ಕನ್ನಡ ವಾರ್ತೆಗಳು

ಕೊಂಚಾಡಿಯಲ್ಲಿ ಸಾಮೂಹಿಕ ಯೋಗ ಪ್ರದರ್ಶನ .

Pinterest LinkedIn Tumblr

ayush_yoga_photo

ಮ೦ಗಳೂರು ಡಿ.14: ಡಿಸೆಂಬರ್ 19 ಮತ್ತು 20 ರಂದು ಎರಡು ದಿವಸಗಳವರೆಗೆ ಆಯುಷ್ ಇಲಾಖೆ ಆಶ್ರಯದಲ್ಲಿ ನಗರದ ಪಿಲಿಕುಳ ನಿಸರ್ಗಧಾಮದಲ್ಲಿ ಆಯುಷ್ ಹಬ್ಬ ನಡೆಯಲಿದ್ದು, ಹಬ್ಬದ ಪ್ರಾಮುಖ್ಯತೆಯನ್ನು ತಿಳಿಸುವ ಸಲುವಾಗಿ ಕೊಂಚಾಡಿ ಶ್ರೀ ರಾಮಾಶ್ರಮ ಶಾಲೆಯಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಜರುಗಿತು.

ಕೊಂಚಾಡಿ ಶ್ರೀ ರಾಮಾಶ್ರಮ ಶಾಲಾ ಹಳೆ ವಿದ್ಯಾರ್ಥಿ ಸಂಘವು ಏರ್ಪಡಿಸಿರುವ ಯೋಗ ಪ್ರದರ್ಶನದಲ್ಲಿ ನೂರಕ್ಕಿಂತಲೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿ ದ್ದರು. ಮುಂಜಾನೆಯ ಮಂಜು ಕವಿದ ವಾತಾವರಣದಲ್ಲಿ ತಂಗಾಳಿಯನ್ನು ಸವಿಯುತ್ತಾ, ವಿಶಾಲವಾದ ಬಯಲಿನಲ್ಲಿ ನಡೆದ ಪ್ರದರ್ಶನದಲ್ಲಿ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಯೋಗಾಸನ ಪ್ರಾಣಾಯಾಮ, ಮುದ್ರೆಗಳ ವಿವಿಧ ಪ್ರಕಾರಗಳ ಬಗ್ಗೆ ತಿಳಿಸಿದರು.

ಆಯುಷ್ ಫೌಂಡೇಷನ್ ಅಧ್ಯಕ್ಷರಾದ ಡಾ:ಆಶಾಜ್ಯೋತಿ ರೈಯವರು ಭಾಗವಹಿಸಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಯೋಗವು ಸಾವಿರಾರು ವರ್ಷಗಳ ಹಿಂದೆ ನಮ್ಮ ನೆಲದಲ್ಲಿ ಹುಟ್ಟಿ ಇದೇ ಜಗತ್ತನ್ನು ಪಸರಿಸಿದೆ. ವಿಶ್ವದ ಜನತೆಗೆ ಆರೋಗ್ಯವನ್ನು ಕಲ್ಪಿಸಿ ಸಾಸ್ಥ್ಯ ಕಾಪಾಡುತ್ತಿದೆ. ಜೊತೆಗೆ ಆಯುರ್ವೇದವೂ ಇಲ್ಲೇ ಹುಟ್ಟಿಕೊಂಡಿದೆ. ಆದರೆ ನಾವಿಂದು ಸಣ್ಣ ಪುಟ್ಟ ಖಾಯಿಲೆಗೂ ಆಸ್ಪತ್ರೆಗೆ ತೆರಳುತ್ತಿದ್ದೇವೆ. ಮನೆಯಂಗಳದಲ್ಲಿ ಔಷಧಿಯ ಸಸ್ಯಗಳನ್ನು ಬೆಳೆಸಿ ನಮ್ಮ ಆರೋಗ್ಯವನ್ನು ಕಾಪಾಡಬೇಕೆಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ:ದೇವದಾಸ್ ಪುತ್ರನ್ ಆರೋಗ್ಯವನ್ನು ಕಾಪಾಡುವುದರ ಬಗ್ಗೆ ಆಯುಷ್ ಇಲಾಖೆ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ಪಿಲಿಕುಳದಲ್ಲಿ ನಡೆಯಲಿರುವ ಆಯುಷ್ ಹಬ್ಬದಲ್ಲಿ ಕೊಂಚಾಡಿ ಯೋಗ ಕೇಂದ್ರದಿಂದ ಸುಮಾರು 50 ಕ್ಕಿಂತಲೂ ಅಧಿಕ ಮಂದಿ ಭಾಗವಹಿಸಲಿರುವರು. ಎಂದು ತಿಳಿಸಿದರು.

Write A Comment