ಕರ್ನಾಟಕ

ಮನೆಗೆ ನುಗ್ಗಿ ಕದ್ದು ಗೋವಾದಲ್ಲಿ ಮೋಜು ಮಾಡುತ್ತಿದ್ದ ಕಳ್ಳ ಕೊನೆಗೂ ಪೋಲೀಸರ ಬಲೆಗೆ ಬಿದ್ದ !

Pinterest LinkedIn Tumblr

arre

ಬೆಂಗಳೂರು: ಶ್ರೀಮಂತನ ಸೋಗಿನಲ್ಲಿ ಗರಿಗರಿ ಬಟ್ಟೆ ಧರಿಸಿ ಕಾರಿನಲ್ಲಿ ಓಡಾಡುವ ಈತ, ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಳ್ಳುತ್ತಾನೆ. ಬಳಿಕ ವಿಳಾಸ ಕೇಳುವ ನೆಪದಲ್ಲಿ ನೆರೆಹೊರೆಯವರನ್ನು ಮಾತನಾಡಿಸಿ ಆ ಮನೆಯಲ್ಲಿ ಯಾರಾದರೂ ಇದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುತ್ತಾನೆ. ಯಾರೂ ಇಲ್ಲವೆಂದು ಖಚಿತವಾದರೆ ಮರುದಿನವೇ ಆ ಮನೆಯ ಬೀಗ ಒಡೆದು ಹಣ–ಒಡವೆ ದೋಚುತ್ತಾನೆ.

ಅಂಥ ಚಾಲಾಕಿ ಕಳ್ಳನೊಬ್ಬ ಈಗ ವಿಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೇರೋಹಳ್ಳಿಯ ಶಿವರಾಜ್ ಅಲಿಯಾಸ್ ಕಪ್ಪೆ ಶಿವ (24) ಬಂಧಿತ ಆರೋಪಿ. ಈತ ಕುಖ್ಯಾತ ಮನೆಗಳ್ಳ ಕೊಮ್ಮಘಟ್ಟ ಮಂಜನ ಸಹಚರ. ಕಪ್ಪೆ ಶಿವನ ಬಂಧನದಿಂದ 13 ಪ್ರಕರಣಗಳು ಬಯಲಾಗಿದ್ದು, ₹ 21 ಲಕ್ಷ ಮೌಲ್ಯದ 750 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೂಲತಃ ಕುಣಿಗಲ್‌ ತಾಲ್ಲೂಕು ಜಿನ್ನಾಗರ ಗ್ರಾಮದ ಶಿವ, 2012ರಿಂದ ಕಳವು ಕೃತ್ಯ ಪ್ರಾರಂಭಿಸಿದ್ದ. ಜೈಲಿನಲ್ಲಿ ಆತನಿಗೆ ಕೊಮ್ಮಘಟ್ಟ ಮಂಜನ ಪರಿಚಯವಾಗಿತ್ತು. ಬಳಿಕ ಆರೋಪಿಗಳು ತಂಡ ಕಟ್ಟಿಕೊಂಡು ಹಗಲು ವೇಳೆಯಲ್ಲೇ ಮನೆಗಳಿಗೆ ಕನ್ನ ಹಾಕುತ್ತಿದ್ದರು. ‘ಆರೋಪಿ ಶಿವನ ವಿರುದ್ಧ ಕೆಂಗೇರಿ, ಜ್ಞಾನಭಾರತಿ, ಕುಂಬಳಗೋಡು, ರಾಜರಾಜೇಶ್ವರಿನಗರ, ಕಾಮಾಕ್ಷಿಪಾಳ್ಯ, ಅತ್ತಿಬೆಲೆ, ಜೆ.ಪಿ.ನಗರ, ತಾವರೆಕೆರೆ, ತಮಿಳುನಾಡಿನ ಹೊಸೂರು ಹಾಗೂ ಹುಡ್ಕೊ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಈತ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಆತನ ಬಂಧನಕ್ಕೆ ವಾರಂಟ್‌ಗಳು ಸಹ ಜಾರಿಯಾಗಿದ್ದವು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ವಿಮಾನದಲ್ಲಿ ಹಾರಾಟ: ‘ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕಳ್ಳತನ ಮಾಡುತ್ತಿದ್ದ ಶಿವ, ಕದ್ದ ಒಡವೆಗಳನ್ನು ಹೊಸೂರಿನಲ್ಲಿ ಗಿರವಿ ಇಡುತ್ತಿದ್ದ. ನಂತರ ವಿಮಾನದಲ್ಲಿ ಗೋವಾಕ್ಕೆ ಹಾರುತ್ತಿದ್ದ ಈತ, ಹಣ ಖಾಲಿ ಆಗುವವರೆಗೂ ಅಲ್ಲಿಯೇ ಇರುತ್ತಿದ್ದ. ಕದ್ದ ಆಭರಣಗಳ ಸಾಗಣೆಗಾಗಿಯೇ ಇತ್ತೀಚೆಗೆ ₹ 10 ಲಕ್ಷ ಕೊಟ್ಟು ಕಾರು ಖರೀದಿಸಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದರು.

ಪರ್ಸ್‌ ಕದ್ದವನಿಗೆ ಥಳಿತ: ಆರ್‌ಪಿಸಿ ಲೇಔಟ್‌ ನಾಲ್ಕನೇ ಅಡ್ಡರಸ್ತೆಯಲ್ಲಿ ಮಹಿಳೆಯಿಂದ ಪರ್ಸ್‌ ಕಿತ್ತುಕೊಂಡು ಓಡುತ್ತಿದ್ದ ಜಬೀರ್ ಪಾಷಾ (24) ಎಂಬಾತನನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು, ಹಿಗ್ಗಾಮುಗ್ಗಾ ಥಳಿಸಿ ವಿಜಯನಗರ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಶ್ಯಾಮಣ್ಣ ಗಾರ್ಡನ್‌ ನಿವಾಸಿಯಾದ ಪಾಷಾ, ಬೆಳಿಗ್ಗೆ 7.30ರ ಸುಮಾರಿಗೆ ಆರ್‌ಪಿಸಿ ಲೇಔಟ್‌ಗೆ ಬಂದಿದ್ದ. ಈ ವೇಳೆ ಮಹಿಳೆಯೊಬ್ಬರು ಮಗನ ಜತೆ ಮದುವೆ ಸಮಾರಂಭಕ್ಕೆ ಹೊರಟಿದ್ದರು. ಅವರನ್ನು ಹಿಂಬಾಲಿಸಿದ ಪಾಷಾ, ಪರ್ಸ್‌ ಕಿತ್ತುಕೊಂಡು ಓಡಲಾರಂಭಿಸಿದ. ತಾಯಿ–ಮಗನ ಚೀರಾಟ ಕೇಳಿ ನೆರವಿಗೆ ಬಂದ ಸ್ಥಳೀಯರು, ಆತನನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾದರು.

ಆರೋಪಿಯಿಂದ ಪರ್ಸ್‌ ಕಸಿದು ಕೊಂಡು ಮಹಿಳೆಗೆ ಹಿಂದಿರುಗಿಸಿದ ಸ್ಥಳೀಯರು, ನಂತರ ಆತನನ್ನು ಪೊಲೀಸರ ಸುಪರ್ದಿಗೆ ಒಪ್ಪಿಸಿದರು. ಅದರಲ್ಲಿ ಎರಡು ಚಿನ್ನದ ಓಲೆಗಳು ಹಾಗೂ 400 ರೂಪಾಯಿ ನಗದು ಇತ್ತು.

Write A Comment