ಕನ್ನಡ ವಾರ್ತೆಗಳು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಎಡೆ ಸ್ನಾನ : ಬಿಗಿ ಬಂದೋಬಸ್ತ್

Pinterest LinkedIn Tumblr

03MADESNANA1

ಸುಬ್ರಹ್ಮಣ್ಯ, ಡಿ.15 : ನಾಡಿನ ಪ್ರಸಿದ್ಧ ದೇಗುಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ನಾಳೆಯಿಂದ ಮೂರು ದಿನಗಳ ಕಾಲ ಎಡೆಸ್ನಾನಕ್ಕೆ ಧಾರ್ಮಿಕ ದತ್ತಿ ಇಲಾಖೆ ಅವಕಾಶ ಕಲ್ಪಿಸಿದ್ದು, ಈ ಬಗ್ಗೆ ಕೆಲವು ವಿರೋಧಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಲಾಗಿದೆ.

ಈ ನಡುವೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಎಡೆಸ್ನಾನ ನಿಷೇಧಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಹಾಗೂ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಇತರೆ ಸಂಘಟನೆಗಳು ಸೋಮವಾರ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗ ಸೋಮವಾರ ಧರಣಿ ನಡೆಸಿದವು.

ಇಂದಿನ ವೈಜ್ಞಾನಿಕ ಯುಗದಲ್ಲೂ ಶೋಷಿತ ಜನರನ್ನು ಮಡೆಸ್ನಾನ, ಎಡೆಸ್ನಾನದ ನೆಪದಲ್ಲಿ ಮೂಢನಂಬಿಕೆಗಳತ್ತ ತಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಒಂದು ಸಮುದಾಯದವರು ಊಟ ಮಾಡಿದ ಎಂಜಲೆಲೆಯ ಮೇಲೆ ಉರುಳಾಡಿದರೆ ರೋಗ ವಾಸಿಯಾಗುತ್ತದೆ ಎಂಬುದು ಯಾವ ಸಿದ್ಧಾಂತ ಎಂಬುದನ್ನು ನಾವೆಲ್ಲ ಒಂದು ಎಂದು ಹೇಳುವವರು ಉತ್ತರಿಸಬೇಕಾಗಿದೆ ಎಂದು ಧರಣಿ ನಿರತರು ಹೇಳಿದರು.

ಬಳಿಕ ಎಡೆಸ್ನಾನ ನಿಷೇಧಿಸಬೇಕು, ಮೂಢ ನಂಬಿಕೆ ನಿಷೇಧ ಕಾಯ್ದೆ ಶೀಘ್ರ ಜಾರಿಗೆ ತರಬೇಕು, ಪಂಕ್ತಿ ಭೇದ ನಿಷೇಧಿಸಬೇಕು ಮುಂತಾದ ಬೇಡಿಕೆಗಳಿರುವ ಮನವಿಯನ್ನು ತಹಶೀಲ್ದಾರ್ ಪ್ರಸನ್ನಮೂರ್ತಿ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.

Write A Comment