ವಿಶ್ವಸಂಸ್ಥೆ/ಚೆನ್ನೈ: ಎಲ್‍ನಿನೋ ಪ್ರಭಾವದಿಂದಾಗಿ ದಕ್ಷಿಣ ಭಾರತದಲ್ಲಿ ಸಾಮಾನ್ಯಕ್ಕಿಂಕ ಅಧಿಕ ಮಳೆ ಮುಂದುವರಿಯಲಿದೆ ಹಾಗೂ ಇನ್ನಷ್ಟು ಪ್ರವಾಹ ಪ್ರವಾಹ ಉಂಟಾಗುವ ಭೀತಿಯಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ. ಭಾರಿ ಮಳೆ, ಪ್ರವಾಹದಿಂದ ತಮಿಳು ನಾಡು ತತ್ತರಿಸಿಹೋಗಿರುವ ಬೆನ್ನಲ್ಲೇ ವಿಶ್ವಸಂಸ್ಥೆಯು ಇಂತಹುದೊಂದು ವರದಿ ನೀಡಿರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶಗಳಲ್ಲಿ ಎಲ್ ನಿನೋ ಪ್ರಭಾವವು 1998ಕ್ಕಿಂತಲೂ ಅಪಾಯಕಾರಿಯಾಗಿದ್ದು, ಇದು 2016ರ ಆರಂಭದವರೆಗೂ ಮುಂದುವರಿಯಲಿದೆ. ಹವಾಮಾನದ ಈ ರಿಸ್ಕ್ ಅನ್ನು ನಿಯಂತ್ರಿಸಲು ದೀರ್ಘಕಾಲಿಕ ಕಾರ್ಯತಂತ್ರಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದೂ ವರದಿ ತಿಳಿಸಿದೆ.
ಏಷ್ಯಾ ಮತ್ತು ಪೆಸಿಫಿಕ್ ಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ ಹಾಗೂ ರೀಜನಲ್ ಇಂಟಗ್ರೇಟೆಡ್ ಮಲ್ಟಿ ಹಜಾರ್ಡ್ ಅರ್ಲಿ ವಾರ್ನಿಂಗ್ ಸಿಸ್ಟಂ ಫಾರ್ ಆಫ್ರಿಕಾ ಆ್ಯಂಡ್ ಏಷ್ಯಾ ಜಂಟಿಯಾಗಿ ಬಿಡುಗಡೆ ಮಾಡಿದ ವರದಿಯು ಈ ಎಲ್ಲ ವಿಚಾರಗಳನ್ನು ಬಹಿರಂಗ ಪಡಿಸಿದೆ.
ಪ್ರವಾಹದ ಎಚ್ಚರಿಕೆ: ಭಾರತ , ಶ್ರೀಲಂಕಾ ಸೇರಿದಂತೆ ಹಲವು ಆಗ್ನೇಯ ಏಷ್ಯಾ ದೇಶಗಳಲ್ಲಿ ಧಾರಾಕಾರ ಮಳೆಯಿಂದಾಗಿ ಭಾರಿ ಪ್ರವಾಹ ಪರಿಸ್ಥಿತಿ ತಲೆದೋರಬಹುದು. ಇನ್ನು ಪಪುವಾ ನ್ಯೂ ಗಿನಿ, ಟೈಮರ್ ರಸ್ತೆ, ಮನೌತು ಮತ್ತಿತರ ಪೆಸಿಫಿಕ್ ದ್ವೀಪಗಳಲ್ಲಿ ತೀವ್ರ ಬರಗಾಲ ಬಂದು, ಕುಡಿಯುವ ನೀರು, ಆಹಾರಕ್ಕೂ ಪರದಾಡುವ ಪರಿಸ್ಥಿತಿ ಉಂಟಾಗಬಹುದು ಎಂದಿದೆ ವರದಿ.
ಚೆನ್ನೈ ಮಳೆಯ ಪ್ರಸ್ತಾಪ :ಈ ವರದಿಯಲ್ಲಿ ತಮಿಳುನಾಡಿನ ಮಳೆ, ಪ್ರವಾಹದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಈ ವರ್ಷದ ನವೆಂಬರ್‍ನಿಂದ ಆರಂಭವಾದ ದಾಖಲೆ ಮಳೆಯು ಇಲ್ಲಿ ನೂರಾರು ಮಂದಿಯ ಸಾವಿಗೆ ಕಾರಣವಾಗಿದೆ. 2015-16ರ ಎಲ್ ನಿನೋ ಇಫೆಕ್ಟ್ ಚೆನ್ನೈ ನಗರದ ಪ್ರವಾಹಕ್ಕೂ ನೇರ ಸಂಪರ್ಕವಿದೆಯೇ ಎಂಬುದರ ಬಗ್ಗೆ ವಿಸ್ತೃತ ವೈಜ್ಞಾನಿಕ ಅಧ್ಯಯನವಿನ್ನೂ ನಡೆದಿಲ್ಲ. ಆದರೆ, ಈಶಾನ್ಯ ಮಾರುತದ ಅವಧಿಯಲ್ಲಿ ದಕ್ಷಿಣ ಏಷ್ಯಾದಲ್ಲಿ ಸುರಿದ ಅಸಾಮಾನ್ಯ ಮಳೆಯು, ಭಾರತದ ಮೇಲೂ ಎಲ್‍ನಿನೋ ಪ್ರಭಾವ ಬೀರಿದೆ ಎಂಬುದನ್ನು ಸೂಚಿಸಿದೆ ಎಂದೂ ವರದಿ ಹೇಳಿದೆ.
ಮುಂದಿನ ವರ್ಷವೂ: ಡಿಸೆಂಬರ್ 2015ರಿಂದ ಫೆಬ್ರವರಿ 2016ರವರೆಗಿನ ಅವಧಿಯಲ್ಲಿ ದಕ್ಷಿಣ ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನೂ ವಿಶ್ವಸಂಸ್ಥೆಯ ವರದಿ ನೀಡಿದೆ. ವಿಶ್ವಸಂಸ್ಥೆ ತಾಪಮಾನ ಶೃಂಗದಲ್ಲಿ ಎಲ್ ನಿನೋ ಪ್ರಭಾವದ ಬಗ್ಗೆ ಚರ್ಚೆ ನಡೆದಿದ್ದು, ಕೆಲವು ದೇಶಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿವೆ. ಏಷ್ಯಾ ಪೆಸಿಫಿಕ್ ಪ್ರದೇಶಗಳ ಪ್ರಾದೇಶಿಕ ಸಹಕಾರದಿಂದ ಅಪಾಯವನ್ನು ತಪ್ಪಿಸಬಹುದು ಹಾಗೂ ಭವಿಷ್ಯದಲ್ಲಿ ಸುಸ್ಥಿರಅಭಿವೃದ್ಧಿಯನ್ನು ಸಾಧಿಸಬಹುದು ಎಂದು ವರದಿ ಅಭಿಪ್ರಾಯಪಟ್ಟಿದೆ.
ಎಲ್‍ನಿನೋ ಪ್ರಭಾವ ಎಲ್ಲೆಲ್ಲಿ ಬೀರಬಹುದು?: ಕಾಂಬೋಡಿಯಾ, ಮಧ್ಯ ಹಾಗೂ ದಕ್ಷಿಣ ಭಾರತ, ಪೂರ್ವ ಇಂಡೋನೇಷ್ಯಾ, ಮಧ್ಯ ಹಾಗೂ ದಕ್ಷಿಣ ಫಿಪ್ಪೀನ್ಸ್, ಮಧ್ಯ ಮತ್ತು ಈಶಾನ್ಯ ಥಾಯ್ ಲ್ಯಾಂಡ್. ಏನಿದು ಎಲ್ ನಿನೋ?: ಸಾಮಾನ್ಯವಾಗಿ ಪೂರ್ವದಿಂದ ಪಶ್ಚಿಮದತ್ತ ಬೀಸುವ ಗಾಳಿಯು ದುರ್ಬಲವಾಗುತ್ತಾ ಸಾಗುವುದರಿಂದ, ಸಮುದ್ರದ ಮೇಲ್ಭಾಗದ ತಾಪಮಾನ ಹೆಚ್ಚಾಗಿಸುತ್ತದೆ. ಇದರಿಂದಾಗಿ ಹವಾಮಾನದಲ್ಲಾಗುವ ಬದಲಾವಣೆಗೆ ಎಲ್‍ನಿನೋ ಎನ್ನುತ್ತಾರೆ. ಸಮುದ್ರದ ಆಳದ ಪದರದಲ್ಲಿರುವ ಉಷ್ಣತೆಯನ್ನು ಎಲ್‍ನಿನೋ ಮೇಲ್ಭಾಗಕ್ಕೆ ಹೊತ್ತುತರುತ್ತವೆ. ಇದು ಜಾಗತಿಕ ತಾಪಮಾನದೊಂದಿಗೆ ಸೇರಿದಾಗ, 1998ರಲ್ಲಿ ಉಂಟಾದಂತೆ, ದಾಖಲೆಯ ಬಿಸಿ ತಾಪಮಾನಕ್ಕೆ ಕಾರಣವಾಗುತ್ತದೆ. ಎಲ್‍ನಿನೋ ಎನ್ನುವುದು ದುರ್ಬಲವೂ ಆಗಿರಬಹುದು, ಪ್ರಬಲವೂ ಆಗಿರಬಹುದು. ಇದರ ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಆದ್ರ್ರತೆ ಹೆಚ್ಚಾದರೆ, ಇನ್ನು ಕೆಲವೆಡೆ ಒಣಹವೆ ತೀವ್ರವಾಗುತ್ತದೆ. ಕೆಲವು ದೇಶಗಳು ಭಾರಿ ಹಾನಿಗೊಳಗಾಗುತ್ತವೆ.
24 ಗಂಟೆಗಳಲ್ಲಿ ಭಾರಿ ಮಳೆ
ಎರಡು ಮೂರು ದಿನಗಳಿಂದ ಮಳೆಯ ಪ್ರಭಾವ ತಗ್ಗಿ, ಚೆನ್ನೈ ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಮತ್ತೆ ಮಳೆಯ ಭೀತಿ ಆವರಿಸಿದೆ. ಮುಂದಿನ 24 ಗಂಟೆಗಳಲ್ಲಿ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಜಾಗತಿಕ ತಾಪ ಒಪ್ಪಂದ?
ಪ್ಯಾರಿಸ್‍ನಲ್ಲಿ ನಡೆಯುತ್ತಿರುವ ವಿಶ್ವ ತಾಪಮಾನ ಶೃಂಗಕ್ಕೆ ಶನಿವಾರ ತೆರೆಬೀಳಲಿದೆ. 195 ದೇಶಗಳ ನಾಯಕರು ವಿಶ್ವಸಂಸ್ಥೆ ಹವಾಮಾನ ರಕ್ಷಣಾ ಒಪ್ಪಂದಕ್ಕೆ ಶನಿವಾರ ಅಂಕಿತ ಹಾಕುವ ನಿರೀಕ್ಷೆಯಿದೆ. “ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಒಂದು ದಿನ ತಡವಾಗಿ, ಅಂದರೆ ಶನಿವಾರ ಮಧ್ಯಾಹ್ನ ಒಪ್ಪಂದವನ್ನು ವಿಶ್ವನಾಯಕರ ಮುಂದಿಡಲಾಗುವುದು” ಎಂದು ಫ್ರಾನ್ಸ್ ವಿದೇಶಾಂಗ ಸಚಿವ ಲಾರೆಂಟ್ ಫೇಬಿಯಸ್ ತಿಳಿಸಿದ್ದಾರೆ.