ಕರ್ನಾಟಕ

ಎಂಎಲ್‌ಎಗಳ ವಾರ್ಷಿಕ ಅನುದಾನ 448 ಕೋಟಿ : ಆದರೂ ಉದ್ಧಾರವಾಗ್ತಿಲ್ಲನಮ್ಮ ಗ್ರಾಮಗಳು…

Pinterest LinkedIn Tumblr

villageಬೆಂಗಳೂರು,ಡಿ.11- ಒಂದು ವಿಧಾನ ಸಭಾ ಕ್ಷೇತ್ರದ ವಾರ್ಷಿಕ ಅನುದಾನ 2 ಕೋಟಿ ರೂ. ಸೇರಿದಂತೆ ರಾಜ್ಯದ 224 ಕ್ಷೇತ್ರಗಳಿಗೆ ಒಟ್ಟು ವಾರ್ಷಿಕ ಅನುದಾನ 448 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತಿದ್ದರೂ, ವಿಧಾನ ಸಭಾ ಕ್ಷೇತ್ರಗಳಲ್ಲಿನ ಗ್ರಾಮೀಣ ಪ್ರದೇಶಗಳು ಮಾತ್ರ ಇನ್ನೂ ಅಭಿವೃದ್ಧಿಯಾಗದಿರುವುದು ವಿಪರ್ಯಾಸ.  ಪ್ರತಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಶಾಸಕರ ವಾರ್ಷಿಕ ಅನುದಾನ 2 ಕೋಟಿ ರೂ. ಮಂಜೂರು ಮಾಡುತ್ತಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ 448 ಕೋಟಿ ರೂ. ವಾರ್ಷಿಕ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ, ಅಭಿವೃದ್ಧಿ ಮಾತ್ರ ಶೂನ್ಯ ಎಂದೇ ಹೇಳಬಹುದು.

ಕುಡಿಯುವ ನೀರು, ಶೌಚಾಲಯ, ಬೀದಿದೀಪ, ರಸ್ತೆ, ವಿದ್ಯುತ್, ಸಾರಿಗೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಮೂಲ ಸೌಕರ್ಯವಗಳೇ ಇಲ್ಲದಿರುವ ಅದೆಷ್ಟೋ ಗ್ರಾಮಗಳಿವೆ. ಆದರೆ, ಸೌಲಭ್ಯ ವಂಚಿತ ಗ್ರಾಮಗಳತ್ತ ರಾಜಕಾರಣಿಗಳು ಮತ್ತು ಅಧಿಕಾರಿಗಳು ಚಿತ್ತ ಹರಿಸದಿರುವುದು ದುರದೃಷ್ಟಕರ ಸಂಗತಿ.

ಶಾಸಕರ ಅನುದಾನ ಏನಾಗುತ್ತಿದೆ:

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ಬಿಡುಗಡೆ ಮಾಡುತ್ತಿರುವ 2 ಕೋಟಿ ರೂ. ಶಾಸಕರ ಅನುದಾನ ಏನಾಗುತ್ತಿದೆ. ಒಂದು ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಅನುದಾನವೇ 2 ಕೋಟಿ ರೂ. ಬಿಡುಗಡೆಯಾದರೆ, ಇನ್ನುಳಿದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಅನುದಾನವೂ ಬೇರೆ ಬರುತ್ತದೆ. ಒಂದು ಕ್ಷೇತ್ರದಲ್ಲಿ ಗರಿಷ್ಠ ಎಂದರೆ ಸುಮಾರು 220 ರಿಂದ 240 ಗ್ರಾಮಗಳು ಬರಬಹುದು. ಆದರೆ, ಇಷ್ಟು ಅನುದಾನದಲ್ಲಿ ಈ ಗ್ರಾಮಗಳಲ್ಲಿನ ಜನತೆಗೆ ಕನಿಷ್ಠ ಮೂಲ ಸೌಕರ್ಯಿ ಒದಗಿಸುವಲ್ಲಿ ನಮ್ಮ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.  ಅನುದಾನದ ಹಣ ಸೋರಿಕೆ: ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಮೂಲ ಸೌಲಭ್ಯ ಕಲ್ಪಸಲು ಹಮ್ಮಿಕೊಳ್ಳುವ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾಗುತ್ತಿರುವ ಹಣ ಮಧ್ಯದಲ್ಲೇ ಸೋರಿಕೆಯಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಹೆಚ್ಚುತ್ತಿರುವ ಕಮಿಷನ್ ದಂಧೆಯಿಂದ ಅನುದಾನದ ಹಣ ಸೋರಿಕೆಯಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಿಂದಲೇ ಕೇಳಿಬರುತ್ತಿದೆ.

ಒಂದು ಕಾಮಗಾರಿಗೆ ಮಂಜೂರಾದ ಹಣದಲ್ಲಿ ಗುತ್ತಿಗೆ ಪಡೆದ ಗುತ್ತಿಗೆದಾರರು ಮತ್ತು ಆ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕನಿಷ್ಠ ಕಮಿಷನ್ ಕೊಡಲೇ ಬೇಕು ಅಂದಾಗ ಮಾತ್ರ ಆ ಕಾಮಗಾರಿಯನ್ನು ಗುತ್ತಿಗೆ ಪಡೆಯಲು ಸಾಧ್ಯ. ಕಮಿಷನ್ ನೀಡದಿದ್ದರೆ, ಕಾಮಗಾರಿ ಗುತ್ತಿಗೆ ನೀಡುವುದಿಲ್ಲ ಎಂದು ಅಧಿಕಾರಿಗಳೇ ನೇರವಾಗಿ ಹೇಳುತ್ತಾರೆಂದು ಹೆಸರ್ಹೇಲಳಲು ಇಚ್ಛಿಸದ ಗುತ್ತಿಗೆದಾರರೊಬ್ಬರು ಹೇಳುತ್ತಾರೆ.

ಕನಿಷ್ಠ ಶೇ.30 ರಷ್ಟು ಕಮಿಷನ್:

ಪ್ರತಿ ಕಾಮಗಾರಿಗೆ ಅಧಿಕಾರಿಗಳೇ ಕನಿಷ್ಠ ನೂರಕ್ಕೆ 30ರಷ್ಟು ಕಮಿಷನ್ ಕೇಳುತ್ತಾರೆ. ಕಮಿಷನ್ ಕೊಡದಿದ್ದರೆ, ಬಿಲ್ ಪಾಸ್ ಮಾಡುವುದಿಲ್ಲ. ಅಧಿಕಾರಿಗಳಿಗೆ ಶೇ.30ರಷ್ಟು ಕಮಿಷನ್ ಕೊಟ್ಟರೆ, ಇನ್ನು ಜನಪ್ರತಿನಿಧಿಗಳಿಗೆ ಎಷ್ಟು ಕೊಡಬೇಕು. ಕಾಮಗಾರಿಗೆ ಮೆಟಿರಿಯಲ್ ಏನು ತರಬೇಕು. ಎಷ್ಟರ ಮಟ್ಟಿಗೆ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಬೇಕು ನೀವೇ ಹೇಳಿ ಎಂದು ಗುತ್ತಿಗೆದಾರರೊಬ್ಬರು ಈಸಂಜೆ ಪ್ರತಿನಿಧಿಯನ್ನೇ ಪ್ರಶ್ನಿಸಿದರು.

ಉನ್ನತಾಧಿಕಾರಿಗಳಿಂದಲೇ ಹೆಚ್ಚು ಭ್ರಷ್ಟಾಚಾರ:
ಇತ್ತಿಚಿನ ದಿನಗಳಲ್ಲಿ ಹಲವು ಇಲಾಖೆಗಳಲ್ಲಿ  ಆಯಾ ಇಲಾಖೆಗಳ ಉನ್ನತ ಅಧಿಕಾರಿಗಳು ಮತ್ತು ಉನ್ನತ ಮಟ್ಟದ ರಾಜಕಾರಣಿಗಳೇ ಹೆಚ್ಚಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಅಭಿವೃದ್ಧಿ ಕಾಮಗಾರಿಗಳ ಹಣದಲ್ಲಿ ಸೋರಿಕೆ ಹೆಚ್ಚಾಗುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಜನತೆ ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆಂದು ಹಿರಿಯ ಶಾಸಕರೊಬ್ಬರು ಹೇಳುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಿಗೆ ಶೌಚಾಲಯ ನಿರ್ಮಿಸುವಲ್ಲಿ ವಿಫಲವಾಗಿರುವ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಸಮಸ್ಯೆಗಳು ತಾತನ ಕಾಲದಿಂದಲೂ ಹಾಗೆ ಇವೆ:ಎಷ್ಟು ಅನುದಾನ ಬಂದರೇನು, ಎಷ್ಟು ಖರ್ಚು ಮಾಡಿದರೇನು, ಯಾವ ಎಂಎಲ್‌ಎ ಇದ್ದರೇನು ನಮ್ಮ ಕಷ್ಟಕ್ಕೆ ಯಾರೂ ಬರೋರು ಇಲ್ಲ. ಇಷ್ಟು ಹಣ ಬಂದಿದೆ, ಅಷ್ಟು ಹಣ ಬಂದಿದೆ ಎಂದು ಹೇಳುತ್ತಾರೆ. ಆದರೆ, ಆ ಹಣದಿಂದ ಏನೂ ಅಭಿವೃದ್ಧಿಯಾಗಿಲ್ಲ. ಎಲ್ಲಾ ಸಮಸ್ಯೆಗಳೂ ನಮ್ಮ ತಾತನ ಕಾಲದಿಂದಲೂ ಹಾಗೇ ಉಳಿದಿವೆ. ಏನು ಬದಲಾವಣೆ ಯಾಗಿಲ್ಲ. ಈ ಎಲ್ಲಾ ಪ್ರಶ್ನೆಗಳು ಕೇಳಿ ಬಂದಿದ್ದು, ಸರ್ಕಾರದ ಅನುದಾನ ಬಿಡುಗಡೆಯಾಗುತ್ತಿರುವ ಬಗ್ಗೆ ಗ್ರಾಮೀಣ ಪ್ರದೇಶದ ಜನರು  ಉಸಿರುಬಿಡದಂತೆ ಸರಸರನೆ ಹೇಳುತ್ತಿದ್ದ ಮಾತುಗಳಲ್ಲಿ.  ಹೌದು… ಸತ್ಯದ ಮಾತು. ಕುಡಿಯುವ ನೀರು, ಬೀದಿ ದೀಪ, ಶೌಚಾಲಯ, ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿರುವ ಗ್ರಾಮಗಳು ಇನ್ನೂ ಜೀವಂತವಾಗಿವೆ. ಗ್ರಾಮಗಳಲ್ಲಿ ಈವತ್ತಿಗೂ ಕುಡಿಯುವ ನೀರಿನ ಸಮಸ್ಯೆ ಶೌಚಾಲಯದ ಸಮಸ್ಯೆಗಳು ಎದ್ದುಕಾಣುತ್ತಿವೆ. ಈ ಬಗ್ಗೆ ಯಾವ ಅಧಿಕಾರಿಗಳು ಮತ್ತು ಯಾವ ಎಂಎಲ್‌ಎಗಳೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ನಮ್ಮ ಕಷ್ಟ ನಾವೇ ಅನುಭವಿಸಬೇಕು ಬಿಡಪ್ಪ… ನಿಮ್ಮತ್ರ ಮಾತಾಡಿದ್ರೆ ನಮ್ಮ ಕಷ್ಟ ಏನ್ ಬಗೆಹರಿಸ್ತೀರಾ… ಎಂದು ಪ್ರಶ್ನಿಸುತ್ತಾ ಜಾಗ ಖಾಲಿಮಾಡಿದರು.

ಕ್ಷೇತ್ರ ಅಭಿವೃದ್ಧಿಗೆ ಕನಿಷ್ಠ 9 ಕೋಟಿ ಅಗತ್ಯ:ಪ್ರಸ್ತುತ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಶಾಸಕರ ವಾರ್ಷಿಕ ಅನುದಾನ 2 ಕೋಟಿ ರೂ. ಮಂಜೂರು ಮಾಡುತ್ತಿದೆ. ಇದರಿಂದ ಗ್ರಾಮಗಳ ಅಭಿವೃದ್ಧಿ ಮತ್ತು ಮೂಲ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಕನಿಷ್ಠ ವಾರ್ಷಿಕ ಅನುದಾನ 9 ಕೋಟಿ ರೂ. ಅಗತ್ಯ ಎಂದು ಮದ್ದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಈ ಕುರಿತು ಈ ಸಂಜೆ ಪ್ರತಿನಿಧಿಯೊಂದಿಗೆ ಪ್ರತಿಕ್ರಿಯಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸಮಸ್ಯೆಗಳು ಕಾಡುತ್ತಿದ್ದು, ಇವುಗಳ ಜೊತೆಗೆ ಕ್ಷೇತ್ರದಲ್ಲಿನ ಗ್ರಾಮಗಳ ಅಭಿವೃದ್ಧಿ ಪಡಿಸಲು ಶಾಸಕರ ವಾರ್ಷಿಕ ಕನಿಷ್ಠ ಅನುದಾನ 9 ಕೋಟಿ ರೂ. ಅಗತ್ಯವಿದೆ ಎಂದು ತಿಳಿಸಿದರು.

Write A Comment