ಕರ್ನಾಟಕ

ರಾಜ್ಯದಲ್ಲಿ ಮತ್ತೆ ಅಗ್ಗದ ಮದ್ಯ ಮಾರಾಟ ಚಿಂತನೆ

Pinterest LinkedIn Tumblr

beer_glasses_bottle_drops_bಬೆಂಗಳೂರು: ಅಗ್ಗದ ಮದ್ಯಕ್ಕೆ ಅವಕಾಶ ನೀಡುವುದಿಲ್ಲ ಎನ್ನುತ್ತಾ ಬಂದಿದ್ದ ರಾಜ್ಯ ಸರ್ಕಾರ ಇದೀಗ ಗುಣಮಟ್ಟದಲ್ಲಿ ರಾಜಿಯಾಗದಂತೆ ಕಡಿಮೆ ಬೆಲೆಯ ಮದ್ಯ ತಯಾರಿಕೆ ಬಗ್ಗೆ ಕಂಪನಿಗಳೊಂದಿಗೆ ಚರ್ಚೆ ನಡೆಸಲು ಮುಂದಾಗಿದೆ.

ಈ ವಿಚಾರವನ್ನು ಸ್ವತಃ ಅಬಕಾರಿ ಮತ್ತು ಮುಜರಾಯಿ ಸಚಿವ ಮನೋಹರ ಎಚ್‌.ತಹಶೀಲ್ದಾರ್‌ ಅವರೇ ತಿಳಿಸಿದ್ದಾರೆ. ಗ್ರಾಹಕರಿಗೆ ಅಗ್ಗದ ಮದ್ಯ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಲೂ ಆಲೋಚನೆ ಇದೆ. ಆದರೆ, ಅಗ್ಗದ ಮದ್ಯ ಮಾರುಕಟ್ಟೆಗೆ ತಂದರೂ ಗುಣಮಟ್ಟ ಕಡಿಮೆಯಾಗಬಾರದು. ಆ ರೀತಿಯಲ್ಲಿ ಅಗ್ಗದ ಮದ್ಯ ತಯಾರಿಕೆ ಸಾಧ್ಯವೇ ಎಂಬುದರ ಬಗ್ಗೆ ವಿವಿಧ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಭಾನುವಾರ ಶ್ರೀನಿವಾಸ ಬಲಿಜ ಸಂಘ ಐಟಿಐ ನಗರದ ಪುರಭವನದಲ್ಲಿ ಆಯೋಜಿಸಿದ್ದ ಸಂಘದ 35ನೇ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಪ್ರಸ್ತುತ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿ.(ಎಂಎಸ್‌ಐಎಲ್‌) ಮೂಲಕ 456 ಮದ್ಯ ಮಾರಾಟ ಮಳಿಗೆಗಳನ್ನು ಆರಂಭಿಸಲಾಗಿದೆ. ಇವುಗಳಲ್ಲಿ 407 ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಜಾಗದ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಉಳಿದವು ಕಾರ್ಯಾರಂಭಿಸಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಎಂಎಸ್‌ಐಎಲ್‌ ಮಳಿಗೆಗಳನ್ನು ತೆರೆಯಲಾಗುವುದು ಎಂದು ಮಾಹಿತಿ ನೀಡಿದರು.

ನೀರಾ ಬಳಕೆಗೆ ಅಧ್ಯಯನ:
ನೀರಾ ಪ್ರೋತ್ಸಾಹಿಸುವ ದೃಷ್ಟಿಯಿಂದ ಅದನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬ ಬಗ್ಗೆ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೀರಾವನ್ನು ಬೆಳಗಿನ ಸಮಯದಲ್ಲಿ ಸೇವಿಸುವುದು ಒಳ್ಳೆಯದು ಎಂದು ಹೇಳುತ್ತಾರೆ. ಹಾಗಾಗಿ ಯಾವ ರೀತಿ ಬಳಕೆ ಮಾಡುವುದು ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಈ ಬಾರಿ 15 ಸಾವಿರ ಕೋಟಿ ರೂ. ಅಬಕಾರಿ ಸುಂಕ ವಸೂಲಿ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಅಕ್ರಮ ಮದ್ಯ ಸಾಗಣೆ ತಡೆಗೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಹೊರ ರಾಜ್ಯಗಳಿಂದ ಬರುವ ಅಕ್ರಮ ಮದ್ಯ ತಡೆಗೂ ಕ್ರಮ ವಹಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಸಾಮಾಜಿಕ ಕಾರ್ಯಕರ್ತೆ ಮಮತಾ ದೇವರಾಜ್‌, ಬಿಬಿಎಂಪಿ ಸದಸ್ಯರಾದ ಜಿ.ಪದ್ಮಾವತಿ, ಶ್ರೀಕುಮಾರ್‌, ಆರ್‌.ವಿ. ಯುವರಾಜ್‌, ಸರೋಜನಾಯ್ಡು, ಸಂಪತ್‌ಕುಮಾರ್‌, ಎಂ.ಬಿ.ದ್ವಾರಕಾನಾಥ್‌ ಮತ್ತಿತರರನ್ನು ಸನ್ಮಾನಿಸಲಾಯಿತು.

1760 ಹೊಸ ಬಾರ್‌ಗಳಿಗೆ ಲೈಸೆನ್ಸ್‌?
ರಾಜ್ಯದಲ್ಲಿ 1760 ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಚಿಂತನೆ ನಡೆದಿದೆ ಎಂದು ಅಬಕಾರಿ ಸಚಿವ ಮನೋಹರ ತಹಸೀಲ್ದಾರ್‌ ತಿಳಿಸಿದ್ದಾರೆ.
1992ರಿಂದ ಈವರೆಗೂ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಿರಲಿಲ್ಲ. ಆದರೆ, ಜನಸಂಖ್ಯೆ ಹೆಚ್ಚಳದಿಂದಾಗಿ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದೆ. ಕುಡಿತ ಬಿಡಿಸಲಂತೂ ಸಾಧ್ಯವಿಲ್ಲ. ಬದಲಿಗೆ ಗ್ರಾಹಕರಿಗೆ ಸುಲಭವಾಗಿ ಮದ್ಯ ದೊರೆಯುವಂತೆ ಮಾಡಿದರೆ ಅಕ್ರಮ ಮಾರಾಟ ತಡೆಯಬಹುದು. ಇದಕ್ಕೆ ಬಾರುಗಳ ಸಂಖ್ಯೆ ಹೆಚ್ಚಿಸುವುದೊಂದೇ ದಾರಿಯಾಗಿದೆ. ಹಾಗಾಗಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಂತಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
&ಉದಯವಾಣಿ,

Write A Comment