ಕನ್ನಡ ವಾರ್ತೆಗಳು

ಮಾರಿಪಳ್ಳ : ಹನೀಫ್ ಕೊಲೆ ಯತ್ನ ಪ್ರಕರಣ – ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ತಲವಾರುಗಳು ಪತ್ತೆ

Pinterest LinkedIn Tumblr

Mada_haneef_photo

ಬಂಟ್ವಾಳ, ಡಿ. 11: ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿ ನಡೆದ ರೌಡಿ ಶೀಟರ್ ಹನೀಫ್ ಯಾನೆ ಮಾದ ಹನೀಫ್ (38) ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ್ದ ಆಲ್ಟೊ ಕಾರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಟ್ವಾಳದ ಗಾಣದ ಪಡ್ಪುವಿನ ಗ್ಯಾರೇಜ್‌ವೊಂದರ ಬಳಿಯಿಂದ ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ್ದ ಎರಡು ತಲವಾರುಗಳು ಕೂಡ ದೊರೆತಿವೆ. ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದುಷ್ಕರ್ಮಿಗಳು ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದರು ಎನ್ನಲಾಗಿದ್ದು, ದುಷ್ಕರ್ಮಿಗಳ ಮಾಹಿತಿಯನ್ನು ಕೂಡ ಪೊಲೀಸರು ಕಲೆ ಹಾಕಿದ್ದು, ಕೃತ್ಯದಲ್ಲಿ ಐವರು ಭಾಗಿಗಳಾಗಿರುವುದು ಪೊಲೀಸರ ತನಿಖೆಯಿಂದ ಬಯಲಿಗೆ ಬಂದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲೇ ಈ ಕೃತ್ಯ ನಡೆಸಲಾಗಿದೆ ಎಂಬುದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.

ಕೃತ್ಯದ ಬಳಿಕ ಬಿ.ಸಿ.ರೋಡು ಮೂಲಕ ದುಷ್ಕರ್ಮಿಗಳು ಪರಾರಿಯಾಗಿದ್ದು, ಕಾರನ್ನು ಗಾಣದಪಡ್ಪುವಿನ ಗ್ಯಾರೇಜ್‌ವೊಂದರ ಬಳಿ ತೊರೆದು ಅಲ್ಲಿಂದ ತಲೆಮರೆಸಿಕೊಂಡಿದ್ದಾರೆ. ರಾತ್ರಿಯವರೆಗೂ ಸಂಶಯಾಸ್ಪದವಾಗಿ ನಿಂತಿದ್ದ ಕಾರಿನ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ತಲವಾರುಗಳು ಪತ್ತೆಯಾಗಿದ್ದು, ತಕ್ಷಣ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿರುವ ಮಾದ ಹನೀಫ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ಹೇಳಲಾಗಿದೆ. ಜಿಲ್ಲಾ ಎಸ್ಪಿ ಡಾ. ಶರಣಪ್ಪ ಮಾರ್ಗದರ್ಶನದಲ್ಲಿ, ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ವೃತ್ತನಿರೀಕ್ಷಕ ಬೆಳ್ಳಿಯಪ್ಪ, ಠಾಣಾಕಾರಿ ರಕ್ಷಿತ್ ಗೌಡ ತನಿಖೆ ಮುಂದುವರಿಸಿದ್ದಾರೆ.

Write A Comment