ಪರ್ಧಿಗಳಿಗಿಂತ ಭಾರೀ ಅಂತರದಿಂದ ಮುಂದಿದ್ದಾರೆ.

ರಿಪಬ್ಲಿಕನ್ ಪಕ್ಷದ ಇತರ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಗಳು ಟ್ರಂಪ್ ಹೇಳಿಕೆಯನ್ನು ಖಂಡಿಸಿದ್ದಾರೆ. ಆದರೆ, ಪಕ್ಷದ ಹಿರಿಯ ನಾಯಕರು ಟ್ರಂಪ್‌ರನ್ನು ಸ್ಪರ್ಧೆಯಿಂದ ಕೈಬಿಡಲು ನಿರಾಕರಿಸಿದ್ದಾರೆ.

Write A Comment