ಕರ್ನಾಟಕ

ಮರಳು ಮಾಫಿಯಾ ಅಟ್ಟಹಾಸ : ಎಸಿ ಮೇಲೆ ಹಲ್ಲೆ

Pinterest LinkedIn Tumblr

halle

ಪಾಂಡವಪುರ,ಡಿ.14: ಮರಳು ಮಾಫಿಯಾ ಅಟ್ಟಹಾಸ ಮುಂದುವರೆದಿದೆ. ಅಕ್ರಮ ಮರಳು ಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ನಿಯಂತ್ರಿಸಲು ,ಮುಂದಾಗುವ ಅಧಿಕಾರಿಗಳು ಪೊಲೀಸರ ಮೇಲೆ ಹಲ್ಲೆ ಯತ್ನಗಳು ನಿರಂತರವಾಗಿ ಸಾಗಿವೆ. ಅಕ್ರಮ ಮರಳು ಅಡ್ಡೆಯ ಮೆಲೆ ದಾಳಿ ನಡೆಸಿದ ಉಪವಿಭಾಗಾಧಿಕಾರಿ ಮೇಲೆ ಮರಳು ದಂಧೆಕೋರರು ಹಲ್ಲೆ ನಡೆಸಿದ ಘಟನೆ ರಾತ್ರಿ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಬಳಿ ನಡೆದಿದೆ.

ಕಳೆದ ರಾತ್ರಿ ಪಾಂಡವಪುರ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ ಮತ್ತವರ ಸಿಬ್ಬಂದಿ ತಮಗೆ ತಿಳಿದುಬಂದ ಖಚಿತ ಮಾಹಿತಿ ಮೇರೆಗೆ ಚಿಕ್ಕಬ್ಯಾಡರಹಳ್ಳಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿನ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಒಂದು ಲಾರಿಯನ್ನು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆದರೆ, ದಂಧೆಕೋರರು ಉಪವಿಭಾಗಾಧಿಕಾರಿಗಳನ್ನು ಹಿಂಬಾಲಿಸಿ ಬಂದು ಲಾರಿಯನ್ನು ಬಿಟ್ಟು ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪದ ನಾಗರಾಜು ಮತ್ತು ದಂಧೆಕೋರರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ರೊಚ್ಚಿಗೆದ್ದ ದಂಧೆಕೋರರು ಉಪವಿಭಾಗಾಧಿಕಾರಿಗಳನ್ನು ಎಳೆದಾಡಿ, ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಪಾಂಡವಪುರ ಪೊಲೀಸರು ಸ್ಥಳ್ಕಕೆ ಆಗಮಿಸು ತ್ತಿದ್ದಂತೆಯೇ ದುಷ್ಕರ್ಮಿಗಳು ಪರಾರಿಯಾಗಿ ದ್ದಾರೆ. ಈ ವೇಳೆ ಮರಳು ತುಂಬಿದ್ದ ಒಂದು ಲಾರಿ ಮತ್ತು ಸ್ಕಾರ್ಪಿಯೋ ಕಾರು ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿದ್ದೇಗೌಡ ಎಂಬುವವನ್ನು ಬಂಧಿಸಲಾಗಿದೆ.

ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಭಾರೀ ಪ್ರತಿಭಟನೆ, ರಸ್ತೆತಡೆ: ಜಿಲ್ಲೆಯಲ್ಲಿ ಮರಳು ಮಾಫಿಯಾ ದಂಧೆಕೊರರ ಹಾವಳಿ ಹೆಚ್ಚಾಗಿದ್ದು ಅದನ್ನು ತಡೆಯಲು ಮುಂದಾದ ಉಪವಿಭಾಗಾಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಖಂಡಿಸಿ ಇಂದು ಬೆಳಿಗ್ಗೆ ಪಟ್ಟಣದಲ್ಲಿ ಹಸಿರು ಸೇನೆ ಮತ್ತು ಪ್ರಗತಿಪರ ಸಂಘಟನೆಗಳು ರಸ್ತೆತಡೆ ನಡೆಸಿ ಪ್ರತಿಭಟಿಸಿದವು.

ಸರ್ಕಾರ ಮರಳು ದಂಧೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಎಸಿ ಮೇಲೆ ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾಕಾರರು ರಸ್ತೆತಡೆ ನಡೆಸಿದ್ದರಿಂದ ಪಟ್ಟಣದ ಮೈಸೂರು-ಮಂಡ್ಯ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಹಿಂದೆಯೂ ಕೂಡ ಅಕ್ರಮ ಮರಳು ಸಾಗಾಣಿಕೆ ತಡೆಯಲು ಯತ್ನಿಸಿದ ತಹಸೀಲ್ದಾರ್, ಸಬ್‌ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್ಪಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆಗಳು ಮಂಡ್ಯ ಮತ್ತು ಕೋಲಾರಗಳಲ್ಲಿ ಸಂಭವಿಸಿದ್ದವು. ಕೋಲಾರದಲ್ಲಿ ಮರಳು ದಂಧೆ ತಡೆಯಲು ಯತ್ನಿಸಿದ್ದ ತಹಸೀಲ್ದಾರ್ ಮೇಲೆ ಹ್ಲಲೆನಡೆಲಾಗಿತ್ತು. ಮದ್ದೂರು ಬಳಿ ಸಬ್‌ಇನ್ಸ್‌ಪೆಕ್ಟರ್ ಒಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಮಹಿಳಾ ಡಿವೈಎಸ್ಪಿ ಒಬ್ಬರ ಮೇಲೆ ಲಾರಿ ಹತ್ತಿಸುವ ಪ್ರಯತ್ನವನ್ನೂ ಕೂಡ ಮಾಡಲಾಗಿತ್ತು. ದಿನದಿಂದ ದಿನಕ್ಕೆ ಅಕ್ರಮ ಕರಳು ಅಟ್ಟಹಾಸ ಹೆಚ್ಚಾಗ ತೊಡಗಿರುವುದು ಆತಂಕದ ವಿಷಯವಾಗಿದೆ.

Write A Comment