ಅಂತರಾಷ್ಟ್ರೀಯ

26/11 ಮುಂಬೈ ದಾಳಿ: ಅಜ್ಮಲ್ ಕಸಬ್ ಜೀವಂತವಿದ್ದಾನೆ!: ಸಾಕ್ಷಿಯ ಪ್ರತಿಕೂಲ ಹೇಳಿಕೆ

Pinterest LinkedIn Tumblr

Kasabf

ಇಸ್ಲಾಮಾಬಾದ್, ಡಿ.10: ಅಜ್ಮಲ್ ಕಸಬ್ ಜೀವಂತವಿದ್ದಾನೆ… ಇದು ಬುಧವಾರ ರಾವಲ್ಪಿಂ ಡಿಯ ಅಡಿಯಾಲಾ ಜೈಲಿನಲ್ಲಿ 26/11ರ ಮುಂಬೈ ಭಯೋತ್ಪಾದಕ ದಾಳಿಗಳ ಪ್ರಕರಣದ ವಿಚಾರಣೆ ನಡೆಸುತ್ತಿರುವ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯೋರ್ವ ನೀಡಿದ ಈ ಪ್ರತಿಕೂಲ ಹೇಳಿಕೆ ಮುಂಬೈನಿಂದ ತೆರಳಿದ್ದ ಪ್ರಾಸಿಕ್ಯೂಷನ್ ತಂಡದ ಮುಜುಗರಕ್ಕೆ ಕಾರಣವಾಗಿತ್ತು. ಮುಂಬೈ ದಾಳಿ ಸಂದರ್ಭ ಜೀವಂತ ಸೆರೆ ಸಿಕ್ಕಿದ್ದ ಏಕೈಕ ಪಾಕ್ ಭಯೋತ್ಪಾದಕ ಕಸಬ್ ಮೂರು ವರ್ಷಗಳ ಹಿಂದೆಯೇ ಭಾರತದ ಪುಣೆಯ ಜೈಲಿನಲ್ಲಿ ಗಲ್ಲಿಗೇರಿಸಲ್ಪಟ್ಟಿದ್ದಾನೆ.

ಫರೀದಾಕೋಟ್‌ನ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮುದಸ್ಸಿರ್ ಲಖ್ವಿ ತಾನು ಕಸಬ್‌ಗೆ ಕಲಿಸಿದ್ದೆ ಮತ್ತು ಆತ ಜೀವಂತವಿದ್ದಾನೆ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾಗಿ ನ್ಯಾಯಾಲಯದ ಅಧಿಕಾರಿಯೋರ್ವರು ಗುರುವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು. ಕಸಬ್ ಇದೇ ಶಾಲೆಯಲ್ಲಿ ಮೂರು ವರ್ಷ ಓದಿದ್ದ.

ಕಸಬ್ ಜೀವಂತವಾಗಿದ್ದಾನೆ ಎಂದು ಹೇಳುವ ಮೂಲಕ ಮುಖ್ಯೋಪಾಧ್ಯಾಯರು ಪ್ರಾಸಿಕ್ಯೂಷನ್ ತಂಡಕ್ಕೆ ಸಾಕಷ್ಟು ಮುಜುಗರವನ್ನುಂಟು ಮಾಡಿದರು. ಕಸಬ್ ತನ್ನ ಶಾಲೆಯಲ್ಲಿ ಓದಿದ್ದ ಅವಧಿಯಲ್ಲಿನ ದಾಖಲೆಗಳನ್ನು ಮತ್ತು ಇತರ ದಾಖಲೆಗಳನ್ನು ಅವರು ಮಂಡಿಸಬೇಕಾಗಿತ್ತು. ಆದರೆ ಅವರು ಬೇರೆಯೇ ಮಾತನಾಡಿದರು. ಅವರನ್ನು ಸೂಕ್ತ ವಿಚಾರಣೆಗೊಳಪಡಿಸಲು ಪ್ರಾಸಿಕ್ಯೂಷನ್ ಸಹ ವಿಫಲಗೊಂಡಿತು ಎಂದು ಅಧಿಕಾರಿ ತಿಳಿಸಿದರು.

ಮುಖ್ಯೋಪಾಧ್ಯಾಯರು ಪ್ರಮುಖ ಆರೋಪಿ ಝಕೀವುರ್ರಹ್ಮಾನ್ ಲಖ್ವಿಯ ಊರಿನವರೇ ಆಗಿದ್ದು, ಆತನ ಒತ್ತಡಕ್ಕೊಳಗಾಗಿ ಈ ಹೇಳಿಕೆ ನೀಡಿರುವ ಸಾಧ್ಯತೆಯಿದೆ ಎಂದರು.

ಮುದಸ್ಸಿರ್ ಲಖ್ವಿ 2014,ಮೇ ತಿಂಗಳಲ್ಲಿ ನ್ಯಾಯಾಲಯದಲ್ಲಿ ಹಾಜರಾದಾಗ ಕಸಬ್ ಇನ್ನೂ ಜೀವಂತವಾಗಿದ್ದಾನೆ ಎಂದು ಹೇಳಿದ್ದರು. ಪ್ರತಿಕೂಲ ಸಾಕ್ಷ ನೀಡಿಕೆಯ ಹಿನ್ನೆಲೆಯಲ್ಲಿ ಅವರನ್ನು ಇನ್ನೊಮ್ಮೆ ವಿಚಾರಣೆಗೊಳಪಡಿಸಲು ಅನುಮತಿ ಕೋರಿ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಬುಧವಾರ ಅವರನ್ನು ನ್ಯಾಯಾಲಯಕ್ಕೆ ಕರೆಸಲಾಗಿತ್ತು. ಆದರೆ ಅವರು ತನ್ನ ಹಿಂದಿನ ಹೇಳಿಕೆಗೇ ಅಂಟಿಕೊಂಡಿದ್ದರು.

ಲಖ್ವಿ ಭಾರತದಲ್ಲಿ ನೇಣಿಗೇರಿಸಲ್ಪಟ್ಟ ಕಸಬ್ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ, ಆತ ಫರೀದಾಕೋಟ್‌ನ ತನ್ನ ಶಾಲೆಯಲ್ಲಿ ಓದಿದ್ದ ವ್ಯಕ್ತಿಯೇ ಎನ್ನುವುದನ್ನೂ ಹೇಳಲಿಲ್ಲ.

ಅಗತ್ಯವಾದರೆ ಕಸಬ್‌ನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಬಹುದಾಗಿದೆ ಎಂದೂ ಈ ವ್ಯಕ್ತಿ ಈ ಹಿಂದೆ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದರು. ಪ್ರಕರಣದ ಮುಂದಿನ ವಿಚಾರಣೆ ಡಿ.16ರಂದು ನಡೆಯಲಿದೆ.

ಪಾಕಿಸ್ತಾನದ ಲಷ್ಕರೆ ತಯ್ಯಿಬಾದ ಉಗ್ರರು ಮುಂಬೈ ದಾಳಿಗಳ ರೂವಾರಿಗಳು ಎಂದು ಭಾರತವು ಆರೋಪಿಸಿದೆ. ಲಷ್ಕರ್‌ನ ಕಮಾಂಡರ್ ಝಕಿಯುರ್ ಲಖ್ವಿ ಸೇರಿದಂತೆ ಏಳು ಆರೋಪಿಗಳ ವಿರುದ್ಧ 2009ರಿಂದಲೂ ವಿಚಾರಣೆ ನಡೆಯುತ್ತಿದೆ. ಸದ್ಯ ಲಖ್ವಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದು ಅಜ್ಞಾತ ಸ್ಥಳದಲ್ಲಿ ವಾಸವಿದ್ದಾನೆ.

Write A Comment